ಸಂಪಾದಕೀಯ- ಹೆಲ್ಮೆಟ್‌ ಧರಿಸದವರಿಂದ ದಂಡ ವಸೂಲು ಮಾಡುವ ಮೊದಲು…

1

ರಾಜ್ಯ ಸರಕಾರ ದ್ವಿಚಕ್ರ ವಾಹನ ಸವಾರ ಮತ್ತು ಹಿಂಬದಿ ಸವಾರ ಹೆಲ್ಮೆಟ್‌ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಈ ಸಲದ ಆದೇಶದಲ್ಲಿ ದಂಡ ಹಾಕುವುದರ ಜೊತೆಗೆ ಮೂರು ತಿಂಗಳ ಮಟ್ಟಿಗೆ ಲೈಸೆನ್ಸ್‌ ಅಮಾನತುಗೊಳಿಸುವ ಅಂಶವನ್ನು ಸೇರಿಸಿಕೊಳ್ಳಲಾಗಿದೆ.

ಹಾಗೆಂದು ಇದು ಹೊಸ ಕಾನೂನು ಅಲ್ಲ ಮತ್ತು ಹೆಲ್ಮೆಟ್‌ ಕಡ್ಡಾಯ ಎಂಬ ಆದೇಶ ಹೊರಡಿಸುವುದು ಕೂಡ ಇದು ಮೊದಲೇನಲ್ಲ. ಇಂಥ ಆದೇಶಗಳನ್ನು ಸರಕಾರಗಳು  ಕಾಲಕಾಲಕ್ಕೆ ಹೊರಡಿಸುತ್ತವೆ. ಆದೇಶ ಹೊರಟಾಗೊಮ್ಮೆ ಪೊಲೀಸರು ಮೈಕೊಡವಿ ಎದ್ದುನಿಲ್ಲುವುದು , ಅಲ್ಲಲ್ಲಿ ಹೊಂಚುಹಾಕಿ ನಿಂತು ಹೆಲ್ಮೆಟ್‌ ಧರಿಸದವರನ್ನು ತಡೆದು ನಿಲ್ಲಿಸಿ ದಂಡ ವಸೂಲು ಮಾಡುವುದೆಲ್ಲ ನಡೆಯುತ್ತದೆ. ಇದೆಲ್ಲ ನಾಲ್ಕು ದಿನಗಳ ಅಟಾಟೋಪ ಅಷ್ಟೆ. ಮತ್ತೆ ಹಿಂದಿನ  ಮೊದಲಿನ ಸ್ಥಿತಿಗೆ ಬರುತ್ತದೆ.   ಜನರಿಗೂ ಈ ವಿಚಾರ ಚೆನ್ನಾಗಿ ಗೊತ್ತಿದೆ. ಹೀಗಾಗಿ ಹೆಲ್ಮೆಟ್‌ ಕಡ್ಡಾಯ, ಗುಟ್ಕಾ ನಿಷೇಧದಂಥ  ಕಾನೂನು, ಆದೇಶಗಳನ್ನು ಜನರು ಕೂಡ ಗಂಭೀರವಾಗಿ ಪರಿಗಣಿಸುವುದಿಲ್ಲ.

