ಮಗನನ್ನು  ಪರೀಕ್ಷಾ ಕೇಂದ್ರ ತಲುಪಿಸಲು 85 ಕಿ.ಮೀ. ಸೈಕಲ್‌ ತುಳಿದ ತಂದೆ

ಭೋಪಾಲ, ಆ. 20: ಮಗನನ್ನು  10ನೇ ತರಗತಿ ಪರೀಕ್ಷೆ ಬರೆಸಲು ತಂದೆ 85 ಕಿ.ಮೀ. ಸೈಕಲ್‌ ತುಳಿದ ವೀಡಿಯೊ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ  ವೈರಲ್‌ ಆಗಿದೆ.

ಮಧ್ಯ ಪ್ರದೇಶದ ಧಾರ್‌ ಜಿಲ್ಲೆಯ ಮನವರ್‌ ತಾಲೂಕಿನ ಶೋಭಾರಾಮ್‌ ಈ ಸಾಹಸ ಮಾಡಿದ ವ್ಯಕ್ತಿ. ಕೊರೊನಾ ಕಾರಣದಿಂದ ಸಾರ್ವಜನಿಕ ಸಾರಿಗೆ ಯಾವುದೂ ಲಭ್ಯವಿಲ್ಲ. ಶೋಭಾರಾಮ್‌ ಬಳಿ ಸೈಕಲ್‌ ಬಿಟ್ಟರೆ ಬೇರೆ ವಾಹನವಿಲ್ಲ. ಹೀಗಾಗಿ ಪರೀಕ್ಷೆ ಕೇಂದ್ರ ತಲುಪಲು ಮಗನನ್ನು ಕುಳ್ಳಿರಿಸಿಕೊಂಡು ಸೈಕಲ್‌ ತುಳಿಯುವುದು ಬಿಟ್ಟರೆ ಬೇರೆ ದಾರಿ ಇರಲಿಲ್ಲ.

ಶೋಭರಾಮ್‌  ಪುತ್ರ ಆಶೀಶ್‌ ಗೆ ಮಂಗಳವಾರ ಧಾರ್‌ ಜಿಲ್ಲಾ ಕೇಂದ್ರದಲ್ಲಿ ಗಣಿತ ಪರೀಕ್ಷೆ ಇತ್ತು. ಸೋಮವಾರ ಮಧ್ಯಾಹ್ನವೇ ತಂದೆ ಮಗ ಸೈಕಲ್‌ ಏರಿದರು. ರಾತ್ರಿಯನ್ನು ದಾರಿ ಮಧ್ಯೆಯೇ ಮಲಗಿ ಕಳೆದು ಸೂರ್ಯ ಹುಟ್ಟುವುದಕ್ಕೆ ಮೊದಲೇ  ಮತ್ತೆ ಶೋಭಾರಾಮ್‌  ಸೈಕಲ್‌ ತುಳಿಯಲು ತೊಡಗಿದರು. ಕೊನೆಗೂ ಹೇಗೋ ಮಾಡಿ ಪರೀಕ್ಷೆ ಶುರುವಾಗಲು ಕೆಲವೇ ನಿಮಿಷ ಇರುವಾಗ ಪರೀಕ್ಷಾ ಕೇಂದ್ರ ತಲುಪಿಬಿಟ್ಟರು.

ಕೂಲಿನಾಲಿ ಮಾಡಿ ಜೀವನ ಸಾಗಿಸುವ  ಶೋಭಾರಾಮ್‌ ಪರೀಕ್ಷೆ ಶುಲ್ಕ ಪಾವತಿಸಲು ಕೂಡ ಏನೆಲ್ಲ ಕೆಲಸ ಮಾಡಿ ಹರ ಸಾಹಸ ಪಟ್ಟಿದ್ದರು.ಕಲಿತು ಸರಕಾರಿ ಅಧಿಕಾರಿಯಾಗಿ ಊರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಮಾಡಿಕೊಡಬೇಕು ಎನ್ನುವುದು ಆಶೀಶ್‌ ಕನಸಂತೆ.































































































error: Content is protected !!
Scroll to Top