ನಮ್ಮ ಭಾರತೀಯ ಸಂಸ್ಕೃತಿ ತಂದೆ- ತಾಯಿಯನ್ನು ದೇವರ ಸಾಲಿನಲ್ಲಿಟ್ಟು ನೋಡುತ್ತದೆ. ದೇವಸಮಾನರೆಂದು ಪರಿಗಣಿಸಿ ಪೂಜಿಸಬೇಕಾದ ಐವರಲ್ಲಿ ಮೊದಲಿಗರೇ ಮಾತಾ-ಪಿತರು. ಶಿಕ್ಷಣವನ್ನು ಮತ್ತು ಸ್ವಂತ ಜೀವನ ನಡೆಸುವ ಸಾಮರ್ಥ್ಯ ಪಡೆಯುವಷ್ಟು ಕಾಲ ತನ್ನ ಮಾತಾ-ಪಿತರ ಆಶ್ರಯದಲ್ಲಿ ಉಳಿಯುವ ಮತ್ತು ಬೆಳೆಯುವ ವ್ಯಕ್ತಿ ನಂತರ ಅದರಿಂದ ಹೊರಬಂದು ತನ್ನ ಸ್ವಂತ ಸಾಮರ್ಥ್ಯದ ಆಧಾರದಲ್ಲಿ ತನ್ನದೇ ಆದ ಉದ್ಯೋಗ, ವ್ಯಕ್ತಿತ್ವ ಹಾಗೂ ಸಾಮರ್ಥ್ಯದ ಆಧಾರದಲ್ಲಿ ತನ್ನ ಸಂಸಾರದ ಗೂಡು ಕಟ್ಟಿಕೊಂಡು ಜೀವನ ನಡೆಸುತ್ತಾನೆ. ಈ ಆಧುನಿಕ ಸಮಾಜದಲ್ಲಿ ಆರ್ಥಿಕವಾಗಿ ಸ್ವಾವಲಂಬಿಗಳಾಗಿರುವ ಹೆತ್ತವರು ಸಾಮಾನ್ಯವಾಗಿ ಮಕ್ಕಳನ್ನು ಅವಲಂಬಿಸುವುದಿಲ್ಲ. ಆದರೆ ಬಡ-ಮಧ್ಯಮ ವರ್ಗದ ಸಂಸಾರಗಳಲ್ಲಿ ಹೆತ್ತವರು ತಮ್ಮ ಮಕ್ಕಳನ್ನು ಅವಲಂಬಿಸುವುದು ಸಾಮಾನ್ಯವಾಗಿರುತ್ತದೆ. ಭಾವನಾತ್ಮಕವಾಗಿಯೂ ಮಕ್ಕಳ ನೆರವು ಮತ್ತು ಪೋಷಣೆ ವಯಸ್ಸಾದ ತಂದೆ-ತಾಯಿಯರಿಗೆ ಮತ್ತು ಹಿರಿಯ ನಾಗರಿಕರಿಗೆ ಅಗತ್ಯವಿರುತ್ತದೆ. ಇಂತಹ ಸಾಮಾಜಿಕ ಸನ್ನಿವೇಶಗಳ ಹಿನ್ನಲೆಯಲ್ಲಿ ದಿನಾಂಕ 29-12-2007 ರಿಂದ ಜಾರಿಗೆ ಬಂದಿರುವ ‘ತಂದೆ ತಾಯಿಯರ ಮತ್ತು ಹಿರಿಯ ನಾಗರಿಕರ ಪಾಲನೆ-ಪೋಷಣೆ ಮತ್ತು ಶ್ರೇಯೋಭಿವೃದ್ದಿ ಅಧಿನಿಯಮ, 2007’ ರ ಕಾನೂನು ಬಹಳ ಮಹತ್ವವನ್ನು ಹೊಂದಿರುತ್ತದೆ.
