ಅಗರಿಯವರ ಒಂದು ಹಾಡಿನ ಕುರಿತು…

 

ಕೃಷ್ಣಪ್ರಕಾಶ ಉಳಿತ್ತಾಯ

ಅಗರಿ ಶ್ರೀನಿವಾಸ ಭಾಗವತರ

“ಭರತೇಶ ದಿಗ್ವಿಜಯ”ಪ್ರಸಂಗಾವ ಲೋಕನದ ಸಣ್ಣ ಭಾಗ ಇದು.

ಜತೆಗೆ ಸೂಚಿತ ಪದ್ಯದ ಹಾಡೂ *  ಹಂಚಿಕೊಂಡಿರುವೆ. ಈ ಹಾಡನ್ನು ಕೃಪೆಯಿಟ್ಟು ನನಗೆ ಒದಗಿಸಿದವರು ಶ್ರೀ ದೇವರಾಜ್ ರಾವ್. ಅವರಿಗೆ ಧನ್ಯವಾದ.

ಭರತನು ದಿಗ್ವಿಜಯ ಸಂಪನ್ನಗೊಳಿಸಿ ಮರಳಿ ತನ್ನ ಪುರಕ್ಕೆ ಹೊರಡುವಾಗ ಕೈಲಾಸಗಿರಿಯನ್ನು ಕಾಣುತ್ತಾನೆ. ಅಗರಿ ಶ್ರೀನಿವಾಸ ಭಾಗವತರು  ತಮ್ಮ ಪ್ರಸಂಗಗಳಲ್ಲಿ ಸಾಮಾನ್ಯವಾಗಿ ಬಳಸುವ ಪ್ರಸಿದ್ಧವಾದ ಬಂಧ “ಶಂಕರಾಭರಣ ಅಷ್ಟ” ದಲ್ಲಿ ಭರತ ಕೈಲಾಸವನ್ನು ಕಂಡ ಬಗೆಯನ್ನು ವಿವರಿಸುತ್ತಾರೆ. ವಿಷ್ಣುಗಣ ಪ್ರಧಾನವಾದ  ಈ ಹಾಡಿನ ಅದೇ ರಾಗದ ಪ್ರಸ್ತುತಿಯೂ ಅಗರಿಯವರ ಶೈಲಿಯಲ್ಲಿ ನುಡಿದಾಗ ಸ್ಫುಟವಾಗುವ ವಿಸ್ಮಯ ಭಾವ ಅನನ್ಯ ಪರಿಣಾಮವನ್ನು ರಂಗದಲ್ಲಿ ಉಂಟುಮಾಡುತ್ತದೆ. ಗ್ರಹ ಬೇಧಮಾಡಿ ಅಗರಿ ಶ್ರೀನಿವಾಸ ಭಾಗವತರು ಇದನ್ನು ಪ್ರಸ್ತುತ ಪಡಿಸಿದ್ದನ್ನು ಹಳೆಯ ಧ್ವನಿ ಸಂಗ್ರಹದಲ್ಲಿ ಕೇಳಿದಾಗ ಇದು ವಿವೃತವಾಗುತ್ತದೆ. ಪಲ್ಲವಿ ಮತ್ತು ಚರಣ ಮತ್ತು ವರಣಗಳನ್ನು ಬಳಸಿ ಈ ಪದ್ಯವನ್ನು ಹೆಣೆದಿದ್ದಾರೆ ಅಗರಿ ಭಾಗವತರು. 

ಶಂಕರಾಭರಣ:ಅಷ್ಟತಾಳ

ಕಂಡನೂ| ಭರತೇಶ ಕೈಲಾಸವ | ಕಂಡನೂ||ಪಲ್ಲವಿ||

ಕಂಡನು ಕೈಲಾಸ ಗಿರಿಯ| ಆರು| ಖಂಡಗಳನು ಗೆಲ್ದ ರಾಯ|| ಮುದ| ಗೊಂಡ ಮನದಲಿ ತನ್ನಯಾ| ನೆರೆ, ಖಂಡಿಸಿ ಕರ್ಮವ| ಕಂಡಾತ್ಮ ತತ್ವವಾ| ಖಂಡ ಜ್ಞಾನವನ್ನು ಕೈಗೊಂಡಿಹಗಿರಿಯನ್ನು|| ಕಂಡನೂ||

