ಸಂಪಾದಕೀಯ- ಗಲಭೆ ಆರೋಪಿಗಳಿಂದಲೇ ನಷ್ಟ ವಸೂಲು ಮಾಡುವ ಮೊದಲು…

ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಆ. 11ರಂದು ನಡೆದ ಹಿಂಸಾಚಾರದ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಆಗಿರುವ ನಷ್ಟವನ್ನು ಗಲಭೆ ಮಾಡಿದ ಆರೋಪಿಗಳಿಂದಲೇ ವಸೂಲು ಮಾಡಲು ಸರಕಾರ ನಿರ್ಧರಿಸಿರುವುದು  ಸ್ವಾಗತಾರ್ಹ ನಡೆ. ಈಗೀಗ ಪ್ರತಿಭಟನೆ ಸಂದರ್ಭದಲ್ಲಿ ಸಾರ್ವಜನಿಕ ಸೊತ್ತುಗಳನ್ನು ಒಡೆದು  ಹಾಕುವುದು, ಸುಟ್ಟು ಹಾಕುವುದೆಲ್ಲ ಒಂದು ಪರಿಪಾಠವೇ ಆಗಿದೆ. ಒಂದಷ್ಟು ವಾಹನಗಳ ಗಾಜು ಮುರಿಯದಿದ್ದರೆ, ಅಂಗಡಿಗಳಿಗೆ ಕಲ್ಲು ಎಸೆಯದಿದ್ದರೆ, ಟಯರ್‌ ಸುಡದಿದ್ದರೆ… ಪ್ರತಿಭಟನೆ ತೀವ್ರವಾಗುವುದಿಲ್ಲ ಎಂಬ ಕಲ್ಪನೆ ಪ್ರತಿಭಟನೆಕಾರರಲ್ಲಿದೆ. ಹೀಗೆ ಸೊತ್ತು ನಾಶ ಮಾಡುವವರಿಗೆ ತಕ್ಕ ಪಾಠ ಕಲಿಸಲು ಕಠಿಣ ಶಿಕ್ಷೆ ವಿಧಿಸುವುದು ಮತ್ತು ನಷ್ಟ ಪರಿಹಾರವನ್ನು ಅವರಿಂದಲೇ ವಸೂಲು ಮಾಡುವುದು ಸರಿಯಾದ ಕ್ರಮವೇ. ಸಾರ್ವಜನಿಕರಿಂದಲೂ ಈ ಬಗ್ಗೆ ಬಲವಾದ ಒತ್ತಾಯ ಇತ್ತು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಸರಕಾರ ಸಿಎಎ ಪ್ರತಿಭಟನೆಕಾರರ ವಿರುದ್ಧ ಈ ಮಾದರಿಯ ಕ್ರಮ ಕೈಗೊಂಡು ಮೇಲ್ಪಂಕ್ತಿ ಹಾಕಿಕೊಟ್ಟಿದೆ.

ಆದರೆ ಹೀಗೆ ನಷ್ಟ ವಸೂಲು ಮಾಡುವುದು ಎಣಿಸಿದಷ್ಟು ಸುಲಭವಲ್ಲ. ಆರೋಪಿಗಳಿಗೆ ಸೇರಿದ ಆಸ್ತಿಗಳನ್ನು ಗುರುತಿಸುವುದರಿಂದ ಹಿಡಿದು ಮುಟ್ಟುಗೋಲು ಹಾಕಿ ಹರಾಜು ಹಾಕುವವರೆಗಿನ ಪ್ರಕ್ರಿಯೆ ತುಂಬ ದೀರ್ಘವಾದದ್ದು. ಆರೋಪಿಗಳ ಸ್ವಂತ ಆಸ್ತಿಯನ್ನಷ್ಟೇ ಜಪ್ತಿ ಮಾಡಲು ಅವಕಾಶವಿದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಆರೋಪಿಗಳ ಹೆಸರಿನಲ್ಲಿ ಅವರ ಸ್ವಂತದ್ದು ಎನ್ನಬಹುದಾದ ಆಸ್ತಿ ಇರುವುದಿಲ್ಲ. ಸಾಮಾನ್ಯವಾಗಿ ಬೆಂಗಳೂರಿನಲ್ಲಿ ನಡೆದಂಥ ಗಲಭೆಗಳಲ್ಲಿ ನೇರವಾಗಿ ಭಾಗಿಯಾಗುವವರು ಬಡವರಾಗಿರುತ್ತಾರೆ. ಅವರಿಗೆ  ಸ್ವಂತದ್ದಾದ ಆಸ್ತಿ ಇರುವುದು ಬಹಳ ಕಡಿಮೆ. ಇದ್ದರೂ ಒಂದು ಚಿಕ್ಕ ಮನೆ , ಜೀವನ ನಿರ್ವಹಣೆಗಾಗಿ ಇಟ್ಟುಕೊಂಡ ಚಿಕ್ಕಪುಟ್ಟ ಅಂಗಡಿಗಳು ಅಥವಾ ವಾಹನಗಳಷ್ಟೇ ಇರಬಹುದು.ಹಾಗೊಂದು ವೇಳೆ ಅವರ ಹೆಸರಿನಲ್ಲಿ ಆಸ್ತಿ ಇದ್ದರೂ ಗಲಭೆಯಲ್ಲಿ ಅವರು ಶಾಮೀಲಾಗಿದ್ದಾರೆ ಎಂಬುದನ್ನು ಸಂಶಯಾತೀತವಾಗಿ ಸಾಬೀತುಪಡಿಸುವುದು ಪೊಲೀಸ್‌ ಇಲಾಖೆ ಪಾಲಿಗೆ ಭಾರಿ ಪ್ರಯಾಸದ ಕೆಲಸ.