ಈ ಕಾಯ್ದೆಯಡಿಯಲ್ಲಿ ತಂದೆ-ತಾಯಿ ಮತ್ತು 60 ಅಥವಾ ಅದಕ್ಕಿಂತ ಹೆಚ್ಚಿನ ಪ್ರಾಯದ ಹಿರಿಯ ನಾಗರಿಕರು ತಮ್ಮ ಪಾಲನೆ-ಪೋಷಣೆ ಮತ್ತು ಶ್ರೇಯೋಭಿವೃದ್ದಿ ಹಾಗೂ ತಾವು ಕಾನೂನುಬದ್ಧವಾಗಿ ಹೊಂದಬಹುದಾದಂತಹ ವಿವಿಧ ಸವಲತ್ತು ಮತ್ತು ಸೌಕರ್ಯಗಳನ್ನು ಮತ್ತು ತಮ್ಮ ಜೀವ, ಆಸ್ತಿ ಮತ್ತು ಸೊತ್ತುಗಳ ಮೇಲಿನ ಹಿತಾಸಕ್ತಿಯನ್ನು ರಕ್ಷಿಸಲು ಅಗತ್ಯವುಳ್ಳ ಕಾನೂನಿನ ಸಹಾಯವನ್ನು ಹೊಂದಬಹುದು.
ಈ ಕಾಯ್ದೆಯ ಪ್ರಕಾರ ತನ್ನ ಸ್ವಂತ ಗಳಿಕೆಯಿಂದ ಅಥವಾ ತನ್ನ ಒಡೆತನದ ಆಸ್ತಿಯಿಂದ ತನ್ನ ಪಾಲನೆ-ಪೋಷಣೆ ಮಾಡಿಕೊಳ್ಳಲು ಅಸಮರ್ಥರಾಗಿರುವ ತಂದೆ-ತಾಯಿಯರು ಸೇರಿದಂತೆ ಯಾರೇ ಹಿರಿಯ ನಾಗರಿಕರು ಅಪ್ರಾಪ್ತ ವಯಸ್ಕರಲ್ಲದ ತಮ್ಮ ಮಕ್ಕಳ ಮತ್ತು ಮಕ್ಕಳಿಲ್ಲದ ಹಿರಿಯ ನಾಗರಿಕರು ತಮ್ಮ ಮುಂದಿನ ಕಾನೂನು ಸಮ್ಮತ ವಾರೀಸುದಾರರ ವಿರುದ್ಧ ತಮ್ಮ ಸಾಮಾನ್ಯ ಜೀವನ ನಿರ್ವಹಣೆಗೆ ಬೇಕಾಗುವ ಸವಲತ್ತು ಮತ್ತು ಪಾಲನೆ-ಪೋಷಣೆಯನ್ನು ಕಾನೂನುಬದ್ಧವಾಗಿ ಹೊಂದಲು ಹಕ್ಕುದಾರರಾಗಿರುತ್ತಾರೆ. ಒಂದು ವೇಳೆ ಈ ರೀತಿಯ ಜೀವನ ನಿರ್ವಹಣೆ ಮತ್ತು ಪಾಲನೆ-ಪೋಷಣೆಯನ್ನು ಮಕ್ಕಳು ಅಥವಾ ಮೇಲ್ಕಾಣಿಸಿದ ಸಂಬಂದಿಕರು ನಿರಾಕರಿಸಿದಲ್ಲಿ ಈ ಕಾಯ್ದೆಯ ಪ್ರಕಾರ ಸರಕಾರ ನೇಮಿಸಲ್ಪಟ್ಟ ಸಂಬಂಧಪಟ್ಟ ನ್ಯಾಯಾಧಿಕರಣಕ್ಕೆ ನೇರವಾಗಿ ಅಥವಾ ಸರಕಾರದಿಂದ ನೊಂದಾಯಿತವಾದ ಯಾವುದೇ ಸ್ವಯಂಸೇವಾ ಸಂಸ್ಥೆ ಮುಖಾಂತರ ಅರ್ಜಿ ಸಲ್ಲಿಸಿ ತಮ್ಮ ಪಾಲನೆ-ಪೋಷಣೆಗಾಗಿ ಮಾಸಿಕ ಭತ್ಯೆ ಅಥವಾ ವ್ಯವಹಾರಗಳ ವೆಚ್ಚ ಮುಂತಾದ ಸೂಕ್ತ ಪರಿಹಾರಗಳನ್ನು ಹೊಂದಲು ಅರ್ಹರಾಗಿರುತ್ತಾರೆ. ಒಂದುವೇಳೆ ನ್ಯಾಯಾಧಿಕರಣದಿಂದ ಈ ರೀತಿಯಾಗಿ ಆದೇಶ ಪಡೆದ ಮಕ್ಕಳು ಅಥವಾ ಸಂಬಂಧಿಕರು ಸಮಂಜಸ ಕಾರಣವಿಲ್ಲದೆ ಆದೇಶವನ್ನು ಪಾಲಿಸಲು ವಿಫಲರಾದರೆ ಆದೇಶದ ಉಲ್ಲಂಘನೆಗಾಗಿ ದಂಡನೆ ಸಮೇತವಾಗಿ ಬಾಕಿ ಇರುವ ಹಣವನ್ನು ವಸೂಲು ಮಾಡಲು ವಾರಂಟ್ ಹೊರಡಿಸುವ ಅಧಿಕಾರವನ್ನು ಮತ್ತು ಹಣ ಸಂದಾಯ ಮಾಡುವರೆಗೆ ಸಂದಾಯ ಮಾಡಬೇಕಾದ ವ್ಯಕ್ತಿಯನ್ನು ಜೈಲು ಶಿಕ್ಷೆಗೆ ಗುರಿಪಡಿಸುವ ಅಧಿಕಾರವನ್ನು ನ್ಯಾಯಾಧಿಕರಣ ಹೊಂದಿರುತ್ತದೆ.
