
ಕೊಂಕಣಿ ಭಾಷೆಗೆ 1100 ವರ್ಷಗಳಷ್ಟು ದೀರ್ಘ ಇತಿಹಾಸ ಇದೆ. ರಾಜಾಶ್ರಯ ಇಲ್ಲದೆ ಸ್ವಯಂ ಆಗಿ ಬೆಳೆದು ಬಂದ ಭಾಷೆ ಕೊಂಕಣಿ. ” ಕೊಂಕಣಿ ಕೊಂಕಣಿ ಸುಂದರ ಉಲ್ವಣಿ ” ಎಂದು ಜನರು ಅದನ್ನು ಪ್ರೀತಿಯಿಂದ ಬೆಳೆಸಿದರು. 1187ರ ಒಂದು ಶಿಲಾ ಶಾಸನದಲ್ಲಿ ದೊರೆತ ಸಾಲುಗಳು ಕೊಂಕಣಿ ಭಾಷೆಯ ಪ್ರಾಚೀನತೆಯನ್ನು ಸಾರಿ ಹೇಳುತ್ತವೆ. 9-10 ನೇ ಶತಮಾನದ ಅವಧಿಯಲ್ಲಿ ಗೋವಾದಲ್ಲಿ ಕೊಂಕಣಿ ಭಾಷೆಯನ್ನು ಜನರು ಮಾತನಾಡುತ್ತಿದ್ದರು ಎಂಬ ಉಲ್ಲೇಖಗಳು ಧಾರಾಳವಾಗಿ ದೊರೆಯುತ್ತವೆ.
ಕದಂಬರ ಆಳ್ವಿಕೆಯ ಸಂದರ್ಭದಲ್ಲಿ ಕೊಂಕಣಿ ಭಾಷೆಗೆ ಗೊಯ್ಕಾನಡಿ ಎಂಬ ಲಿಪಿ ಇತ್ತು ಎಂಬ ಉಲ್ಲೇಖ ದೊರೆಯುತ್ತದೆ. 17ನೆಯ ಶತಮಾನದವರೆಗೂ ಅದೇ ಲಿಪಿ ಬಳಕೆ ಆಗುತ್ತಿತ್ತು. ಆದರೆ ಮುಂದೆ ಆ ಲಿಪಿಯ ಬಳಕೆ ನಿಂತು ಹೋದಾಗ ಕೊಂಕಣಿಯನ್ನು ದೇವನಾಗರಿ( ಸಂಸ್ಕೃತ), ಕನ್ನಡ, ರೋಮಿ, ಮಲಯಾಳಂ ಮತ್ತು ಅರೇಬಿಕ್ ಲಿಪಿಗಳಲ್ಲಿ ಬರೆಯಲು ಆರಂಭವಾಯಿತು. ಕೊಂಕಣಿಯಲ್ಲಿ ಮಹಾ ಸಾಹಿತ್ಯದ ರಚನೆ ನಡೆಯಿತು. ಮಹಾ ಕಾವ್ಯಗಳು, ನಾಟಕಗಳು, ಕಥೆಗಳು ರಚನೆ ಆದವು. ಇಂದು ಕೊಂಕಣಿ ಭಾಷೆಯನ್ನು ಮಾತನಾಡುವ 2.3 ಮಿಲಿಯನ್ ಜನರಿದ್ದು ಅವರು ಕರ್ನಾಟಕ, ಕೇರಳ, ಗುಜರಾತ್, ಗೋವಾಗಳಲ್ಲಿ ಹರಡಿ ಹೋಗಿದ್ದಾರೆ.
ಕೊಂಕಣಿಗರು ಸಾಹಸೀ ಪ್ರವೃತ್ತಿಯವರು. ಶಾಂತಿಯನ್ನು ಬಯಸುವವರು. ಸಮಾಜವನ್ನು ಪ್ರೀತಿಸುವವರು. ಕುಟುಂಬ ವ್ಯವಸ್ಥೆಯನ್ನು ನಂಬಿದವರು. ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದವರು. ಉದ್ಯಮಶೀಲತಾ ಮನೋಭಾವದವರು. ವ್ಯಾಪಾರ, ಮೀನುಗಾರಿಕೆ, ಕೃಷಿ, ವೈದಿಕ ವೃತ್ತಿಗಳಲ್ಲಿ ತೊಡಗಿದವರು. ದೇವಸ್ಥಾನ, ಚರ್ಚು, ಮಂದಿರಗಳನ್ನು ಸ್ಥಾಪನೆ ಮಾಡುವುದರ ಮೂಲಕ ಧಾರ್ಮಿಕ ಭಾವನೆಗಳನ್ನು ಮೆರೆದವರು. ಇಂದು ಹಿಂದೂ, ಮುಸ್ಲಿಂ, ಕ್ರೈಸ್ತ ಈ ಮೂರೂ ಧರ್ಮಗಳಲ್ಲಿ ಕೊಂಕಣಿ ಭಾಷೆಯನ್ನು ಮಾತಾಡುವವರು ಇದ್ದಾರೆ. ಅವರು ತಮ್ಮ ಭಾಷೆಯನ್ನು ಬಹಳ ಪ್ರೀತಿಸುತ್ತಾರೆ.