ಸುಪ್ರೀಂ ಕೋರ್ಟಿನ ಮಾರ್ಗಸೂಚಿ ಪ್ರಕಾರ ಹೈಕೋರ್ಟ್‌ ಗಲಭೆಯಲ್ಲಿ ಆಗಿರುವ ನಾಶ ನಷ್ಟದ ಲೆಕ್ಕ ಹಾಕಲು ಕ್ಲೈಮ್ಸ್‌ ಕಮಿಶನರ್‌ ಅವರನ್ನು ನೇಮಿಸಬೇಕು.ಆದರೆ ಆರೋಪಗಳನ್ನು ಸಾಬೀತುಪಡಿಸುವುದು, ಆರೋಪಿಗಳ  ಹೆಸರಿನಲ್ಲಿರುವ ಆಸ್ತಿಯನ್ನು ಗುರುತಿಸುವುದು, ಜಪ್ತಿ ಮಾಡಿ ಹರಾಜು ಹಾಕುವುದೆಲ್ಲ ಸರಕಾರದ ಜವಾಬ್ದಾರಿ. ಈ ಪ್ರಕ್ರಿಯೆಯಲ್ಲಿ ಭೂ ಕಂದಾಯ ಕಾಯಿದೆ ಹಾಗೂ ಇನ್ನಿತರ ಕೆಲವು ಕಾಯಿದೆಗಳ ಸೆಕ್ಷನ್‌ಗಳನ್ನು ಅನುಸರಿಸಬೇಕಾಗುತ್ತದೆ.

ಆರೋಪಿಗಳಿಂದ ನಷ್ಟ ವಸೂಲು ಮಾಡುವ ಕ್ರಮವನ್ನು ವಿಪಕ್ಷಗಳೂ ಬೆಂಬಲಿಸಿವೆ. ಆದರೆ ಈ ಕ್ರಮ ಅತ್ಯಂತ ಪಾರದರ್ಶಕವಾಗಿಯೂ ನಿಷ್ಪಕ್ಷಪಾತವಾಗಿಯೂ ಆಗಬೇಕಾದದ್ದು ಅಗತ್ಯ. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸೇಡಿನ ಕ್ರಮವಾಗದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕು. ಗಲಭೆ ಮಾಡಿದವರಿಗಿಂತಲೂ ಗಲಭೆಗೆ ಕಾರಣಕರ್ತರಾದವರು ಮತ್ತು ಕುಮ್ಮಕ್ಕು ನೀಡಿದವರಿಗೆ ಮರೆಯಲಾಗದ ಪಾಠ ಕಲಿಸುವುದು ಮುಖ್ಯ.

ಯಾವುದೋ ಚಿಕ್ಕ ಕಾರಣಕ್ಕೆ ಪ್ರಾರಂಭವಾಗುವ ಗಲಭೆ ಉಲ್ಬಣಗೊಳ್ಳುವುದು ಅದರ ಜೊತೆಗೆ ಇತರ ಹಿತಾಸಕ್ತಿಗಳು ಸೇರಿಕೊಂಡಾಗ. ಹೆಚ್ಚಿನ ಎಲ್ಲ ಗಲಭೆಗಳ ಹಿಂದೆ ಪರೋಕ್ಷವಾಗಿಯಾದರೂ ರಾಜಕೀಯವಾದ ಕಾರಣಗಳಿರುತ್ತವೆ. ಕೆಲವೊಮ್ಮೆ ವೈಯಕ್ತಿಕ ದ್ವೇಷವನ್ನು ತೀರಿಸಲು ದುಷ್ಕರ್ಮಿಗಳು ಇಂಥ ಅವಕಾಶಗಳನ್ನು ಉಪಯೋಗಿಸಿಕೊಳ್ಳುತ್ತಾರೆ. ಇಂಥ ಕಾರಣಗಳನ್ನು ಪತ್ತೆಹಚ್ಚಿದರೆ ಗಲಭೆಗಳಿಗೆ ಪರಿಣಾಮಕಾರಿಯಾಗಿ ಕಡಿವಾಣ ಹಾಕಬಹುದು.

















































































error: Content is protected !!
Scroll to Top