ಈ ಕಾಯ್ದೆಯ ಪ್ರಕಾರ ರಾಜ್ಯ ಸರಕಾರವು ನಿರ್ಗತಿಕರಾಗಿರುವ ತಂದೆ-ತಾಯಿಯರ ಮತ್ತು ಹಿರಿಯ ನಾಗರಿಕರಿಗಾಗಿ ಸೂಕ್ತ ಕಂಡ ಪ್ರದೇಶಗಳಲ್ಲಿ ವೃದ್ಧಾಶ್ರಮಗಳನ್ನು ಸ್ಥಾಪಿಸಿ ಅವರಿಗೆ ವೈದ್ಯಕೀಯ ನೆರವನ್ನು ಉಚಿತವಾಗಿ ನೀಡುವ ಮತ್ತು ಅವರ ಜೀವ ಮತ್ತು ಆಸ್ತಿಯ ಹಿತಾಸಕ್ತಿಯನ್ನು ಕಾಪಾಡುವ ಮತ್ತು ಸೂಕ್ತ ರಕ್ಷಣೆ ಮತ್ತು ಶ್ರೇಯೋಭಿವೃದ್ದಿಗಾಗಿ ಪ್ರಚಾರ, ಜಾಗೃತಿ ಮುಂತಾದ ಕ್ರಮಗಳನ್ನು ಕೈಗೊಳ್ಳುವ ಜವಾಬ್ದಾರಿಯನ್ನು ಹೊಂದಿರುತ್ತದೆ.
ಹಿರಿಯ ನಾಗರಿಕರ ಪಾಲನೆಯ ಅಥವಾ ರಕ್ಷಣೆಯ ಜವಾಬ್ದಾರಿ ಹೊಂದಿರುವ ಯಾರೇ ಆಗಲಿ, ಅಂಥ ಹಿರಿಯ ನಾಗರಿಕರನ್ನು ಸಂಪೂರ್ಣವಾಗಿ ಪರಿತ್ಯಜಿಸುವ ಉದ್ದೇಶದಿಂದ ಯಾವುದೇ ಸ್ಥಳದಲ್ಲಿ ಬಿಟ್ಟುಹೋದರೆ ಅವರಿಗೆ 3 ತಿಂಗಳಿಗೆ ವಿಸ್ತರಿಸಬಹುದಾದ ಅವಧಿಯ ಜೈಲು ಶಿಕ್ಷೆ ಅಥವಾ ರೂ.5,000 ತನಕ ದಂಡನೆ ಅಥವಾ ಇವೆರಡನ್ನೂ ವಿಧಿಸುವ ಅಧಿಕಾರ ನ್ಯಾಯಾಧಿಕರಣ ಹೊಂದಿರುತ್ತದೆ.
ಕೆ. ವಿಜೇಂದ್ರ ಕುಮಾರ್
ಹಿರಿಯ ನ್ಯಾಯವಾದಿ, ಕಾರ್ಕಳ (ಮೊ: 9845 232490)











































