ಕಾರ್ಕಳ, ಆ. 30:ಕ್ವಾರಂಟೈನ್‌ನಲ್ಲಿರುವವರ ಮೇಲೆ ಕಣ್ಗಾವಲು ಇಡುವ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಕಾರ್ಕಳ ಪುರಸಭೆಯ ಸಿಬಂದಿಯೊಬ್ಬರ ಮೇಲೆ ಕ್ವಾರಂಟೈನ್‌ನಲ್ಲಿ ಇರುವವರು ಹಲ್ಲೆ ಮಾಡಿದ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪುರಸಭೆಯ ಕರ ವಸೂಲಿಗಾರರಾಗಿರುವ ಚಂದ್ರಶೇಖರ್ (50) ಅವರಿಗೆ ಮುಖ್ಯಾಧಿಕಾರಿಯವರ ಆದೇಶದಂತೆ ಆ. 20ರಿಂದೀಚೆಗೆ ಪುರಸಭಾ ವ್ಯಾಪ್ತಿಯಲ್ಲಿ ಕೋವಿಡ್ -19 ಕ್ವಾರಂಟೈನ್ ವಾಚ್ ಆಪ್‌ನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ, ಹೊರರಾಜ್ಯದಿಂದ ಬಂದ ಸಾರ್ವಜನಿಕರು ಮತ್ತು ಪ್ರಾಥಮಿಕ ಸಂಪರ್ಕ ಹೊಂದಿರುವ ವ್ಯಕ್ತಿಗಳ ಹೋಂ ಕ್ವಾರಂಟೈನ್ ಮನೆಗಳಿಗೆ ದಿನಂಪ್ರತಿ ಭೇಟಿ ನೀಡಿ ಫೋಟೋಗಳನ್ನು ತೆಗೆದು ಆಪ್‌ಲೋಡ್ ಮಾಡುವ ಕರ್ತವ್ಯ ವಹಿಸಲಾಗಿತ್ತು.
ಆ.30ರಂದು ಬೆಳಿಗ್ಗೆ ಕಾರ್ಕಳ ಪುರಸಭಾ ವ್ಯಾಪ್ತಿಯ ಸತ್ಯನಾರಾಯಣ ನಗರದಲ್ಲಿ ಕ್ವಾರಂಟೈನ್‌ನಲ್ಲಿರುವ ಪ್ರಶಾಂತ್ ದೇವಾಡಿಗ, ನಿರ್ಮಲ ಮತ್ತು ಲಕ್ಷ್ಮೀ ದೇವಾಡಿಗ ಎಂಬವರ ಮನೆಗೆ ಹೋದಾಗ, ಪ್ರಶಾಂತ್ ದೇವಾಡಿಗರು ತೀವ್ರ ಅಕ್ಷೇಪ ವ್ಯಕ್ತಪಡಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು, ನಿಮಗೆ ಮಾಡಲು ಬೇರೆ ಕೆಲಸ ಇಲ್ಲ ಎಂಬುದಾಗಿ ನಿಂದಿಸಿದ್ದು, ಆಗ ವಾಪಸು ಹೊರಟ ಚಂದ್ರಶೇಖರ್ ಅವರನ್ನು ಅಡ್ಡಗಟ್ಟಿ ಕೈಯಿಂದ ಹಲ್ಲೆ ಮಾಡಿ, ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಐಪಿಸಿ ಮತ್ತು ಕರ್ನಾಟಕ ಸಾಂಕ್ರಮಿಕ ರೋಗಗಳ ಅಧ್ಯಾದೇಶದ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.



































