ದಿಲ್ಲಿಯಲ್ಲಿ ಅಣ್ಣಾಮಲೈ ಬಿಜೆಪಿ ಸೇರ್ಪಡೆ

ದಿಲ್ಲಿ,ಆ.25: ಕರ್ನಾಟಕದ ಸಿಂಗಂ ಎಂದೇ ಖ್ಯಾತರಾಗಿದ್ದ ಸ್ವಯಂ ನಿವೃತ್ತ ಪೊಲೀಸ್‌  ಅಧಿಕಾರಿ ಅಣ್ಣಾಮಲೈ ಆ.25 ಬಿಜೆಪಿಗೆ ಸೇರ್ಪಡೆಯಾದರು. ದಿಲ್ಲಿಯ ಪಕ್ಷದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಪಿ. ಮರಳೀಧರ ರಾವ್‌ ಅವರು ಅಣ್ಣಾಮಲೈ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಮುರುಗನ್‌  ಉಪಸ್ಥಿತರಿದ್ದರು.

     ಕರ್ನಾಟಕ ಕೇಡರ್‌ ಐಪಿಎಸ್‌  ಅಧಿಕಾರಿಯಾಗಿರುವ ಅಣ್ಣಾಮಲೈ ಅವರು ಕಳೆದ ವರ್ಷ ಜೂನ್‌ ನಲ್ಲಿ ಪೊಲೀಸ್‌ ಹುದ್ದೆಗೆ ರಾಜೀನಾಮೆ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿಯ ಕಾರ್ಯಶೈಲಿಯನ್ನು ಮೆಚ್ಚಿಕೊಂಡಿದ್ದ ಅಣ್ಣಾಮಲೈ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳು ಅವರು ರಾಜೀನಾಮೆ ನೀಡಿದ ಬೆನ್ನಿಗೆ ಹುಟ್ಟಿಕೊಂಡಿದ್ದವು.

     ಆದರೆ ಸುಮಾರು ಒಂದು ವರ್ಷ ಕಾಲ ಅಣ್ಣಾಮಲೈ ಯುವಾಭ್ಯುದಯದ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ದೇಶವನ್ನು ಬದಲಾಯಿಸಲು ಯುವಕರಿಂದ ಮಾತ್ರ ಸಾಧ್ಯ ಎಂದು ಪ್ರತಿಪಾದಿಸುತ್ತಿದ್ದರು. ಇತ್ತೀಚೆಗೆ newskarkala.com ಗೆ ನೀಡಿದ ಸಂದರ್ಶನದಲ್ಲೂ ಅವರು ರಾಜಕೀಯ ಸೇರುವ ಸಾಧ್ಯತೆಯನ್ನು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಬಿಜೆಪಿ ಸೇರ್ಪಡೆಯ ದಿಢೀರ್‌ ಘೋಷಣೆ ಅಚ್ಚರಿಯುಂಟು ಮಾಡಿದೆ. ಅಣ್ಣಾಮಲೈ ರಾಜಕೀಯ ಒಲವು-ನಿಲುವುಗಳನ್ನು  ಬಲ್ಲವರು ಎಂದಾದರೂ ಒಂದು ದಿನ ಅವರು ಬಿಜೆಪಿ ತೆಕ್ಕೆಯಲ್ಲಿರುತ್ತಾರೆ ಎಂದು ಹೇಳುತ್ತಿದ್ದರು.

     ತಮಿಳುನಾಡಿನಲ್ಲಿ ಅಸ್ತಿತ್ವ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಬಿಜೆಪಿ ಅಲ್ಲಿ ಅಣ್ಣಾಮಲೈಯವರನ್ನು ಮುಂದಿನ ಚುನಾವಣೆಯಲ್ಲಿ ಟ್ರಂಪ್ ಕಾರ್ಡ್‌ ಆಗಿ ಬಳಸಿಕೊಳ್ಳಲಿದೆ ಎಂದೆನ್ನಲಾಗುತ್ತಿದೆ. ಪೊಲೀಸ್‌ ಸೇವೆಯಲ್ಲಿರುವಾಗ ದಿಟ್ಟ, ನಿರ್ಭೀಡ ಮತ್ತು ದಕ್ಷ ಕರ್ತವ್ಯ ನಿರ್ವಹಣೆಯಿಂದ ಗಮನ ಸೆಳೆದಿದ್ದ ಅಣ್ಣಾಮಲೈ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ನಿರ್ದಿಷ್ಟವಾಗಿ ಯುವ ಸಮುದಾಯ ಅವರ ಬೆನ್ನಿಗಿದೆ. ಅಣ್ಣಾಮಲೈ ಪೊಲೀಸ್‌  ಸೇವೆ ಪ್ರಾರಂಭಿಸಿದ್ದು ಕಾರ್ಕಳದಲ್ಲಿ. ಹೀಗಾಗಿ ಕಾರ್ಕಳದ ಬಗ್ಗೆ  ಅವರಿಗೆ ವಿಶೇಷ ಮಮತೆ ಇದೆ.  newskarkala.com ಸಂದರ್ಶನದಲ್ಲೂ ಅವರು ತಾನು ಕಾರ್ಕಳದಲ್ಲಿ ಕಳೆದ  ದಿನಗಳ  ಬಗ್ಗೆ ಅಭಿಮಾನದಿಂದ  ಮಾತನಾಡಿದ್ದರು.

   ಆಣ್ಣಾಮಲೈ ಬಿಜೆಪಿ ಸೇರ್ಪಡೆಗೆ ಹಲವು ಬಿಜೆಪಿ ನಾಯಕರು ಹರ್ಷ ವ್ಯಕ್ತಪಡಿಸಿದ್ದಾರೆ. ಅಣ್ಣಾಮಲೈಗೆ ಅಭಿನಂದನೆಗಳ ಮಹಾಪೂರ ಹರಿದುಬಂದಿದೆ.

ನ್ಯೂಸ್‌ ಕಾರ್ಕಳ ಇತ್ತೀಚೆಗೆ ಅಣ್ಣಾಮಲೈ ಅವರೊಂದಿಗೆ ನಡೆಸಿದ ಸಂದರ್ಶನಕ್ಕಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ    





























































































































error: Content is protected !!
Scroll to Top