-20 ವರ್ಷದಿಂದ ಹಡಿಲು ಬಿದ್ದಿದ್ದ ಕೃಷಿ ಭೂಮಿ
ಬೆಳ್ಮಣ್ , ಆ. 4 : ಬೆಳ್ಮಣ್ ರೋಟರಿ ಕ್ಲಬ್ ಸದಸ್ಯರು 20 ವರ್ಷಗಳಿಂದ ಹಡಿಲು ಬಿದ್ದ 14 ಎಕರೆ ಭೂಮಿಯಲ್ಲಿ ಕೃಷಿ ಮಾಡುವ ಮೂಲಕ ಸರ್ವತ್ರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಗಿಡಗಂಟಿಗಳಿಂದ ತುಂಬಿ ಹೋಗಿದ್ದ ಭೂಮಿಯನ್ನು ಸಮತಟ್ಟುಗೊಳಿಸುವುದು ಬಹಳ ಶ್ರಮದ ಕೆಲಸ ಆಗಿತ್ತು. ಆದರೆ ರೋಟರಿ ಸದಸ್ಯರು ಅಧ್ಯಕ್ಷ ಸುಭಾಶ್ ಕುಮಾರ್ ನಂದಳಿಕೆ, ಕಾರ್ಯದರ್ಶಿ ರವಿರಾಜ್ ಶೆಟ್ಟಿ, ಪೂರ್ವ ಸಹಾಯಕ ಗವರ್ನರ್ ಸೂರ್ಯಕಾಂತ್ ಶೆಟ್ಟಿ ಅವರ ನೇತೃತ್ವದಲ್ಲಿ, ಎಲ್ಲ ಪೂರ್ವಾಧ್ಯಕ್ಷರ ಸಹಕಾರ ಪಡೆದು ಅಷ್ಟೂ ಜಾಗವನ್ನು ಸಮತಟ್ಟುಗೊಳಿಸಿದ್ದಾರೆ.
ಜೆಸಿಬಿ ಯಂತ್ರ ಬಳಸಿ ಹಲವು ದಿನ ಕೆಲಸ ಮಾಡಿದ್ದಾರೆ. ನಂತರ ಶ್ರಮದಾನದ ಮೂಲಕ ನೀರಿನ ಆಶ್ರಯವನ್ನು ಮಾಡಿ, ಬದುಗಳನ್ನು ಕಟ್ಟಿ, ಗದ್ದೆಯನ್ನು ಉತ್ತು ಬಿತ್ತನೆ ಮಾಡಿದ್ದಾರೆ. ಆ ಮೂಲಕ ಬಂಜರು ಭೂಮಿ ಆಗಿದ್ದ 14 ಎಕರೆ ಜಾಗ ಈಗ ಹಸಿರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಸಂಸ್ಥೆಯಾದ ಬೆಳ್ಮಣ್ ರೋಟರಿ ಕೃಷಿ ಕ್ರಾಂತಿಯನ್ನು ಮಾಡುವ ಮೂಲಕ ಜನಮನ್ನಣೆ ಗಳಿಸಿದೆ.
ಫಸಲು ಸಾಮಾಜಿಕ ಕಾರ್ಯಕ್ಕೆ

ಈ ಗದ್ದೆಗಳಲ್ಲಿ ಬರುವ ಫಸಲನ್ನು ಸಾಮಾಜಿಕ ಕಾರ್ಯಗಳಿಗೆ, ಬಡಬಗ್ಗರಿಗೆ ನೀಡುತ್ತೇವೆ ಎಂದು ಹೇಳಿದ್ದಾರೆ ಸುಭಾಶ್ ಕುಮಾರ್. ಬೈಹುಲ್ಲನ್ನು ಅಗತ್ಯವಿದ್ದವರಿಗೆ ರಿಯಾಯಿತಿ ದರದಲ್ಲಿ ನೀಡುತ್ತೇವೆ. ಕೃಷಿಗೆ ಖರ್ಚಾದ ಹಣ ಬಂದರೆ ಸಾಕು. ಹಡಿಲು ಭೂಮಿಯನ್ನು ಹಸಿರುಗೊಳಿಸಿದ ತೃಪ್ತಿ ದೊಡ್ಡದು ಎನ್ನುತ್ತಾರೆ ಸುಭಾಶ್ ಕುಮಾರ್.
1 ಲ.ರೂ.ಖರ್ಚು
ಈಗಾಗಲೇ ಕೃಷಿಗೆ ಒಂದು ಲಕ್ಷಕ್ಕೂ ಮಿಕ್ಕಿ ಖರ್ಚಾಗಿದೆ. ಇನ್ನೂ ಕೊಯ್ಲು ಸಾಗಾಟ ಎಂದು ಸ್ವಲ್ಪ ಖರ್ಚು ಇದೆ. ನೆಲ ಸಮತಟ್ಟು ಮಾಡಲು ಒಂದು ವಾರ ಹಿಡಿದಿದೆ ಎಂಬ ಮಾಹಿತಿ ನೀಡಿದ್ದಾರೆ ಅವರು.