ಇದು ಸಾರ್ವಜನಿಕರಿಗೆ ಬಗೆವ ದ್ರೋಹವಲ್ಲವೇ?

ಸರಕಾರಿ ಸೇವೆಯಲ್ಲಿರುವ ನೌಕರರ ವರ್ಗಾವಣೆಗೆ ಕಾನೂನು ( statute) ಇಲ್ಲ. ಅದೊಂದು ಆಂತರಿಕ ವ್ಯವಸ್ಥೆ. ಆ ಬಗ್ಗೆ ಸರಕಾರ ಕಾಲಕಾಲಕ್ಕೆ  ಮಾರ್ಗಸೂಚಿಯನ್ನು ಹೊರಡಿಸುತ್ತದೆ.ಆಡಳಿತದ ಹಿತ ದೃಷ್ಟಿಯಿಂದ ಸರಕಾರಿ ನೌಕರರ ಸ್ಥಾನ ಪಲ್ಲಟ ಅನಿವಾರ್ಯ. ಭಡ್ತಿ, ಸಿಬ್ಬಂದಿ ಹೊಂದಾಣಿಕೆ, ಅಗತ್ಯ ಸ್ಥಾನಗಳ ಭರ್ತಿ ಹಾಗೂ ಜಡಕಟ್ಟಿದ ನೌಕರರಿಗೆ ಚುರುಕು ಮುಟ್ಟಿಸಲು ವರ್ಗಾವಣೆ ಅನಿವಾರ್ಯ. ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಇದೆ. ಆದರೆ ಇದೊಂದು ಇಲಾಖಾ ಮಟ್ಟದ ಪ್ರಕ್ರಿಯೆ. ಮಾರ್ಗಸೂಚಿಯನ್ನು ನೀಡಿದ ಸರಕಾರ ಅಥವಾ ಚುನಾಯಿತ ಪ್ರತಿನಿಧಿಗಳ ಹಸ್ತ ಕ್ಷೇಪವಿರಬಾರದು. ಇದ್ದಲ್ಲಿ ಅದು ಸಾರ್ವಜನಿಕ ಹಿತಾಸಕ್ತಿಗೆ ವಿರೋಧವಾದ ನಡೆ ಎಂದೇ ಹೇಳಬೇಕು.

 ತಹಶೀಲ್ದಾರರನ್ನು ವರ್ಗಾಯಿಸಿ ಸ್ಥಳ ನಿಯುಕ್ತಿ ಮಾಡದಿರುವುದು ಒಂದು ಗಂಭೀರವಾದ ಲೋಪವೇ ಸರಿ.  ಅದರಲ್ಲಿಯೂ ಕೆಲವರಿಗೆ ಕಳೆದ ಒಂದೂವರೆ ವರ್ಷದಿಂದ ಸ್ಥಳ ನಿಯುಕ್ತಿಯಾಗಿಲ್ಲ ಅಲ್ಲದೆ ನಿರೀಕ್ಷೆಯಲ್ಲಿರುವವರು ಕಡ್ಡಾಯವಾಗಿ ಶಾಸಕರ ಶಿಫಾರಸ್ಸು ಪತ್ರ ನೀಡಬೇಕೆಂಬುದು ಆಘಾತಕಾರಿ ವಿಷಯ. ಇದು ಆಡಳಿತ ರಾಜಕೀಯಗೊಳ್ಳುತ್ತಾ ಇದೆ ಎನ್ನುವುದರ ಸ್ಪಷ್ಟ  ಸೂಚನೆ. ಆಡಳಿತದಲ್ಲಿ ರಾಜಕೀಯ ಬೆರೆಸುವುದು ಸಂವಿಧಾನದ ಆಶಯಕ್ಕೆ ವಿರೋಧ.  ಬಹುಮತ ಗಳಿಸಿದ ರಾಜಕೀಯ ಪಕ್ಷವೊಂದು ಆಡಳಿತದ ನೇತ್ರತ್ವ ವಹಿಸಲು ಅವಕಾಶ ಪಡೆಯುವುದು ಪ್ರಜಾಸತ್ತೆಯ ಲಕ್ಷಣ. ಅಂದ ಮಾತ್ರಕ್ಕೆ ಆಡಳಿತ ಆ ಪಕ್ಷದ ಸೊತ್ತೆ? ಅದು ಸಂವಿಧಾನರೀತ್ಯಾ ಆಡಳಿತ ನಡೆಸಲು ಸಾರ್ವಜನಿಕರು ನೀಡಿದ ಅವಕಾಶ. ರಾಜಕೀಯ ಪಕ್ಷಗಳು ಅದನ್ನು ದುರುಪಯೋಗಪಡಿಸಿಕೊಳ್ಳಬಾರದು.ಸ್ಥಳ ನಿಯುಕ್ತಿ ನಿರೀಕ್ಷೆಯಲ್ಲಿರುವ ಸರಕಾರಿ  ಅಧಿಕಾರಿ ಶಾಸಕರ ಶಿಫಾರಸ್ಸು  ಪತ್ರ ತರಬೇಕೆನ್ನುವ ಸೂಚನೆ ಬಹಳ ಅಪಾಯಕಾರಿ ಬೆಳವಣಿಗೆ. ಯಾಕೆಂದರೆ ಸರಕಾರಿ ಹುದ್ದೆಗೆ ಮಾನದಂಡವಿದೆ.ಅದರಂತೆ ನೇಮಕಗೊಂಡಾತ  ಸಾರ್ವಜನಿಕ ಹಿತಾಸಕ್ತಿಯಂತೆ ಕಾರ್ಯನಿರ್ವಹಿಸಬೇಕು. ನಿಯುಕ್ತಿಗೊಂಡ ‍ಸ್ಥ‌‌‌ಳ ಮುಖ್ಯವಲ್ಲ .ಸಾರ್ವಜನಿಕ ಹಿತಾಸಕ್ತಿ ಮುಖ್ಯ. ಇದು ಸಾವ೯ಜನಿಕರು ಗಮನಿಸಬೇಕಾದ ವಿಷಯ.

