ಒಂದು ಕೊಡೆಯ ಕತೆ-ನಗೆಬರಹ : ಮಿತ್ರಪ್ರಭಾ ಹೆಗ್ಡೆ

ದಕ್ಷಿಣ ಕನ್ನಡದ ಮಳೆಗೂ ಸಾಹಿತ್ಯಕ್ಕೂ ವಿಶಿಷ್ಟ ನಂಟು ಎಂಬುದು ನನ್ನ ಭಾವನೆ. ಬಕೆಟ್ಟನ್ನು ಬೋರಲು ಹಾಕಿದಂತೆ ದೋ… ದೋ… ಎಂದು ಸುರಿಯುವ ಈ ಮಳೆಯನ್ನು ನೋಡಿಯೇ ಮುದ್ದಣನಿಗೆ ಕಾವ್ಯ ಬರೆಯುವ ಉತ್ಸಾಹ ಉಂಟಾಗಿರಬೇಕು. ನಮಗೋ ಸುರಿವ ಮಳೆಗೆ ತೋಯ್ದುಕೊಂಡು, ಚಂಡಿ ಮುದ್ದೆಯಾಗಿ ಕಾಲೇಜು ಸೇರಿ, ಚಳಿಗೆ ನಡುಗುತ್ತಾ, ಯಾರು.. ಯಾರು.. ಚಂಡಿ ಮುದ್ದೆಗಳೆಂದು ಪರೀಕ್ಷಿಸುವ ತವಕ. ಕ್ಲಾಸ್ ನ ಹೊರಬದಿಗಳಲ್ಲಿ ಸಾಲಾಗಿ ಒರಗಿಸಿಡುವ ಕೊಡೆಗಳು ಹೋಂ ವರ್ಕ್ ಮಾಡದೆ ಹೊರಗೆ ಹಾಕಿದ ಹೈಸ್ಕೂಲ್ ವಿದ್ಯಾರ್ಥಿಗಳನ್ನು ನೆನಪಿಸುವಂತಹದ್ದು. ನಮ್ಮ ಗೆಳತಿಯರಲ್ಲಿ ರಮಾ ಕಲ್ಲನ್ನೂ ಮಾತನಾಡಿಸಬಲ್ಲವಳು. ಮಾತಾಡುವ ಭರದಲ್ಲಿ ಅವಳ ವಸ್ತುಗಳನ್ನು ಬಿಟ್ಟು ಹೋಗುವುದು ಅವಳ ದಿನಚರಿಯ ಒಂದು ಭಾಗ. ಸಂಜೆ ಕ್ಲಾಸ್ ಮುಗಿಸಿ ಮನೆಗೆ ಹೊರಡಲಿಕ್ಕೆ ಸಿದ್ಧತೆ ನಡೆದಾಗ ನನ್ನ ಇನ್ನೋರ್ವ ಗೆಳತಿ ಭಾಗೀರಥಿ ಪರದಾಡಲಿಕ್ಕೆ ಶುರು ಮಾಡಿದಳು. ಎಂತ ಮಾರಾಯ್ತಿ ಅರಂಟುವುದು ಎಂದೆ.

