ಬೆಂಗಳೂರು, ಡಿ.3 : ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಗಳು ಈ ವರ್ಷ ಸುಮಾರು ಎರಡು ತಿಂಗಳು ವಿಳಂಬವಾಗುವ ಸಾಧ್ಯತೆಯಿದೆ. ಜೂನ್/ಜುಲೈ ತಿಂಗಳಲ್ಲಿ ವಾರ್ಷಿಕ ಪರೀಕ್ಷೆಗಳನ್ನು ನಡೆಸಬಹುದು ಎಂದು ಕೋವಿಡ್ ತಾಂತ್ರಿಕ ಸಮಿತಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಂಡಳಿಗೆ ಹೇಳಿದೆ.
ಕೊರೊನ ಕಾರಣದಿಂದಾಗಿ ಇನ್ನೂ ಶಾಲೆಗಳೇ ಪ್ರಾರಂಭವಾಗಿಲ್ಲ. ವಿವಿಧ ಕಾರಣಗಳಿಂದಾಗಿ ಆನ್ ಲೈನ್ ಕ್ಲಾಸುಗಳು ಕೂಡ ಅನೇಕ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿಲ್ಲ. ಇಂಥ ಸ್ಥಿತಿಯಲ್ಲಿ ಪರೀಕ್ಷೆಗಳಿಗೆ ದಿನಾಂಕ ನಿಗದಿ ಮಾಡುವುದು ಅಸಾಧ್ಯ. ಆದರೆ ಜನವರಿಯಲ್ಲಿ ತರಗತಿಗಳನ್ನು ಪ್ರಾರಂಭಿಸಿದರೆ ಜೂನ್ ಅಥವಾ ಜುಲೈ ತಿಂಗಳಲ್ಲಿ ವಾರ್ಷಿಕ ಪರೀಕ್ಷೆಗಳನ್ನು ನಡೆಸಬಹುದು ಎಂದು ಸಮಿತಿ ಹೇಳಿದೆ.
ಕೆಲ ದಿನಗಳ ಹಿಂದೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷಾ ಮಂಡಳಿಗಳಿಗೆ ವಾರ್ಷಿಕ ಪರೀಕ್ಷೆಗಳ ವೇಳಾಪಟ್ಟಿಯನ್ನು ತಯಾರಿಸಲು ಸೂಚಿಸಲಾಗಿತ್ತು. ಶಾಲೆಗಳೆ ಪ್ರಾರಂಭವಾಗದಿರುವಾಗ ಪರೀಕ್ಷೆ ವೇಳಾಪಟ್ಟಿ ತಯಾರಿಸುವುದು ಹೇಗೆ ಎಂಬ ಗೊಂದಲ ಉಂಟಾಗಿತ್ತು.
ಎಸ್ ಎಸ್ ಎಲ್ ಸಿ, ಪಿಯುಸಿ ವಾರ್ಷಿಕ ಪರೀಕ್ಷೆ ಎರಡು ತಿಂಗಳು ಮುಂದೂಡಿಕೆ?





















