ತೋಡಿಗಿಂತ ಕಡೆಯಾಗಿದೆ ಮಲೆಬೆಟ್ಟು ಮೊಗೇರ ಕಾಲನಿ ರೋಡು

ಕಾರ್ಕಳ, ಸೆ. 10: ದುರ್ಗಾ ಗ್ರಾಮದ  ಮಲೆಬೆಟ್ಟು  ಮೊಗೇರ ಕಾಲನಿಯ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು,  ವಾಹನಗಳ ಮಾತು  ಬಿಡಿ ಜನರು ಕೂಡ ನಡೆದುಕೊಂಡು ಹೋಗಲೂ ನಾಲಾಯಕ್‌ ಆಗಿದೆ.

ದಟ್ಟವಾದ ಕಾಡಿನ ನಡುವೆ ಇರುವ ಈ ಊರು  ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಎಸ್‌ಸಿ   ಕಾಲನಿ ಆಗಿದ್ದರೂ ಇಲ್ಲಿಗೆ ಯಾವ ಸರಕಾರಿ ಸೌಲಭ್ಯವೂ ತಲುಪಿಲ್ಲ. 

ಮಳೆಗಾಲದಲ್ಲಿ ಪೂರ್ತಿ  ಕೊಚ್ಚಿ ಹೋಗಿ ಸದ್ಯ ಪಳೆಯುಳಿಕೆಯಂತಿರುವ  ರಸ್ತೆಯ  ಪರಿಸ್ಥಿತಿಯನ್ನು ನೋಡಿ ಇಲ್ಲಿಗೆ ಯಾವ ಆಟೋದವರು ಬರಲು ಒಪ್ಪುತ್ತಿಲ್ಲ.

ಕಾರ್ಕಳ- ತೆಳ್ಳಾರ್-‌ ಬೆದ್ರಪಲ್ಕೆಯಾಗಿ ಮೊಗೇರ ಕಾಲನಿಗೆ ಬರುವ ರಸ್ತೆ

ಗ್ರಾಮದಲ್ಲಿ ಸುಮಾರು 30 ಮನೆಗಳಿದ್ದು , ಎಲ್ಲ ಅಗತ್ಯಗಳಿಗೂ ಇಲ್ಲಿನವರು ತೆಳ್ಳಾರ್‌ಗೆ  ಹೋಗಬೇಕು. ಆದರೆ ತೆಳ್ಳಾರ್‌ ಸಂಪರ್ಕಿಸುವ 3   ಕಿ.ಮೀ. ರಸ್ತೆಯ ಪ್ರಯಾಣ ಎನ್ನುವುದು ಒಂದು ಹರಸಾಹಸವೇ ಸರಿ.

ಮಲೆಬೆಟ್ಟು ಸಂಪರ್ಕಿಸಲು  ತೆಳ್ಳಾರ್ ಮತ್ತು ಮುಡಾರು ಎರಡು  ಕಡೆಯಿಂದ ಮಣ್ಣಿನ ರಸ್ತೆ ಇದ್ದರೂ ಅವುಗಳ  ಹೆಸರಿಗೆ ಮಾತ್ರ ರಸ್ತೆ. ಎರಡೂ ರಸ್ತೆಗಳು  ಹೊಂಡಗುಂಡಿಯಿಂದಾಗಿ  ತೋಡಿಗಿಂತ ಕಡೆಯಾಗಿದೆ. ಪಡಿತರ ಅಂಗಡಿ,  ಆಸ್ಪತ್ರೆ, ಶಾಲಾ- ಕಾಲೇಜು, ನೌಕರಿ, ಬ್ಯಾಂಕ್ ಮತ್ತಿತರ ಅಗತ್ಯಗಳಿಗೆ ನಿತ್ಯ ಓಡಾಟ ನಡೆಸುವವರು ಅನುಭವಿಸುತ್ತಿರುವ ಸಂಕಷ್ಟ ಅಷ್ಟಿಷ್ಟಲ್ಲ.ಎರಡು ದಶಕಗಳ ಹಿಂದೆ ಒಮ್ಮೆ ಬರೀ 1 ಕಿ.ಮೀ.ರಸ್ತೆಗೆ ಡಾಮರು ಹಾಕಿದ್ದರೂ ಅದರ ಕುರುಹು ಕೂಡ ಈಗ ಕಾಣುತ್ತಿಲ್ಲ.

 ಅನಾರೋಗ್ಯದಂತಹ ತುರ್ತು ಸಂದರ್ಭಗಳಲ್ಲಿ ಕಾರ್ಕಳ ಆಸ್ಪತ್ರೆಗೆ ತಲುಪುವಾಗ ಜೀವ ಉಳಿಯುತ್ತದೆ ಎಂದು ಹೇಳುವುದೇ ಕಷ್ಟ.ಇಂತಹ ಘಟನೆಗಳು ಹಲವಾರು ಬಾರಿ ನಡೆದಿದೆ.

 ಕುಡಿಯುವ ನೀರಿನ ಯೋಜನೆಯ ಅರ್ಧದಲ್ಲೇ ನಿಂತು ಹೋಗಿದೆ. ದಾರೀದೀಪದ ವ್ಯವಸ್ಥೆ ಇಲ್ಲ. ಒಟ್ಟಾರೆಯಾಗಿ ಇಡೀ ಕಾರ್ಕಳ ತಾಲೂಕಿನಲ್ಲೇ ಅತ್ಯಂತ ಹಿಂದುಳಿದಿರುವ ಹಳ್ಳಿ ಇದು. ಹಲವಾರು ಬಾರಿ ಅಧಿಕಾರಿಗಳು, ರಾಜಕೀಯ ನಾಯಕರಲ್ಲಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆಯ ಸಮಸ್ಯೆಯು ಬಗೆ ಹರಿಯದಿದ್ದರೆ  ಈ ಬಾರಿಯ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ಊರಿನ ಜನ.







































































error: Content is protected !!
Scroll to Top