ಕೊಡೆ ಕಾಣುತ್ತಾ ಇಲ್ಲ ಅಂದ್ಲು. ಕೊನೆಗೆ ರಮಾನೆ ಕೊಡೆ ಕೊಂಡ್ಹೋಗಿರಬೇಕು ಎನ್ನುವ ತೀರ್ಮಾನಕ್ಕೆ ಬಂದೆವು. ಯಾಕೆಂದರೆ ರಮಾಳ ಕೊಡೆ ಮೂಲೆಯಲ್ಲಿ ಏಕಾಂಗಿಯಾಗಿ ಗೋಡೆಗೊರಗಿತ್ತು. ಇಬ್ಬರದ್ದು ಕಪ್ಪು ಬಣ್ಣದ ಕೊಡೆಗಳಾಗಿರುವುದರಿಂದ ಈ ಪ್ರಮಾದ ಸಂಭವಿಸಿರಬೇಕು ಎಂದು ಸಮಾಧಾನ ಮಾಡಿಕೊಂಡೆವು. ಮಳೆ ಬರುತ್ತಿದ್ದುದರಿಂದ ಬೇರೆ ದಾರಿ ಇಲ್ಲದೇ ಭಾಗೀರಥಿ ಆ ಕೊಡೆಗೆ ಶರಣು ಹೋದಳು. ಆದರೆ ಎಷ್ಟು ಮಾಡಿದ್ರೂ ಕೊಡೆ ತೆರೀತಾನೆ ಇಲ್ಲ. ಬಟನ್ ಒತ್ತಿ ಕೈ ನೋವಾಯ್ತೆ ಹೊರತು ಕೊಡೆ ತೆರೀತಾ ಇಲ್ಲ. ಕೊಡೆ ತಿರುಗಿಸಿ ಹಿಡಿದದ್ದಾಯ್ತು, ಅದರ ಬಸಿರನ್ನು ಬಗೆದದ್ದಾಯ್ತು ಕೊಡೆ ಬಾಯಿ ಬಿಡುವ ಸೂಚನೆಯೇ ಇಲ್ಲ. ನನಗಂತೂ ನಗು ತಡೆಯಲಾಗಲಿಲ್ಲ. ಅಲಿಬಾಬ ಗುಹೆಯ ಬಾಗಿಲು ತೆಗೆದ ಹಾಗೆ ಇದಕ್ಕೇನಾದ್ರು ಕೋಡ್ ವರ್ಡ್ ಇರಬಹುದು ಮಾರಾಯ್ತಿ ಎಂದೆ. ನನ್ನ ಕರ್ಮ ಅಂತ ಸಿಟ್ಟಿನಿಂದ ಕೊಡೆಯನ್ನು ನೆಲಕ್ಕೆ ಬಿಸಾಡಿದಳು. ಟಪ್ಪಂತ ಕೊಡೆ ತೆರೆದೇ ಬಿಟ್ಟಿತು. ಹೊಸದಾಗಿ ಕಂಡ ಈ ದರ್ಶನಕ್ಕೆ ನಗುತ್ತಾ ಬಸ್ ಸ್ಟಾಂಡ್ ಗೆ ಬಂದೆವು.

