
ಕಾರ್ಕಳ : ಪ್ರಾಥಮಿಕ ಆರೋಗ್ಯ ಕೇಂದ್ರ ಮಾಳ, ಉಪಕೇಂದ್ರ ಕೆರ್ವಾಶೆ ಹಾಗೂ ಸ್ತ್ರೀ ಶಕ್ತಿ ಸಂಜೀವಿನಿ ಸಂಘ ಕೆರ್ವಾಶೆ ಇದರ ಸಂಯುಕ್ತ ಆಶ್ರಯದಲ್ಲಿ ಕ್ಷಯರೋಗ ಹಾಗೂ ಕೊರೊನ ವೈರಸ್ ಕುರಿತು ಅ. 30ರಂದು ಮಾಹಿತಿ ಶಿಬಿರ ನಡೆಯಿತು. ವೈದ್ಯಾಧಿಕಾರಿ ಡಾ. ಶಶಾಂಕ್ ಆರ್. ಶೆಟ್ಟಿ ಮಾತನಾಡಿ, ಕೊರೊನ ವೈರಸ್ ಕುರಿತು ಭಯಪಡದೇ ಮುಕ್ತವಾಗಿ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕು. ಸಾರ್ವಜನಿಕ ಸ್ಥಳದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವುದು ಹಾಗೂ ಶುಚಿತ್ವ ಕಡೆ ಗಮನವಹಿಸುವ ಮೂಲಕ ಕೊರೊನಾ ಗೆಲ್ಲವಂತಾಗಬೇಕೆಂದರು.

ಮುನ್ನೆಚ್ಚರಿಕೆ ಅಗತ್ಯ
ತಾಲೂಕು ಕ್ಷಯರೋಗ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಶಿವಕುಮಾರ್ ಮಾತನಾಡಿ ಕ್ಷಯರೋಗ ಒಂದು ಪುರಾತನ ಖಾಯಿಲೆಯಾಗಿದ್ದು ಕೊರೊನ ಹಾಗೂ ಕ್ಷಯ ರೋಗದ ಲಕ್ಷಣಗಳು ಒಂದೆ ತೆರನಾಗಿದ್ದು ಸಾರ್ವಜನಿಕರು ರೋಗಲಕ್ಷಣ ಇದ್ದರೂ ಕಫ ಪರೀಕ್ಷೆ ಮಾಡಿಸಲು ಹಿಂದೇಟು ಹಾಕುತಿದ್ದಾರೆ. ಕಾರಣ ಜನರಲ್ಲಿ ಕೊರೊನ ರೋಗದ ಬಗ್ಗೆ ಇರುವ ಭಯ ಹಾಗಾಗಿ ಇದರಿಂದ ರೋಗ ಉಲ್ಬಣ ಆಗಿ ಎಷ್ಟೋ ಮಂದಿ ಪರೀಕ್ಷೆಯನ್ನು ಮಾಡಿಸದೇ ಸೂಕ್ತ ಚಿಕಿತ್ಸೆಯು ದೊರೆಯದೆ ಮರಣ ಹೊಂದಿದ್ದಾರೆ. ಹಾಗಾಗಿ ಯಾರು ಕೂಡ ಭಯ ಪಡದೆ ಕಫ ಪರೀಕ್ಷೆ ಮಾಡಿಸಿ ರೋಗ ದೃಢಪಟ್ಟಲ್ಲಿ ಕೂಡಲೇ ಚಿಕಿತ್ಸೆ ಪ್ರಾರಂಭಿಸಿ ಗುಣಮುಖ ಆಗಲು ಸಹಾಯವಾಗುವುದು.ಎರಡು ವಾರಕ್ಕಿಂತ ಹೆಚ್ಚು ಸತತ ಕೆಮ್ಮು, ಸಂಜೆ ವೇಳೆ ಚಳಿ ಜ್ವರ, ರಾತ್ರಿ ವೇಳೆ ಬೆವರುವುದು, ತೂಕ ಕಡಿಮೆ ಆಗುವುದು, ಹಸಿವು ಆಗದಿರುವುದು, ಎದೆನೋವು ಕಾಣಿಸಿಕೊಳ್ಳುವುದು, ಕಫದಲ್ಲಿ ರಕ್ತ ಬೀಳುವುದು ಇವು ಕ್ಷಯ ರೋಗದ ಲಕ್ಷಣಗಳು ಇಂತಹ ಲಕ್ಷಣ ಇರುವ ಶಂಕಿತ ರೋಗಿಗಳು ಕೂಡಲೇ ಹತ್ತಿರದ ಆಸ್ಪತ್ರೆಗೆ ತೆರಳಿ ಪರೀಕ್ಷೆಗೆ ಒಳಪಡುವಂತೆ ತಿಳಿಸಿದರು ಹಾಗೂ ಸಮುದಾಯ ಮಟ್ಟದಲ್ಲಿ ರೋಗ ಹರಡದಂತೆ ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮಾಹಿತಿ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಮಾಳ ಇಲ್ಲಿನ ಹಿರಿಯ ಆರೋಗ್ಯ ಸಹಾಯಕರಾದ ವಸಂತ ಶೆಟ್ಟಿ ಆರೋಗ್ಯ ಸಿಬ್ಬಂದಿಗಳಾದ ರೇಷ್ಮಾ, ಕುಮಾರಿ ನಂದಿನಿ, ದೀಪ್ತಿ, ಸಂಜಯ್ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದರು.
ಸುಮಾ ಮಾಲಿನಿ ಅಧ್ಯಕ್ಷತೆ ವಹಿಸಿದರು, ಕಾರ್ಯದರ್ಶಿ ಮಂಜುಳಾ ಮುಖ್ಯ ಅಥಿತಿಯಾಗಿದ್ದರು. ಲತಾ ಸ್ವಾಗತಿಸಿ ,ಲಲಿತಾ ಜೈನ್ ನಿರೂಪಿಸಿದರು.ಎಮ್. ಬಿ. ಕೆ. ಭವ್ಯ ವಂದಿಸಿದರು .