ನ್ಯೂಸ್‌ಕಾರ್ಕಳ ಡಾಟ್‌ಕಾಮ್ ವಿಶೇಷ ವರದಿ
ಕಾರ್ಕಳ , ಆ. 4 : ವಾಟ್ಸಪ್ ಎಂಬ ಆಧುನಿಕ ಸಾಮಾಜಿಕ ಮಾಧ್ಯಮಕ್ಕೂ ರಾಮಣ್ಣ, ದೂಮಣ್ಣ, ಎಂಕಣ್ಣನಂಥವರು ಭಾರಿ ಹುಮ್ಮಸ್ಸಿನಿಂದ ಭಾಗವಹಿಸುವ ಕೋಳಿ ಅಂಕಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಎಂದು ಕೇಳಿದಿರಾ? ಡಿಜಿಟಲ್ ಮಾಧ್ಯಮವನ್ನು ತಮ್ಮ ವ್ಯವಹಾರಕ್ಕೆ ಬಳಸಿಕೊಳ್ಳುವಲ್ಲಿ ಜೂಜು ಪ್ರಿಯರೂ ಹಿಂದೆ ಬಿದ್ದಿಲ್ಲ. ವಾಟ್ಸಪ್ ಬಳಸಿಯೇ ಕೋಳಿ ಅಂಕ ನಡೆಯುವುದೆಲ್ಲ ಶುರುವಾಗಿ ಬಹಳ ಕಾಲವಾಯಿತು. ಈಗ ವಾಟ್ಸಪ್ನಲ್ಲಿ ನಡೆಯುತ್ತಿರುವುದು ಕೋಳಿ ಅಂಕದ ನಂಟಿನ ಅಪ್ಪಟ ಸಿಂಗಲ್ ನಂಬರ್ ಮಾದರಿಯ ಜೂಜು.
200 ರೂ.ಮೆಂಬರ್
ಯಾರೋ ಒಬ್ಬ ಕೋಳಿ ಅಂಕದ ಹುರಿಯಾಳು ವಾಟ್ಸಪ್ ಗ್ರೂಪ್ ಮಾಡುತ್ತಾನೆ. ಇದಕ್ಕೆ ತನ್ನಂತೆಯೇ ಕೋಳಿ ಅಂಕದ ಹುಚ್ಚು ಇರುವ ಸದಸ್ಯರನ್ನು ಸೇರಿಸಿಕೊಳ್ಳುತ್ತಾನೆ.
ನಂತರ ಶುರುವಾಗುವುದೇ ಅಸಲಿ ಜೂಜು. ಅದು ಹೇಗೆ ಎಂದರೆ ಗ್ರೂಪ್ ನಲ್ಲಿರುವ ಪ್ರತಿಯೊಬ್ಬ ಸದಸ್ಯ 200 ರೂ.ಅನ್ನು ಫೋಜ್ ಪೇ ಅಥವಾ ಈ ಮಾದರಿಯ ಯಾವುದಾದರೊಂದು ಡಿಜಿಟಲ್ ಪಾವತಿ ಮಾಧ್ಯಮದ ಮೂಲಕ ಗ್ರೂಪ್ಅಡ್ಮಿನ್ ಖಾತೆಗೆ ರವಾನಿಸಬೇಕು. ಜೊತೆಗೆ ಒಂದು ಅಂಕೆಯನ್ನು ಆಯ್ದುಕೊಳ್ಳಬೇಕು. ಈ ಅಂಕೆ ಸದಸ್ಯರ ಸಂಖ್ಯೆಯನ್ನು ಹೊಂದಿಕೊಂಡಿರುತ್ತದೆ. ಉದಾಹರಣೆಗೆ 40 ಸದಸ್ಯರಿದ್ದರೆ 1 ರಿಂದ 40 ರ ತನಕದ ಅಂಕಿಗಳಲ್ಲಿ ಒಂದನ್ನು ಆಯ್ದುಕೊಳ್ಳಬೇಕು.
ಎಲ್ಲ ಸದಸ್ಯರ ಹಣ ಬಂದ ಬಳಿಕ ಡ್ರಾ ನಡೆಯುತ್ತದೆ. ಇದು ಲಕ್ಕಿಡಿಪ್ ಮಾದರಿಯ ಡ್ರಾ. ಸದಸ್ಯರು ಆಯ್ದುಕೊಂಡ ಎಲ್ಲ ಅಂಕೆಗಳ ಚೀಟಿ ಅಥವಾ ಬಿಲ್ಲೆಗಳನ್ನು ರಾಶಿ ಹಾಕಿ ಅದರಿಂದ ಒಂದನ್ನು ಆಯ್ದು ತೆಗೆಯುವುದು. ಯಾರ ನಂಬರ್ ಬಂತೋ ಅವನಿಗೆ ಅಂದಿನ ಬಂಪರ್ ಬಹುಮಾನ. ಈ ಡ್ರಾವನ್ನು ಬೇಕಾದರೆ ಲೈವ್ ಆಗಿ ವೀಕ್ಷಿಸುವ ಸೌಲಭ್ಯವೂ ಇದೆ.
ಅಂಕದ ಹುಂಜವೇ ಪಣ
ಒಂದು ವಾಟ್ಸಪ್ ಗ್ರೂಪ್ ಅಂಕದ ಹುಂಜವನ್ನೇ ಬಹುಮಾನವಾಗಿ ಕೊಡುತ್ತಿದೆ. ಗೆದ್ದವರಿಗೆ 3,500 ರೂ. ಬೆಲೆಯ ಹುಂಜ ಸಿಗುತ್ತದೆ. ಹುಂಜವನ್ನು ಗೆದ್ದವನೇ ಬಂದು ತೆಗೆದುಕೊಂಡು ಹೋಗಬೇಕು. ಒಂದು ವೇಳೆ ಹುಂಜ ಬೇಡ ಎಂದರೆ 3,500 ರೂ. ನಗದು ಕೊಡುತ್ತಾರೆ. ಅದ್ಮಿನ್ ಗೆ 4,500 ರೂ. ಲಾಭ.
