ಬೆಳ್ಮಣ್, ಸೆ.10 : ಮಂಗಳೂರು-ಅತ್ರಾಡಿ ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿದ ಸರ್ವೆ ಕಾರ್ಯ ಕಳೆದ ಶುಕ್ರವಾರ ನಡೆದಿದೆ.ಈ ಮೂಲಕ ಬಹುಕಾಲದ ಕನಸಾಗಿರುವ ಈ ಯೋಜನೆಗೆ ಮರಳಿ ಜೀವ ಬಂದಂತಾಗಿದೆ. ನೇರವಾಗಿ ಮಂಗಳೂರು ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ರಸ್ತೆಯಾಗಿದ್ದು, ದಿ. ವಿ.ಎಸ್. ಆಚಾರ್ಯ ಅವರ ಕನಸಿನ ಕೂಸಿದು.
ಮುಂಡ್ಕೂರಿನ ರಸ್ತೆ ಬದಿ ಜಮೀನು ಹಾಗೂ ಕಟ್ಟಡ ಮಾಲಕರಿಗೆ ಕಾರ್ಕಳ ಲೋಕೋಪಯೋಗಿ ಇಲಾಖೆ ಕಚೇರಿಯಿಂದ ಕಳೆದ ನವೆಂಬರ್‍ನಲ್ಲಿ ಜಮೀನು ತೆರವುಗೊಳಿಸಲು ನೊಟೀಸ್ ಜಾರಿಯಾಗಿದೆ.
ಮಂಗಳೂರು-ಅತ್ರಾಡಿ ರಾಜ್ಯ ಹೆದ್ದಾರಿ 67ರ ಕಿ.ಮೀ. 36.48 ರಿಂದ , ಕಿ.ಮೀ. 46.28 ಮತ್ತು ಕಿ.ಮೀ.49.99 ರವರೆಗೆ (ಸಂಕಲಕರಿಯ-ಮುಂಡ್ಕೂರು-ಬೆಳ್ಮಣ್ ರಸ್ತೆ ಹಾಗೂ ಬೆಳ್ಮಣ್-ಗುಂಡುಕಲ್ಲು ರಸ್ತೆ) ಯ ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಕುರಿತು ರಸ್ತೆಯ ಇಕ್ಕೆಲಗಳಲ್ಲಿರುವ ಜಾಗದ ಸರ್ವೆ ಕಾರ್ಯ ನಡೆಸಲು ಉದ್ದೇಶಿಸಲಾಗಿದ್ದು ಶುಕ್ರವಾರ ಮಂಗಳೂರಿನ ಭೂಮಿ ಸರ್ವೆ ಸಂಸ್ಥೆಯವರು ಎರಡು ಗುಂಪುಗಳಾಗಿ ಸರ್ವೆ ನಡೆಸಿದ್ದಾರೆ.

ಕಾರ್ಕಳದ ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‍ರವರು ಈ ಹಿಂದೆ ನವೆಂಬರ್‍ನಲ್ಲಿ ಅಧಿಕೃತ ನೋಟೀಸನ್ನು ಸುಮಾರು 250 ಮಂದಿಗೆ ರವಾನೆ ಮಾಡಿದ್ದರೂ ಯಾವುದೇ ಸಭೆ ಕರೆಯದೇ ಇದೀಗ ಸರ್ವೆ ನಡೆಸಿದ್ದಾರೆ. ಮುಂಡ್ಕೂರು `ಭಾಗದಲ್ಲಿ ರಸ್ತೆ ಇಕ್ಕಟ್ಟಾಗಿದ್ದು ಜನ ಜಾಗ ಬಿಡಲೇಬೇಕಾದ ಅನಿವಾರ್ಯತೆ ಎದುರಾಗಿದ್ದು ಯಾವ ರೀತಿಯಲ್ಲಿ ಸ್ಪಂದಿಸುತ್ತಾರೆ ಎಂದು ನೋಡಬೇಕಾಗಿದೆ.