ಆದರೆ ಕೇಂದ್ರ ಸರಕಾರ ಕಳೆದ ವರ್ಷ ಜಾರಿಗೆ ತಂದಿರುವ ಹೊಸ ಮೋಟಾರು ವಾಹನ ಕಾಯಿದೆಯಲ್ಲಿ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಯಿತು. ಅದರಲ್ಲಿ ಹೆಲ್ಮೆಟ್‌ ನಿಯಮವೂ ಸೇರಿದೆ. ಹೆಲ್ಮೆಟ್‌ ಧರಿಸದವರಿಗೆ 5,000 ರೂ. ಜುಲ್ಮಾನೆ ವಿಧಿಸುವ ಅಂಶವನ್ನು ನೋಡಿ ಜನರು ಬೆಚ್ಚಿಬಿದ್ದದ್ದು ನಿಜ. ಆರಂಭದಲ್ಲಿ ಕೆಲವು ದಿನ ಪೊಲೀಸರು ಭಾರಿ ಉತ್ಸಾಹದಲ್ಲಿ ದಂಡವನ್ನು ವಸೂಲು ಮಾಡಿದರು ಕೂಡ. ಆದರೆ ಕರ್ನಾಟಕವೂ ಸೇರಿ ಹಲವು ರಾಜ್ಯಗಳಲ್ಲಿ  ಈ ದುಬಾರಿ ದಂಡದ ವಿರುದ್ಧ ತಿರುಗಿ ಬಿದ್ದ ಬಳಿಕ ದಂಡದ ಮೊತ್ತವನ್ನು ಕಡಿಮೆ ಮಾಡಲಾಯಿತು. ಕರ್ನಾಟಕದಲ್ಲಿ ಪ್ರಸ್ತುತ 1,000 ರೂ. ದಂಡ ಹಾಕುತ್ತಾರೆ.

ದಂಡದ ಮೊತ್ತ ರಾಜ್ಯದ ಎಲ್ಲೆಡೆ ಸಮಾನವಾಗಿದ್ದರೂ ಹಿಂಬದಿ ಸವಾರರೂ ಹೆಲ್ಮೆಟ್‌ ಧರಿಸಬೇಕೆಂಬ ನಿಯಮಕ್ಕೆ ಸಂಬಂಧಿಸಿದಂತೆ ಗೊಂದಲವಿತ್ತು. ಕೆಲವು ಜಿಲ್ಲೆಗಳಲ್ಲಿ ಪೊಲೀಸರು ದ್ವಿಚಕ್ರ ವಾಹನದ ಇಬ್ಬರೂ ಸವಾರರು ಹೆಲ್ಮೆಟ್‌  ಧರಿಸದಿದ್ದರೆ ಮುಲಾಜಿಲ್ಲದೆ ದಂಡ ವಸೂಲು ಮಾಡುತ್ತಾರೆ. ಆದರೆ ಕೆಲವು ಜಿಲ್ಲೆಗಳಲ್ಲಿ ಪೊಲೀಸರು ನಿಯಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲಿಲ್ಲ. ಉದಾಹರಣೆಗೆ ಹೇಳುವುದಾದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸವಾರ ಮತ್ತು ಸಹ ಸವಾರ ಹೆಲ್ಮೆಟ್‌ ಧರಿಸುವುದು ಈಗಲೂ ಕಡ್ಡಾಯ. ಉಡುಪಿಯಲ್ಲಿ ಕೆಲವು ದಿನ ಮಾತ್ರ ಕಡ್ಡಾಯವಾಗಿತ್ತು. ಈಗ ಸವಾರ ಮಾತ್ರ ಹೆಲ್ಮೆಟ್‌ ಧರಿಸಿದರೆ ಸಾಕು ಎಂಬ ಸ್ಥಿತಿಯಿದೆ. ಇದರಿಂದಾಗೆ ಉಡುಪಿ ಜಿಲ್ಲೆಯಿಂದ ಯಾರಾದರೂ ಇಬ್ಬರು ದ್ವಿಚಕ್ರ ವಾಹನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಹೋದರೆ ಸಮಸ್ಯೆಯಾಗುತ್ತಿತ್ತು. ಒಂದು ನಿಯಮವನ್ನು ರಾಜ್ಯದಲ್ಲಿ ಏಕರೂಪವಾಗಿ ಜಾರಿಗೊಳಿಸುವುದು ಮುಖ್ಯ ಎನ್ನುವುದು ಒಂದು ಪ್ರಾಥಮಿಕ ವಿಚಾರ. ಇದೀಗ ಹೊರಡಿಸಿರುವ ಆದೇಶ ಈ ಲೋಪವನ್ನು ಸರಿಪಡಿಸುವಂತಿದೆ ಎನ್ನುವುದು ಒಂದು ಉತ್ತಮ ಅಂಶ.