ಗ್ರೂಪ್ನಲ್ಲಿರುವ ಸದಸ್ಯರ ಸಂಖ್ಯೆಯನ್ನು ಹೊಂದಿಕೊಂಡು ಬಹುಮಾನದ ಮೊತ್ತ ಹೆಚ್ಚುಕಮ್ಮಿ ಆಗಬಹುದು.
ಅಲ್ಲೇ ಡ್ರಾ ಅಲ್ಲೇ ಬಹುಮಾನ
ಇದು ನಿತ್ಯವೂ ನಡೆಯುವ ಡ್ರಾ. ಕೆಲವೊಮ್ಮೆ ದಿನಕ್ಕೆ ಎರಡು ಸಲ ಡ್ರಾ ಆಗುವುದೂ ಇದೆ. ಕೆಲ ದಿನಗಳ ಹಿಂದೆ ಒಂದು ಗ್ರೂಪ್‌ನಲ್ಲಿ ಒಂದೇ ದಿನ ನಡೆದ ಎರಡು ಡ್ರಾದಲ್ಲೂ ಒಬ್ಬರಿಗೆ ಬಂಪರ್ ಬಹುಮಾನ ಸಿಕ್ಕಿದ ಕುರಿತು ಬಿಸಿಬಿಸಿ ಚರ್ಚೆಯಾಗಿತ್ತು. ಅವರು 400 ರೂ. ಹಾಕಿ 7000 ರೂ. ಕಮಾಯಿಸಿದ್ದರಾಂತೆ.
ಸಿಕ್ಕಿ ಬೀಳಬಾರದು ಎಂಬ ಕಾರಣಕ್ಕೆ ಅಡ್ಮಿನ್ಗಳು ಬೇರೆ ಬೇರೆ ಬ್ಯಾಂಕ್ ಖಾತೆಗಳನ್ನು ಉಪಯೋಗಿಸುತ್ತಾರೆ. ತುಂಬ ವಿಶ್ವಾಸ ಪಾತ್ರರಾದ ಸದಸ್ಯರ ಖಾತೆಗಳೂ ಬಳಕೆಯಾಗುತ್ತವೆ. ಒಂದು ಖಾತೆ ಒಂದು ತಿಂಗಳಲ್ಲಿ 2-3 ಕ್ಕಿಂತ ಹೆಚ್ಚು ಸಲ ಉಪಯೋಗವಾಗದಂತೆ ಎಚ್ಚರವಹಿಸುತ್ತಾರೆ.
ಕೊರೊನಾ ಹಾವಳಿಯ ಕಾಲದಲ್ಲಿ ಯಾರೋ ಒಬ್ಬ ಪ್ರಾರಂಭಿಸಿದ ಈ ಜೂಜು ಕ್ರಮೇಣ ಎಲ್ಲೆಡೆಗೆ ವ್ಯಾಪಿಸುತ್ತಿದೆ.ಜನರು ಕೂಡ ಒಮ್ಮೆಲೆ ಸಿಗುವ ಹಣದ ಆಸೆಯಿಂದ ಹಣ ಹಾಕುತ್ತಿದ್ದಾರೆ.
ವಾಟ್ಸಪ್ ಕೋಳಿ ಅಂಕ
ಇದು ಶುರುವಾಗಿ ಬಹಳ ಕಾಲವಾಯಿತು. ಈ ಕೋಳಿ ಅಂಕದಲ್ಲಿ ಭಾಗವಹಿಸುವವರಲ್ಲಿ ಹೆಚ್ಚಿನವರಿಗೆ ವಾಟ್ಸಪ್ ಮೂಲಕ ಆಹ್ವಾನ ಹೋಗಿರುತ್ತದೆ. ಇಲ್ಲಿ ವಾಟ್ಸಪ್ ಉಪಯೋಗ ಆಹ್ವಾನಕ್ಕೆ ಮಾತ್ರ ಸೀಮಿತ. ಆದರೆ ವಾಟ್ಸಪ್ ಮೂಲಕವೇ ಮಾಹಿತಿ ಒಬ್ಬರಿಂದ ಒಬ್ಬರಿಗೆ ಹರಡಿ 1000-1500 ಮಂದಿ ಸೇರುವುದೂ ಇದೆ. ಲಾಕ್ ಡೌನ್ ದಿನಗಳಲ್ಲೂ ಕಾನೂನು ಪಾಲಕರ ಕಣ್ಣಿಗೆ ಮಣ್ಣೆರಚಿ ಅಜ್ಞಾತ ಸ್ಥಳಗಳಲ್ಲಿ ಇಂಥ ಕೋಳಿ ಅಂಕಗಳು ನಡೆದಿವೆ.
ಪೊಲೀಸರು ಏನೆನ್ನುತ್ತಾರೆ?
ಸಾಮಾಜಿಕ ಜಾಲತಾಣದ ಮೂಲಕವೇ ಹಲವಾರು ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ವಾಟ್ಸಪ್ ಜೂಜು, ಮಟ್ಕಾವನ್ನೆಲ್ಲ ಮಟ್ಟ ಹಾಕುವ ನಿಟ್ಟಿನಲ್ಲಿ ತಕ್ಷಣವೇ ಕಾರ್ಯಪ್ರವೃತ್ತಗೊಂಡು ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಮಧು ಬಿ.ಇ.
ಎಸ್ಐ ನಗರ ಪೊಲೀಸ್ ಠಾಣೆ, ಕಾರ್ಕಳ