ಉಡುಪಿ, ಆ. 4 : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲು ಕ್ಷಣಗಣನೆ ಆರಂಭವಾಗಿರುವಂತೆಯೇ ಉಡುಪಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಂಗಳವಾರದಿಂದ ಗುರುವಾರದ ತನಕ ಸೆಕ್ಷನ್ 144 ಜಾರಿ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆಯೇ ಕರ್ಫ್ಯೂ ಜಾರಿ ಬಗ್ಗೆ ಪ್ರಕಟನೆ ಹೊರಡಿಸಲಾಗಿತ್ತು. ಅದರ ಬೆನ್ನಿಗೆ ಈಗ ಉಡುಪಿಯಲ್ಲೂ ಸೆಕ್ಷನ್ ಜಾರಿ ಆದೇಶ ಹೊರಟಿದೆ.
ಬುಧವಾರ ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದು, ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ನಾಳೆ ಜಿಲ್ಲೆಯಲ್ಲಿ ಸೆಕ್ಷನ್ ಜಾರಿ ಮಾಡಿದ್ದಾರೆ. ಸಿಆರ್ ಪಿಸಿ ಸೆಕ್ಷನ್ 144 ಜಾರಿ ಮಾಡಲಾಗಿದ್ದು, ಅದರಂತೆ ಜಿಲ್ಲ್ಲಿಲೆಯಲ್ಲಿ ಇಂದು ರಾತ್ರಿ 8 ರಿಂದ ಗುರುವಾರ ಬೆಳಗ್ಗೆ 6 ಗಂಟೆಯವರೆಗೂ ನಿಷೇಧಾಜ್ಞೆ ಜಾರಿಯಲ್ಲಿರಲಿದ್ದು, ಗುಂಪುಗೂಡುವಿಕೆ, ಸಾರ್ವಜನಿಕ ಸಭೆ ಇತ್ಯಾದಿಗಳನ್ನು ನಿರ್ಬಂಧಿಸಲಾಗಿದೆ.
ನಿಯಮ ಉಲ್ಲಂಘನೆ ಕಂಡುಬಂದರೆ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.