   ಕರ್ನಾಟಕದಲ್ಲಿ ಸುಮಾರು 6 .5 ಲಕ್ಷ ಸರಕಾರಿ ಹುದ್ದೆಗಳು ಇವೆ. ಶೇ.23ರಿಂದ 25ರಷ್ಟು ಹುದ್ದೆಖಾಲಿ ಇವೆ. ಒಂದು ಹುದ್ದೆ ಸೃಷ್ಟಿಯಾಗಬೇಕಾದರೆ ಅನೇಕ ವಿಧಿ ವಿಧಾನಗಳನ್ನು ದಾಟಿ ಬರಬೇಕು. ಹುದ್ದೆಯ ಅಗತ್ಯವೇನು ಎಂಬುದು ಮೊದಲ ಪ್ರಶ್ನೆ. ಅಗತ್ಯವಾದರೆ ಹುದ್ದೆಯ ಶಿಕ್ಷಣಾಹ೯ತೆ,ಸಂಖ್ಯೆ, ವೇತನ,ಆ ಬಗ್ಗೆ ಆರ್ಥಿಕ ವ್ಯವಸ್ಥೆ ಎಲ್ಲ ಆಯಾಮಗಳಲ್ಲಿ ಚಚಿ೯ಸಿ, ಸಾರ್ವಜನಿಕ ಹಿತಾಸಕ್ತಿಯಿಂದ ಹುದ್ದೆ ಸೃಜಿಸಲೇಬೇಕಾದ ಅನಿವಾರ್ಯತೆಯನ್ನು ಮನಗಂಡು ಬಳಿಕ ಅನುಮೊದನೆಗೊಳ್ಳುತ್ತದೆ.ಹಾಗೇ ಮಂಜೂರಾದ ಹುದ್ದೆ ಖಾಲಿ ಇರಿಸಿಕೊಳ್ಳುವುದೆಂದರೆ ಸಾರ್ವಜನಿಕರಿಗೆ ಬಗೆವ ದ್ರೋಹವಲ್ಲವೇ? ಮೇಲಾಗಿ ಕೆಲವೇ ಸಹಸ್ರ ಸಂಖ್ಯೆಯಲ್ಲಿರುವ ಪತ್ರಾಂಕಿತ ಹುದ್ದೆಗಳು.ಇಂಥ ಹುದ್ದೆ ಗಳನ್ನು ಧಾರಣೆ ಮಾಡುವ  ತಹಶೀಲ್ದಾರರಂಥ ಅಧಿಕಾರಿಗಳಿಗೆ ಸ್ಥಳ ನಿಯುಕ್ತಿ ಮಾಡದೆ ಖಾಲಿ ಇರಿಸಿಕೊಳ್ಳುವ ಸರಕಾರಕ್ಕೇನೇನ್ನಬೇಕು. ಸಾರ್ವಜನಿಕರು ಈ ಸೂಕ್ಷ್ಮಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರತಿಕ್ರಿಯಿಸುವ ಕಾಲ ಸನ್ನಿಹಿತವಾಗಿದೆ.

      ಬೇಳೂರು ರಾಘವ ಶೆಟ್ಟಿ







































































error: Content is protected !!
Scroll to Top