ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಸಿಗಡಿ ಕೆರೆಯ ಬಾವಿ

ಕಾರ್ಕಳ, ಡಿ. 7 : ಕಾರ್ಕಳದ ಸಿಗಡಿ ಕೆರೆ ಪಕ್ಕದಲ್ಲೇ ಇರುವ ಕುಡಿಯುವ ನೀರಿನ ಬಾವಿಯೊಂದು ಸಮರ್ಪಕ ನಿರ್ವಹಣೆಯಿಲ್ಲದೆ ಅಪಾಯವನ್ನು ಆಹ್ವಾನಿಸುತ್ತಿದೆ.
7 ವರ್ಷದ ಹಿಂದೆ ಪುರಸಭೆ ಸುಮಾರು 12 ಲ.ರೂ. ವೆಚ್ಚದಲ್ಲಿ ನಿರ್ಮಿಸಿದ ಈ ಬಾವಿಯ ಸುತ್ತಲೂ ಕಳೆಗಿಡಗಳು ಬೆಳೆದು ಈಗ ಬಾವಿ ಕಾಣಿಸುತ್ತಿಲ್ಲ. ಬಾವಿಯ ಪಕ್ಕದಿಂದಲೇ ಸಿಗಡಿ ಕೆರೆಯಲ್ಲಿ ಮೀನು ಹಿಡಿಯಲು ಹೋಗುವವರು ಓಡಾಡುತ್ತಿದ್ದಾರೆ. ಎಲ್ಲಿಯಾದರೂ ಆಯತಪ್ಪಿ ಈ ಬಾವಿಗೆ ಬಿದ್ದರೆ ಗೊತ್ತೇ ಆಗಲಿಕ್ಕಲಿಲ್ಲ.ಪ್ರಾಣಿಗಳು ಬೀಳುವ ಸಂಭವವೋ ಇದೆ.ಅಂಥ ಸ್ಥಿತಿಯಲ್ಲಿದೆ ಈ ಬಾವಿ.
13 ಮತ್ತು 14 ನೇ ವಾರ್ಡಿನ ಜನರಿಗೆ ಕುಡಿಯುವ ನೀರು ಪೂರೈಸುವ ಸಲುವಾಗಿ ಬಾವಿಯನ್ನು ನಿರ್ಮಿಸಲಾಗಿತ್ತು. ಕಾಳಿಕಾಂಬ, 5 ಸೆಂಟ್ಸ್‌ ಕಾಲನಿ, ಆನಂದ ನಗರ, ಕರಿಯಕಲ್ಲು ಬಡಾವಣೆಗಳ ಸುಮಾರು 200 ಮನೆಗಳಿಗೆ ಈ ಬಾವಿಯಿಂದ ನೀರು ಸರಬರಾಜು ಆಗುತ್ತದೆ.ಬಾವಿಯಿಂದ ಸಂಪಿಗೆ ,ಸಂಪಿನಿಂದ ಓವರ್‌ ಹೆಡ್‌ ಟಾಂಕಿಗೆ ನೀರು ಪಂಪ್‌ ಮಾಡಲಾಗುತ್ತದೆ.ಇಲ್ಲಿಂದ ಬಡಾವಣೆಗಳಿಗೆ ಸರಬರಾಜು ಆಗುತ್ತದೆ. ವರ್ಷಪೂರ್ತಿ ಸಿಹಿ ನೀರು ಇರುವ ಉತ್ತಮ ಬಾವಿಯಿದು. ಆದರೆ ಸಮರ್ಪಕ ನಿರ್ವಹಣೆಯಿಲ್ಲದೆ ಬಾವಿ ಪಾಳು ಬಿದ್ದಿರುವಂತೆ ಕಾಣಿಸುತ್ತದೆ. ಕಳೆಗಿಡಗಳನ್ನು ಸ್ವಚ್ಛಗೊಳಿಸಿ , ಬಾವಿಗೆ ಕಬ್ಬಿಣದ ಜಾಲರಿಯ ಮುಚ್ಚಳ ಹಾಕಿದರೆ ಇದು ಸುರಕ್ಷಿತ ಬಾವಿ ಆಗುತ್ತದೆ. ಆದರೆ ಇಷ್ಟು ವರ್ಷಗಳಾದರೂ ಪುರಸಭೆ ಬಾವಿಗೆ ಮುಚ್ಚಳ ಹಾಕುವ ಗೋಜಿಗೆ ಹೋಗಿಲ್ಲ. ಪುರಸಭೆ ಮತ್ತು ಜನಪ್ರತಿನಿಧಿಗಳು ಈ ಬಾವಿಯ ನಿರ್ವಹಣೆಯಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರಿಸಿದ್ದಾರೆ.



































































































error: Content is protected !!
Scroll to Top