ಮುಂಬಯಿ, ಆ.27: ಐಸ್‌ಕ್ರೀಮ್ ಗೆ 10 ರೂ. ಹೆಚ್ಚುವರಿಯಾಗಿ ವಸೂಲು ಮಾಡಿದ ನಗರದ ಹೊಟೇಲೊಂದಕ್ಕೆ ನ್ಯಾಯಮಂಡಳಿ 2 ಲ.ರೂ. ದಂಡ ಹಾಕಿರುವುದಲ್ಲದೆ ಗ್ರಾಹಕನಿಗೆ ನಷ್ಟ ಪರಿಹಾರವನ್ನೂ ನೀಡಲು ಆದೇಶಿಸಿದೆ.
ಆರು ವರ್ಷದ ಹಿಂದೆ ಬಾಂಬೆ ಸೆಂಟ್ರಲ್‌ನಲ್ಲಿರುವ ಹೊಟೇಲ್ ಗ್ರಾಹಕರೊಬ್ಬರಿಂದ ಐಸ್‌ಕ್ರೀಮ್ ಪ್ಯಾಕ್‌ಗೆ ಅದರಲ್ಲಿ ನಮೂದಿಸಿರುವುದಕ್ಕಿಂತ 10 ರೂ. ಹೆಚ್ಚು ವಸೂಲು ಮಾಡಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಅದು ಕೂಲಿಂಗ್ ಚಾರ್ಜ್ ಎಂದು ಸಂಬಂಧಪಟ್ಟವರು ಹೇಳಿದ್ದರು.
ಹೊಟೇಲಿನವರ ವಾದವನ್ನು ತಿರಸ್ಕರಿಸಿದ ನ್ಯಾಯಮಂಡಳಿ ಐಸ್‌ಕ್ರೀಮ್ ಅನ್ನು ತಂಪಾಗಿಯೇ ನೀಡಬೇಕಾಗುತ್ತದೆ. ಅದಕ್ಕೆ ಹೆಚ್ಚುವರಿ ಶುಲ್ಕ ವಿಧಿಸಿದ್ದು ಅನೈತಿಕ ವ್ಯಾಪಾರವಾಗುತ್ತದೆ ಎಂದು ಹೇಳಿದೆ.
