ಮೊದಲು ಬಸ್ ಹತ್ತಿ ಪಕ್ಕದಲ್ಲಿ ಬ್ಯಾಗ್ ಇಟ್ಟು ಸೀಟ್ ರಿಸರ್ವ್ ಮಾಡಿಟ್ಟೆ. ಐದು ನಿಮಿಷವಾದರೂ ಇವಳ ಸುಳಿವಿಲ್ಲ. ಸರಿ ಅಂಗಡಿಗೆ ಪುಸ್ತಕ ತರುವುದಕ್ಕೆ ಹೋಗಿದ್ದಾಳೇನೋ ಅಂತ ಕುತ್ತಿಗೆ ತಿರುಗಿಸಿ ನೋಡೋಣ ಅಂದರೆ ಕುತ್ತಿಗೆ ನೋವು. ಕುತ್ತಿಗೆ ಉಳುಕಿ ಮೂರು ದಿನವಾಗಿತ್ತು. ಹಿಂದೆ ತಿರುಗಿ ನೋಡಬೇಕೆಂದರೆ ಇಡೀ ದೇಹವೇ ಎದ್ದು ನಿಂತು ತಿರುಗ ಬೇಕಿತ್ತು. ನನ್ನ ಹಿಂದೆ ಬಂದವಳು ಎಲ್ಲಿ ಹೋದ್ಲು ? ಅಂತ ಕತ್ತು ತಿರುಗುವ ತನಕ ಮತ್ತೆ ಮತ್ತೆ ಪ್ರಯತ್ನ ಪಟ್ಟೆ. ಎರಡು ಸೀಟುಗಳ ತನಕ ಹಿಂದಿನ ದರ್ಶನ ಸಿಕ್ಕಿತೇ ವಿನಃ ಅದಕ್ಕಿಂತ ಹಿಂದಿನ ದರ್ಶನ ನನ್ನಿಂದಾಗೊಲ್ಲ ಅಂತ ಕತ್ತು ಸ್ಟ್ರೈಕ್ ಮಾಡ್ತು. ಇನ್ನು ತಡೆಯದೆ ಪುಸ್ತಕ ಬ್ಯಾಗ್ ಎಲ್ಲಾ ಸೀಟ್ ಮೇಲಿರಿಸಿ ತಿರುಗಿ ನಿಂತು ನೋಡಿದರೆ ಎಲ್ಲರೂ ಹಿಂದೆ ತಿರುಗಿ ನೋಡಲಿಕ್ಕೆ ಶುರು ಮಾಡಿದರು. ನೋಡಿದ್ರೆ ಕೊನೆ ಸೀಟ್ ನಲ್ಲಿ ಕೂತು ಭಗೀರಥ ಪ್ರಯತ್ನದಿಂದ ಕೊಡೆಯನ್ನು ಮಣಿಸುವ ಕಸರತ್ತಿಗೆ ತೊಡಗಿದ್ದಳು ಭಾಗೀರಥಿ. ಬಸ್ಸಿನಲ್ಲಿದ್ದ ಎಲ್ಲಾ ಕಣ್ಣುಗಳು ತನ್ನ ಮೇಲಿದ್ದುದನ್ನು ಕಂಡು ನಾಚಿ ನೀರಾಗಿದ್ದಳು.
ಬಸ್ಸಿನಲ್ಲಿದ್ದ ಎಲ್ಲಾ ಕಣ್ಣುಗಳು ನಮ್ಮನ್ನು ನೋಡಿ ನಗುತ್ತಾ ಇವೆ. ಭೂಮಿ ಬಾಯ್ಬಿಡಬಾರದೇ ಅಂತ ಅನ್ನಿಸಿದ್ದು ಹೌದು. ಒಂದು ವೇಳೆ ರಮಾ ಎದುರು ಸಿಕ್ಕಿದರೆ ಅವಳ ಭೂ ಸಮಾಧಿ ಮಾಡಿಬಿಡ್ತೇನೇನೋ ಎನ್ನುವಷ್ಟು ಕೋಪ ಉಕ್ಕೇರಿ ಬರುತ್ತಿತ್ತು. ಎದುರಲ್ಲಿ ಕೂತ ಪಡ್ಡೆ ಹುಡುಗರು ಲಟಾರಿ ಅಂತ ಅಣಕಿಸುತ್ತಾ ಇದ್ದರು. ಕಿವುಡನ ಮಾಡಯ್ಯ ತಂದೆ ಅಂತ ಬೇಡಿ ಕೊಳ್ಳುವುದೊಂದು ಬಾಕಿ. ಜನರಿಗೆಲ್ಲಾ ಈ ಲಟಾರಿ ಕೊಡೆ ನಮ್ಮದಲ್ಲಾ ಅಂತ ತಿಳಿಯ ಪಡಿಸುವ ಜವಾಬ್ದಾರಿ ನನ್ನ ಮೇಲಿರುವಂತೆ ಗಟ್ಟಿಯಾಗಿ ಭಾಗೀರಥಿಗೆ ಹೇಳಿದೆ. ಹೋಗಿ ಹೋಗಿ ಆ ರಮಾನ ಕೊಡೆ ತಂದಿದ್ದೀಯಲ್ಲ. ಅಲ್ಲೇ ಬಿಟ್ಟು ಬರಲಿಕ್ಕೆ ಆಗಲಿಲ್ಲವಾ ? ಇಲ್ಲೇ ಬಿಸಾಡಿ ಹೋಗು. ಅವಳ ಕೊಡೆ ಇಲ್ಲಿಟ್ಟು ನಮ್ಮ ಕೊಡೆ ಕೊಂಡು ಹೋಗಿದ್ದಾಳಲ್ಲ. ನನ್ನ ಮಾತಿಗೆ ನಗುತ್ತಾ ಇದ್ದ ಭಾಗೀರಥಿಯ ಕೈ ಕೊಡೆಯನ್ನು ಮಡಚುವ ಹರ ಸಾಹಸದಲ್ಲಿ ತೊಡಗಿತ್ತು. ಹೇಗೂ ಲಟಾರಿ ಬಿಸಾಡು ಅದನ್ನು ಅಂತ ಹೇಳಿ ಅವಳ ಕೈಯಿಂದ ತೆಗೆದು ಬಿಸಾಡಿದೆ. ಕೊಡೆ ಮಡಚಿಕೊಂಡೇ ಬಿಡ್ತಲ್ಲ. ಭೂಮಂಡಲವನ್ನು ಗೆದ್ದ ಅನಂದ ನಮ್ಮದು. ಸರಿ, ಇನ್ನು ಏನೇ ಆಗಲಿ, ಎಷ್ಟೇ ಮಳೆ ಬಂದು ನಮ್ಮನ್ನು ಕೊಚ್ಚಿಕೊಂಡು ಹೋಗಲಿ ಕೊಡೆಯನ್ನು ಬಿಡಿಸಬಾರದೆಂಬ ತೀರ್ಮಾನಕ್ಕೆ ಬಂದು ಆ ಬಸ್ಸಿಂದಿಳಿದು ಬೇರೆ ಬಸ್ ಹತ್ತಿ ಕೂತೆವು.

ಮಿತ್ರಪ್ರಭಾ ಹೆಗ್ಡೆ, ಕಾರ್ಕಳ

































































error: Content is protected !!
Scroll to Top