ಕಾರ್ಕಳ : ಗಾಂಧಿ ಜಯಂತಿಯಂದು ಸ್ವಚ್ಛತೆ ಕುರಿತು ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಸ್ವಚ್ಛತಾ ಅಭಿಯಾನ, ಅರಿವು ಮೂಡಿಸುವ ಕಾರ್ಯಕ್ರಮ, ಬರಹ, ಭಾಷಣ ಎಲ್ಲೆಡೆ ಕೇಳಿಬರುತ್ತಿದೆ. ಗಾಂಧಿ ಜಯಂತಿಯಂದು ಊರಿಗೆ ಊರೇ ಸ್ವಚ್ಛತೆಯಲ್ಲಿ ಪಾಲ್ಗೊಳ್ಳುವುದು ಕಾಣುತ್ತೇವೆ. ಇವರೆಲ್ಲರ ನಡುವೆ ಭಿನ್ನವಾಗಿ ತೋರುತ್ತಾರೆ ಫೆಲಿಕ್ಸ್ ವಾಝ್. ಒಂದರ್ಥದಲ್ಲಿ ಇವರೇ ಕಾರ್ಕಳದ ಸ್ವಚ್ಛತಾ ರಾಯಭಾರಿ.
ಸ್ವರಾಜ್ ಮೈದಾನ ಆಸುಪಾಸು ಬೆಳಗ್ಗಿನ ವೇಳೆ ಹೋದಲ್ಲಿ ಫೆಲಿಕ್ಸ್ ವಾಝ್ ಕಾಣಸಿಗುವರು.ಕ್ಯಾಪ್ಧರಿಸಿ, ತಮ್ಮಷ್ಟಕ್ಕೆ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿವರು. ಮಂಗಳಪಾದೆಯ ಫೆಲಿಕ್ಸ್ ವಾಝ್ ತನ್ನ ಪರಿಸರದಲ್ಲಿ ಕಾಣಸಿಗುವ ಪ್ಲಾಸ್ಟಿಕ್ ವಸ್ತುಗಳನ್ನು ಹೆಕ್ಕಿ ಪುರಸಭೆಯ ಕಸ ಸಾಗಾಟದ ಲಾರಿಗೆ ತುಂಬುವುದು ಮಾತ್ರವಲ್ಲದೇ ಪ್ರತಿದಿನ ಆರೇಳು ಕಿ.ಮೀ. ತನ್ನ ಕಾರಿನಲ್ಲಿ ಸಾಗಿ ರಸ್ತೆ ಬದಿಯಿರುವ ಕಸವನ್ನು ತುಂಬಿ ಬಳಿಕ ಕಸ ಸಾಗಾಟದ ವಾಹನಕ್ಕೆ ರವಾನಿಸುತ್ತಾರೆ.
ಪರಿಸರ ಪ್ರೀತಿ
ಸ್ವಚ್ಛತೆ, ಪರಿಸರವನ್ನೇ ಉಸಿರಾಗಿಸಿಕೊಂಡಿರುವ ಮಂಗಳಪಾದೆಯ ಫೆಲಿಕ್ಸ್ ಅವರಿಗೀಗ 71 ವರ್ಷ. ಮಂಗಳಪಾದೆ, ಕೋರ್ಟ್ ರಸ್ತೆ, ಸ್ವರಾಜ್ ಮೈದಾನ, ರಾಮಸಮುದ್ರ ಪರಿಸರ ಸ್ವಚ್ಛವಾಗಿಡುವಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿದ್ದಾರೆ ಫೆಲಿಕ್ಸ್.

ಗೋಣಿ ಚೀಲ ಅಳವಡಿಕೆ
ಫೆಲಿಕ್ಸ್ ವಾಝ್ ಅವರು ಸ್ವರಾಜ್ ಮೈದಾನ ಸೇರಿದಂತೆ ಮುಖ್ಯ ರಸ್ತೆ ಬದಿಯಲ್ಲೆಲ್ಲ ಗೋಣಿ ಚೀಲ ಅಳವಡಿಸಿ ಸಾರ್ವಜನಿಕರಿಗೆ ಕಸ ಹಾಕಲು ಅನುಕೂಲ ಮಾಡಿಕೊಟ್ಟಿರುತ್ತಾರೆ. ಭೂಮಿ ತಾಯಿಯನ್ನು ಸ್ವಚ್ಛತೆಯಲ್ಲಿರಿಸಿ, ಸ್ವಚ್ಛ ಭಾರತ್, ಸ್ವಚ್ಛತೆ ಕಾಪಾಡಿ ಎಂಬ ಭಿತ್ತಿಪತ್ರವನ್ನು ಅದರ ಪಕ್ಕದಲ್ಲಿ ಅಂಟಿಸಿದ್ದು, ಕೆಲವೆಡೆ ಚೀಲಗಳನ್ನು ತೂಗುಹಾಕುವಂತೆ ಹ್ಯಾಂಗರ್ ವ್ಯವಸ್ಥೆಯನ್ನೂ ಕಲ್ಪಿಸಿದ್ದಾರೆ.
ಕುವೈಟ್ ಉದ್ಯೋಗಿಯಾಗಿದ್ದ ಫೆಲಿಕ್ಸ್ ವಾಝ್ ಅವರು ಅಲ್ಲಿ ಚಾಲಕರಾಗಿ 35 ವರ್ಷಗಳ ಕಾಲ ದುಡಿದು 2009ರಲ್ಲಿ ಹುಟ್ಟೂರಿಗೆ ಮರಳಿ ಬೇಸಾಯದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಹಲವಾರು ಸಂಘ-ಸಂಸ್ಥೆಗಳು ಫೆಲಿಕ್ಸ್ ಅವರನ್ನು ಸನ್ಮಾನಿಸಿವೆ.
ಸಿಂಗಾಪುರ ಅತ್ಯಂತ ಸುಂದರ, ಸ್ವಚ್ಛ ನಗರವೆಂದು ಬಣ್ಣಿಸಲಾಗುತ್ತಿದೆ. ನಮ್ಮ ದೇಶವನ್ನು ಸ್ವಚ್ಛಗೊಳಿಸಿ ಯಾಕೆ
ಸಿಂಗಾಪುರ ಮಾಡಬಾರದು ? ಇಲ್ಲಿನಭ್ರಷ್ಟ ವ್ಯವಸ್ಥೆಯನ್ನು ಹೋಗಲಾಡಿಸಿ, ಅಭಿವೃದ್ಧಿ ಪಡಿಸಿದಲ್ಲಿ ನಾವು ಇಲ್ಲೇ ಸಿಂಗಾಪುರವನ್ನು ಕಾಣಬಹುದಾಗಿದೆ ಎನ್ನುತ್ತಾರೆ ಫೆಲಿಕ್ಸ್ ವಾಝ್.