ಕಾನೂನು ಮಾಡುವುದು ಒಂದು ವಿಚಾರವಾದರೆ ಅದರ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಇನ್ನೊಂದು ವಿಚಾರ. ಹೆಲ್ಮೆಟ್‌ ಕಡ್ಡಾಯಗೊಳಿಸಿದ ಕಾನೂನು ಬಗ್ಗೆ ವ್ಯಾಪಕವಾಗಿ ಅರಿವು ಮೂಡಿಸುವ ಕೆಲಸವನ್ನು ಸಂಬಂಧಪಟ್ಟ ಇಲಾಖೆ ಮಾಡಬೇಕು.ಕಾನೂನು ಇದೆ ಎಂದು ಅತ್ಯುತ್ಸಾಹದಲ್ಲಿ ದಂಡ ವಸೂಲು ಮಾಡಲು ಹೊರಟರೆ ಮತ್ತೆ ಜನರ ಆಕ್ರೋಶಕ್ಕೆ ಗುರಿಯಾಗಬೇಕಾದೀತು. ಏಕಾಏಕಿ ದಂಡ ವಸೂಲು ಮಾಡುವ ಬದಲು ಕೆಲವು ದಿನಗಳ ಮಟ್ಟಿಗೆ ಅರಿವು ಮೂಡಿಸಿ ಎಚ್ಚರಿಕೆ ಕೊಟ್ಟು  ಬಿಡುವುದು ಸರಿಯಾದ ಕ್ರಮವಾದೀತು. ಕೊರೊನಾ ಕಾರಣದಿಂದ ಈಗಾಗಲೇ ಜನರು ಆರ್ಥಿಕವಾಗಿ ಕಂಗೆಟ್ಟಿದ್ದಾರೆ. ಹೆಚ್ಚಿನವರಿಗೆ ದ್ವಿಚಕ್ರ ವಾಹನ ವೃತ್ತಿಯ ಅಥವಾ  ಜೀವನೋಪಾಯವನ್ನು ಗಳಿಸಿಕೊಳ್ಳುವ ಸಾಧನವಾಗಿದೆ. ಇಂಥವರಿಂದ ನಿರ್ದಯವಾಗಿ ದಂಡ ವಸೂಲು ಮಾಡುವುದು ಸರಿಯಲ್ಲ. ಅಂದಹಾಗೇ ದಂಡ ಹಾಕುವ ಬದಲು ಅಷ್ಟೇ ಬೆಲೆಯ ಹೆಲ್ಮೆಟ್‌ ಕೊಟ್ಟು ಎಚ್ಚರಿಕೆ ನೀಡಿ ಕಳುಹಿಸಬಹುದು ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸಲಹೆಯನ್ನು ಏಕೆ ಪರಿಗಣಿಸಬಾರದು? ಕೆಲವು ಸಂದರ್ಭಗಳಲ್ಲಿ  ದಂಡಕ್ಕಿಂತ “ಗಾಂಧಿಗಿರಿ” ಹೆಚ್ಚು ಪರಿಣಾಮ ಬೀರುತ್ತದೆ.---
Previous articleಕೊರೊನಾ ಬೇಜವಾಬ್ದಾರಿ ಬೇಡ : ಮೋದಿ ಕಿವಿ ಮಾತು
Next articleಹಬ್ಬಕ್ಕಾಗಿ 392 ವಿಶೇಷ ರೈಲುಗಳು

1 COMMENT

  1. ಸರ್ಕಾರಿ ನಡೆಸಲು ದುಡಿಲ, ಅದ್ಕೆ ಸಿಕ್ಕಿಲ್ಲದಕೆ ದಂಡ

LEAVE A REPLY

Please enter your comment!
Please enter your name here