ವಿಶಿಷ್ಟ ವಿಚಾರಧಾರೆಯ ರಾಜಕಾರಣಿ ಪ್ರಣಬ್ ಮುಖರ್ಜಿ

ಬಂಗಾಳದ ಹಳೆಯ ಹುಲಿ ಪ್ರಣಬ್ ಮುಖರ್ಜಿ ಅವರದು ವಿಶಿಷ್ಟವಾದ ವೃತ್ತಿಬದುಕು. ಕೆಳಮಟ್ಟದ ರಾಜಕೀಯದಿಂದ ರಾಷ್ಟ್ರಪತಿ ಹುದ್ದೆಯ ತನಕ ರಾಜಕೀಯ ರಂಗದಲ್ಲಿ ಮಿಂಚಿದವರು ಅವರು. ಸುಮಾರು 5 ದಶಕಗಳ ಸಾರ್ವಜನಿಕ ಬದುಕಿನಲ್ಲಿ ಹಲವು ಬಾರಿ ಕೇಂದ್ರದಲ್ಲಿ ಮಂತ್ರಿಯಾಗಿ ಅಪಾರ ಅನುಭವ ಪಡೆದಿರುವ ಪ್ರಣಬ್ ಸೈದ್ಧಾಂತಿಕ  ವಿರೋಧ ಇದ್ದವರ  ಜತೆಗೂ ಉತ್ತಮ ಸ್ನೇಹ ಸಂಬಂಧವನ್ನು ಸಂಪಾದಿಸಿಕೊಂಡವರು. ಪ್ರಣಬ್ ಮುಖರ್ಜಿ ಅವರ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದರೂ ಅದರಲ್ಲಿ ಅವರ ಅರ್ಥಪೂರ್ಣವಾದ  ಬದುಕಿನ ಅನಾವರಣವಾಗುತ್ತದೆ. ಪ್ರಣಬ್ ಅವರು ಸಾರ್ವಜನಿಕ ಜೀವನದಲ್ಲಿ ಹಲವು ರೀತಿಯ  ಏರಿಳಿತಗಳ ನಡುವೆಯೂ ಸೋಲು , ಗೆಲುವನ್ನು ಸಮಾನವಾಗಿ ಸ್ವೀಕರಿಸಿದ ಕಾರಣ ರಾಷ್ಟ್ರರಾಜಕಾರಣದಲ್ಲಿ ಅಪೂರ್ವ ಮತ್ತು ಪರಿಪೂರ್ಣವಾದ ವ್ಯಕ್ತಿತ್ವವನ್ನು ರೂಪಿಸಿಕೊಂಡರು. ಎಡರಂಗದ ಸಿದ್ಧಾಂತವನ್ನು ಆರಂಭದಿಂದಲೂ  ವಿರೋಧಿಸುತ್ತಾ ಬಂದವರಾದರೂ ಕಮ್ಯುನಿಷ್ಟರ  ಜೊತೆ  ಉತ್ತಮ ಸಂಬಂಧವನ್ನು ಇರಿಸಿಕೊಂಡವರು.  ಪ್ರಣಬ್ ಅವರು ಕಾಂಗ್ರೆಸ್ ನಲ್ಲಿ ಹೊಂದಿದ್ದ ಪಕ್ಷ ನಿಷ್ಠೆ ಪ್ರಶ್ನಾತೀತವಾದರೂ ಕೂಡ ಬಲಪಂಥೀಯವಾದದ ಕಡೆಗೆ ಅವರ ಒಲವಿತ್ತು  ಮತ್ತು ಹಲವು ಸಂದರ್ಭಗಳಲ್ಲಿ ಅದು ಸಾಬೀತಾಗಿದೆ ಕೂಡ. ನಾಗ್ಪುರದಲ್ಲಿ ಆರ್ ಎಸ್ ಎಸ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ ಬಳಿಕ ಕಾಂಗ್ರೆಸ್  ತನ್ನ  ಚಟುವಟಿಕೆಗಳಿಂದ ಪ್ರಣಬ್ ಅವರನ್ನು ದೂರವಿರಿಸಿತು. ಒಂದೆರಡು ಸಲ  ನರೇಂದ್ರ ಮೋದಿಯವರ ಆಡಳಿತ ಶೈಲಿಯನ್ನು  ಹೊಗಳುವ ಮೂಲಕ ತಮ್ಮದೇ  ಪಕ್ಷೀಯರ ಕಣ್ಣು ಕೆಂಪಾಗಲು ಕಾರಣವಾಗಿದ್ದರು.