ಗೋವಾ ಪುಟ್ಟ ರಾಜ್ಯವಾದರೂ ಅಲ್ಲಿ ಅಧಿಕ ಜನ ಮಾತಾಡುವ ಭಾಷೆ ಕೊಂಕಣಿ. ಪೋರ್ಚುಗೀಸರ ದಾಳಿ, ವ್ಯಾಪಕ ಮತಾಂತರ, ಹಿಂಸಾಚಾರ ಇವುಗಳಿಂದ ಗೋವಾ ಸಂತ್ರಸ್ತ ಆಗಿದ್ದರೂ ಕೊಂಕಣಿ ಭಾಷೆ ಅಲ್ಲಿ ಜೀವಂತವಾಗಿ ಉಳಿಯಿತು. ಗೋವಾದ ಸೌಹಾರ್ದತೆಯನ್ನು ಉಳಿಸಿಕೊಳ್ಳುವಲ್ಲಿ ಕೊಂಕಣಿ ಭಾಷೆ ಬಹು ಮುಖ್ಯವಾದ ಪಾತ್ರವನ್ನು ವಹಿಸಿದೆ. ಭಾಷೆ ಅಲ್ಲಿಯ ಜನರನ್ನು ಒಂದು ಮಾಡಿದೆ!
ಅದರಿಂದಾಗಿ 1987ರಲ್ಲೀ ಕೊಂಕಣಿ ಭಾಷೆಯನ್ನು ಗೋವಾ ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಣೆ ಮಾಡಲಾಯಿತು. ಮುಂದೆ ಕೇಂದ್ರ ಸರ್ಕಾರವು 1992 ಆಗಸ್ಟ್ 20ರಂದು ಕೊಂಕಣಿ ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೆಧಕ್ಕೆ ಸೇರಿಸಿ ಆದೇಶವನ್ನು ಹೊರಡಿಸಿತು. ಅಂದಿನಿಂದ ಆ ದಿನವನ್ನು ಕೊಂಕಣಿಗರು ‘ಕೊಂಕಣಿ ಮಾನ್ಯತಾ ದಿವಸ್’ ಆಗಿ ಆಚರಿಸಿಕೊಂಡು ಬಂದಿದ್ದಾರೆ.
ಕರ್ನಾಟಕ ಸರಕಾರವು ಕೊಂಕಣಿ ಭಾಷೆಯ ಮತ್ತು ಸಾಹಿತ್ಯದ ಅಭಿವೃದ್ಧಿಗಾಗಿ 1994ರಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸ್ಥಾಪನೆಯನ್ನು ಮಾಡಿತು.ಆಗ ಕಾರ್ಕಳದವರೇ ಆಗಿದ್ದ ಎಂ. ವೀರಪ್ಪ ಮೊಯಿಲಿಯವರು ಮುಖ್ಯಮಂತ್ರಿ ಆಗಿದ್ದು ಕೂಡ ವಿಶೇಷವಾಗಿತ್ತು.
ಆ ಅಕಾಡೆಮಿಯ ಸ್ಥಾಪನೆಯಿಂದ ಕೊಂಕಣಿ ಭಾಷೆ ಮತ್ತು ಸಾಹಿತ್ಯದ ಅಭಿವೃದ್ಧಿ ವೇಗವನ್ನು ಪಡೆದುಕೊಂಡಿತು.
ಈಗ ಕರ್ನಾಟಕದಲ್ಲಿ ಕೊಂಕಣಿ ಭಾಷೆಯನ್ನು ತೃತೀಯ ಭಾಷೆಯಾಗಿ ಕಲಿಯುವ ಅವಕಾಶ ದೊರೆತಿದೆ. ಈಗ ಕಾರ್ಕಳದವರೇ ಆಗಿರುವ ಜನಪ್ರಿಯ ವೈದ್ಯ ಡಾ. ಜಗದೀಶ್ ಪೈ ಅವರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಆಗಿರುವುದೂ ವಿಶೇಷ.
ಕೊಂಕಣಿಗರ ಪ್ರೀತಿ ಮತ್ತು ಸ್ವಾಭಿಮಾನದ ಪ್ರತೀಕವಾಗಿ ಮಂಗಳೂರಿನಲ್ಲಿ ವಿಶ್ವ ಕೊಂಕಣಿ ಕೇಂದ್ರ ಸ್ಥಾಪನೆ ಆಗಿದೆ. ಕೊಂಕಣಿ ಭಾಷಿಗರು ಇಂದು ಬ್ಯಾಂಕುಗಳನ್ನು, ಬೃಹತ್ ಉದ್ಯಮಗಳನ್ನು ಕಟ್ಟಿದ್ದಾರೆ. ವಿಶ್ವದಾದ್ಯಂತ ಕೊಂಕಣಿ ಸಂಸ್ಕೃತಿಯನ್ನು ಪಸರಿಸಲು ಕಾರಣರಾಗಿದ್ದಾರೆ.
ಎಲ್ಲಾ ಕೊಂಕಣಿ ಭಾಷೆಯನ್ನು ಮಾತನಾಡುವ ಬಂಧುಗಳಿಗೆ ಕೊಂಕಣಿ ಮಾನ್ಯತಾ ದಿವಸದ ಶುಭಾಶಯಗಳು.
* ರಾಜೇಂದ್ರ ಭಟ್ ಕೆ.








