ಈ ಹಿಂದೆ ನೊಟೀಸ್ ಜಾರಿಯಾಗಿದ್ದ ಸಂದರ್ಭ ಇಲಾಖೆಯ ಇಂಜಿನಿಯರ್ ಮಿಥುನ್ ತಿಳಿಸಿದಂತೆ ಸಂಕಲಕರಿಯ ಸೇತುವೆಯಿಂದ ಬೆಳ್ಮಣ್ ಚರ್ಚ್‍ವರೆಗೆ ರಸ್ತೆ ಅಗಲೀಕರಣ ನಡೆಯಬೇಕಾಗಿದ್ದು ಈ ಬಗ್ಗೆ ಸರ್ವೆಕಾರ್ಯ ನಡೆಯ ಬೇಕಾಗಿರುವುದರಿಂದ ಈ ನೋಟೀಸ್ ಜಾರಿ ಮಾಡಲಾಗಿದೆ. ಸರ್ವೆಯ ವರದಿಯನ್ನು ಕಾರ್ಕಳ ಶಾಸಕರ ಶಿಫಾರಸ್ಸಿನಂತೆ ಲೋಕೋಪಯೋಗಿ ಇಲಾಖೆಗೆ ಕಳುಹಿಸಲಾಗುವುದು ಎಂದರು. ಅಗಲೀಕರಣ ಸಂದರ್ಭ ಜಮೀನು, ಕಟ್ಟಡ ಕಳೆದುಕೊಳ್ಳುವವರು ಜಿಲ್ಲಾಧಿಕಾರಿಗಳ ಮೂಲಕ ಪರಿಹಾರ ಪಡೆಯಲಿರುವರು ಎಂದರಲ್ಲದೆ ಇದು ಕೇವಲ ಸರ್ವೆ ಮಾತ್ರ, ರಾಜ್ಯ ಹೆದ್ದಾರಿ ನಿರ್ಮಾಣ ಕಾರ್ಯ ಆರಂಭವಲ್ಲ ಎಂದಿದ್ದರು.

ರಾಜ್ಯ ಹೆದ್ದಾರಿಗೆ ಮತ್ತೆ ಮರು ಜೀವ
ಈ ಹಿಂದೆ ಮುಂಡ್ಕೂರು, ಸಂಕಲಕರಿಯ ಭಾಗದ ಜನರಿಗೆ ರವಾನೆಯಾದನೊಟೀಸ್ ಹಾಗೂ ಶುಕ್ರವಾರ ನಡೆದ ಸರ್ವೆಕಾರ್ಯದಿಂದಾಗಿ ಮಂಗಳೂರು-ಅತ್ರಾಡಿ ಹೆದ್ದಾರಿ ಯೋಜನೆಗೆ ಮತ್ತೆ ಮರು ಜೀವ ಬಂದಂತಾಗಿದೆ. ಬಹಳ ವರ್ಷಗಳಿಂದ ಈ ಹೆದ್ದಾರಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದ್ದು, ಇದೀಗ ಸರ್ವೆ ಕಾರ್ಯ ನಡೆದಿರುವುದೂ ಹೆದ್ದಾರಿ ಪ್ರಕ್ರಿಯಗೆ ಮರು ಜೀವ ಬಂದಂತಾಗಿದೆ. ಏನಿದ್ದರೂ ಸದುದ್ದೇಶದಿಂದ ಕೂಡಿದ ಹೆದ್ದಾರಿ ಯೋಜನೆಗೆ ಜನ ಜಾಗ ಬಿಟ್ಟು ಕೊಡಲು ತಯಾರಾಗಿದ್ದಾರೆ.
ಈ ಹಿಂದೆ ನಮ್ಮೂರಿನ ಹೆಚ್ಚಿನ ಮಂದಿಗೆ ನೋಟೀಸ್ ಜಾರಿಯಾಗಿತ್ತು. ಇದೀಗ ಏಕಾಏಕಿ ಸರ್ವೆ ಕಾರ್ಯ ನಡೆಯುತ್ತಿರುವ ಬಗ್ಗೆ ಒಂದಿಷ್ಟು ಆತಂಕ ಎದುರಾದರೂ ಸದುದ್ದೇಶದಿಂದ ಕೂಡಿದ ಕೆಲಸಕ್ಕೆ ನಮ್ಮ ಅಡ್ಡಿ ಇಲ್ಲ.
-ಪ್ರತಾಪ ಶೆಟ್ಟಿ ಮುಂಡ್ಕೂರು ದೊಡ್ಡಮನೆ
ರಸ್ತೆಯ ಮಧ್ಯದಿಂದ ಇಕ್ಕೆಲಗಳಿಗೆ ತಲಾ 15 ಮೀ. ನಷ್ಟು ರಸ್ತೆ ಅಗಲೀಕರಣಕ್ಕೆ ಸರ್ವೆ ನಡೆಸಲಾಗಿದೆ. ಕಟ್ಟಡಗಳಿದ್ದಲ್ಲಿ ಲೋಕೋಪಯೋಗಿ ಇಲಾಖೆಯೇ ನಿರ್ಧರಿಸಲಿದೆ.
-ಭೂಮಿ ಸರ್ವೆ ಸಂಸ್ಥೆಯ ನೌಕರ




