 ಕಾಂಗ್ರೆಸ್ ನಲ್ಲಿದ್ದ  ಪರಿಶುದ್ಧ  ಹಿನ್ನೆಲೆಯ  ಕೆಲವೇ ನಾಯಕರ ಪೈಕಿ ಒಬ್ಬರಾದರೂ ಪ್ರಧಾನಿಯಾಗುವ ಅವಕಾಶ ಮಾತ್ರ  ಪ್ರಣಬ್ ಗೆ ಸಿಗಲಿಲ್ಲ. ನೆಹರೂ ಗಾಂಧಿ ಕುಟುಂಬದ ಕಡೆಗೆ ನಿಷ್ಠರಾಗಿದ್ದ  ಕಾರಣಕ್ಕೆ ಅವರಿಗೆ ರಾಷ್ಟ್ರಪತಿಯಾಗುವ ಅವಕಾಶ ಲಭಿಸಿತು. ಪ್ರಣಬ್ ರಲ್ಲಿ ಅಡಕವಾಗಿದ್ದ ವಿಶಿಷ್ಟ ವಿಚಾರಧಾರೆ ಎಷ್ಟೋ ಸಂದರ್ಭಗಳಲ್ಲಿ  ಅಚ್ಚರಿಗೆ  ಕಾರಣವಾಗಿರುವುದೂ ಇದೆ. ಸರಳ, ಸಜ್ಜನಿಕೆ ಮತ್ತು ನಿಷ್ಪಕ್ಷಪಾತ ಧೋರಣೆಯ ಅಮೂಲ್ಯ ಗುಣಗಳ  ಮೂಲಕ ” ಅಜಾತಶತ್ರು “ಎಂದು ಗುರುತಿಸಲ್ಪಟ್ಟ ಅವರು ವಿದೇಶಾಂಗ, ವಾಣಿಜ್ಯ ,ಹಣಕಾಸು ,ರಕ್ಷಣಾ ಮಂತ್ರಿಯಾಗಿ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದವರು.  ಅತ್ಯಂತ ನಿಷ್ಠ, ಅನುಭವಿ ರಾಜಕಾರಣಿಯಾದರೂ ಕೂಡ ಆಕಸ್ಮಿಕವಾಗಿ ರಾಜಕೀಯ ಪ್ರವೇಶಿಸಿದ ಅರ್ಥಶಾಸ್ತ್ರಜ್ಞ ಮನಮೋಹನಸಿಂಗ್ ಅವರ  ಕೈಕೆಳಗೆ  ನಿಷ್ಠೆಯಿಂದ ಕೆಲಸ ಮಾಡಿರುವುದು ಪ್ರಣಬ್ ರ ಪಕ್ಷ ನಿಷ್ಠೆಗೆ ಸಾಕ್ಷಿಯಾಗಿದೆ. ಅಧಿಕಾರಕ್ಕಾಗಿ  ಯಾವತ್ತೂ ಹಂಬಲಿಸದೆ ದೊರೆತ  ಜವಾಬ್ದಾರಿಯನ್ನು  ಪ್ರಾಮಾಣಿಕತೆಯಿಂದ ನಿಭಾಯಿಸಿ ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ  ಸ್ಥಾನಮಾನ ಗಳಿಸಿರುವ  ಪ್ರಣಬ್ ಅವರು ರಾಷ್ಟ್ರಸೇವೆಗಾಗಿ ಅತ್ಯುನ್ನತ ನಾಗರಿಕ ಗೌರವ  ” ಭಾರತರತ್ನ ” ಕ್ಕೆ ಪಾತ್ರರಾಗಿರುವರು. ದೇಶದ ಪ್ರಥಮ ಪ್ರಜೆಯಾಗಿ  ರಾಷ್ಟ್ರಪತಿಭವನದ  ಶೋಭೆಯನ್ನು ಮತ್ತಷ್ಟು ಹೆಚ್ಚಿಸಿ ಅತ್ಯುತ್ತಮ ರಾಷ್ಟ್ರಪತಿ ಎಂಬ ಹೆಗ್ಗಳಿಕೆ ಪಡೆದಿರುವರು. ಪ್ರಣಬ್ ಮುಖರ್ಜಿ ಅವರು ದೇವಿದುರ್ಗೆಯ ಪರಮಭಕ್ತ. ಯಾವ ಹುದ್ದೆಯಲ್ಲಿದ್ದರೂ ಪ್ರತಿ ನವರಾತ್ರಿ ಸಂದರ್ಭ  ತಮ್ಮ  ಮನೆಯಲ್ಲಿ ದುರ್ಗೆಯನ್ನು ಸಾಂಪ್ರದಾಯಿಕವಾಗಿ  ಪೂಜಿಸುತ್ತಾ ಬಂದವರು.ಕಾಂಗ್ರೆಸ್ ನಲ್ಲಿದ್ದಾಗ ಸಂಕಷ್ಟ ಸಮಯದಲ್ಲಿ ಆಪದ್ಬಾಂಧವನಂತೆ ಕಾರ್ಯ ನಿರ್ವಹಿಸುವ ಮೂಲಕ  ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿರುವ ಪ್ರಣಬ್ ಅವರ ಕಾರ್ಯಶೈಲಿ ಎಲ್ಲಾ  ವರ್ಗಗಳಿಂದಲೂ  ಮೆಚ್ಚುಗೆಯನ್ನು ಪಡೆದುಕೊಂಡಿದೆ.

ವಿ.ವಿ. ಅಮೀನ್















































































































































error: Content is protected !!
Scroll to Top