ಮಕ್ಕಳ ಹಕ್ಕುಗಳ ರಕ್ಷಣೆಗೆ ಪಂಚಾಯತ್ ಮಟ್ಟದಲ್ಲಿ ಮಕ್ಕಳ ಧನಿ ಕಾರ್ಯಕ್ರಮ

ಕಾರ್ಕಳ: ಮಕ್ಕಳ ಹಕ್ಕುಗಳ ರಕ್ಷಣೆ ಕುರಿತಂತೆ ಸರಕಾರವು ಮಕ್ಕಳ ಧನಿ ಎಂಬ ವಿನೂತನ ಕಾರ್ಯಕ್ರಮವನ್ನು ಎಲ್ಲಾ ಪಂಚಾಯಿತಿ ಮಟ್ಟದಲ್ಲಿ ಆರಂಭಿಸಿದೆ. ಈ ಕಾರ್ಯಕ್ರಮದ ಕುರಿತು ಮರ್ಣೆ ಗ್ರಾಮ ಪಂಚಾಯಿತಿ ಪಿಡಿಓ ತಿಲಕರಾಜ್ ಮಾಹಿತಿ ನೀಡಿ, 6 ರಿಂದೆ 18ವರ್ಷದೊಳಗಿನ ಮಕ್ಕಳ ಮೇಲೆ ಮನೆಯವರಿಂದ, ನೆರೆಹೊರೆಯವರಿಂದ ಅಥವಾ ಶಾಲಾ ವಠಾರದಲ್ಲಿ ನಡೆಯುವ ದೌರ್ಜನ್ಯ ಹಾಗೂ ವಿಶೇಷವಾಗಿ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ಶೋಷಣೆಯಂತಹ ಪಿಡುಗಗಳ ವಿರುದ್ದ ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ದೂರು ನೀಡಬಹುದಾಗಿದೆ. ಇದಕ್ಕಾಗಿ ಎಲ್ಲಾ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಮಕ್ಕಳ ಧನಿ ಎನ್ನುವ ದೂರುಪೆಟ್ಟಿಗೆ ಇಡಲಾಗಿದ್ದು, ಮಕ್ಕಳು ಯಾವುದೇ ರೀತಿಯ ದೂರುಗಳನ್ನು ಈ ಪೆಟ್ಟಿಯಲ್ಲಿ ಹಾಕಬಹುದಾಗಿದೆ. ಮಕ್ಕಳಿಂದ ಬಂದ ಲಿಖಿತ ದೂರುಗಳನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಗಳಿಗೆ ರವಾನಿಸಿ ದೂರಿನ ಪರಿಶೀಲನೆ ಹಾಗೂ ದೂರಿನ ಸತ್ಯಾಸತ್ಯತೆಯ ಬಗ್ಗೆ ತನಿಖೆ ನಡೆಸಿ ಸೂಕ್ತಕ್ರಮ ಕೈಗೊಳ್ಳುವಂತೆ ಸೂಚಿಸುತ್ತಾರೆ. ಇದಲ್ಲದೇ ಮಕ್ಕಳು ತಮ್ಮ ದೂರನ್ನು ನೇರವಾಗಿ ಮಕ್ಕಳ ಸಹಾಯವಾಣಿ 1098ಕ್ಕೆ ಕರೆಮಾಡಬಹುದಾಗಿದೆ ಎಂದು ಪಿಡಿಓ ತಿಲಕರಾಜ್ ಹೇಳಿದರು.
ಮಕ್ಕಳ ಹಕ್ಕುಗಳ ರಕ್ಷಣೆಯ ಮಕ್ಕಳ ಧನಿ ಎನ್ನುವ ಕಾರ್ಯಕ್ರಮದ ಜತೆಗೆ ಮಕ್ಕಳಿಗೆ ಓದು ಹವ್ಯಾಸ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಓದುವ ಬೆಳಕು ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮಕ್ಕಳಿಗೆ ಆಯಾ ಪಂಚಾಯಿತಿ ಗ್ರಂಥಾಲಯಗಳಿಂದ ಉಚಿತವಾಗಿ ಪುಸ್ತಕಗಳನ್ನು ವಿತರಿಸುವ ಮೂಲಕ ಮಕ್ಕಳಲ್ಲಿ ನೈತಿಕ ಶಿಕ್ಷಣ ಹಾಗೂ ಸಾಮಾನ್ಯ ಜ್ಞಾನ ಬೆಳೆಯಲು ಪೂರಕವಾಗುತ್ತದೆ ಎನ್ನುವುದು ಸರಕಾರದ ಆಶಯ.
ಈ ವಿನೂತನ ಕಾರ್ಯಕ್ರಮದಲ್ಲಿ ಮರ್ಣೆ ಪಂಚಾಯಿತಿ ಮಾಜಿ ಅಧ್ಯಕ್ಷ ದಿನೇಶ್ ಕುಮಾರ್, ಶಾಲಾ ಶಿಕ್ಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.

a href="#" target="_blank">







































error: Content is protected !!
Scroll to Top