ಇಲ್ಲಿ” ಗೊಂಡಮನದಲಿತನ್ನಯಾ” ಇದು ಎರಡು ವಿಷ್ಣುಗಣ ಮತ್ತು ಬ್ರಹ್ಮ ಗಣದ ಛಂದಖಂಡವಾಗಿರಬೇಕಿತ್ತು. ಆದರೆ ಇಲ್ಲಿ ಮುದ್ರಣದೋಷದಿಂದಾಗಿ ಬ್ರಹ್ಮಗಣ ಸ್ಫುಟವಾದಂತಿಲ್ಲ. ಆದರೆ ಅಗರಿ ಶ್ರೀನಿವಾಸ ಭಾಗವತರ ಇದೇ ಹಾಡಿನ ಧ್ವನಿಮುದ್ರಣವನ್ನು ಈ ಲೇಖಕ ಕೇಳಿದಾಗ ಇದಕ್ಕೆ ಪರಿಹಾರ ದೊರಕಿದೆ. ಆ ಛಂದಖಂಡದ ಪ್ರಸ್ತುತಿಯ ಸಮಯದಲ್ಲಿ ಅಂದರೆ “ ಗೊಂಡಮನದಲಿತನ್ನಯಾ” ಇಲ್ಲಿ ಅಗರಿ ಭಾಗವತರು ಬ್ರಹ್ಮಗಣಕ್ಕೆ ಪಸರಿಸುವ ನಾದಗುಂಜನವನ್ನು ” ತನ್ನಯಾ”  ಎಂಬುದರ ಬದಲಾಗಿ ಬ್ರಹ್ಮಗಣಕ್ಕೆ ಒಪ್ಪುವ ಸಾಹಿತ್ಯ ತನ್ನಯ್ಯಾ ಎಂದು ಹಾಡಿದ್ದಾರೆ ಎಂಬಂತೆ ಕೇಳುತ್ತದೆ. ಆದರೆ ಧ್ವನಿಮುದ್ರಣದ ದೋಷದಿಂದಲೋ ಏನೋ ಸಾಹಿತ್ಯಾಂಶ ಸ್ಫುಟವಾಗಿ ಕೇಳುತ್ತಿಲ್ಲ. ಆದರೆ ನಾದ ಪರಿಮಾಣವು ಬ್ರಹ್ಮಗಣಕ್ಕೆ ಅನುಗುಣವಾಗಿ ಸಾಗಿದೆ. ಈ ಲೇಖಕನ ಬಳಿಯಿರುವ ಪರಾಮರ್ಶನ ಪುಸ್ತಕ (“ಕನ್ನಡ ಸಾಹಿತ್ಯ ಪರಿಷತ್, ಮಹಾರಾಷ್ಟ್ರ ಘಟಕ” ಪ್ರಕಾಶಿಸಿದ್ದು. “ಅಗರಿ ಶ್ರೀನಿವಾಸ ಭಾಗವತ ಸಂಸ್ಮರಣ ಪ್ರಸಂಗ ಮಾಲಿಕೆ”.)

  ಇಲ್ಲಿ ಅರ್ಥ ಸ್ಫುಟತೆಗಾಗಿ “ತನ್ನಯ್ಯಾ”ಎಂದೇ ಪರಿಭಾವಿಸಿದರೆ ಸಾಹಿತ್ಯದ ಒಟ್ಟು ಅರ್ಥವು ಸರಿಯಾಗಿ ಬರುತ್ತದೆ. ಭರತ ಚಕ್ರಿಯ ತಂದೆ ಪುರುಪರಮೇಶ್ವರ ತನ್ನ ಎಲ್ಲಾ ಕರ್ಮಗಳನ್ನು ತ್ಯಜಿಸಿ ಅಖಂಡ ಜ್ಞಾನವನ್ನು ಪಡೆದಂತಹಾ ಕೈಲಾಸ ಗಿರಿಯನ್ನು ಭರತನು ಕಂಡನು ಎಂಬ ಅರ್ಥ ಪ್ರಕಾಶವನ್ನು ಇಲ್ಲಿ ಪಡೆಯಬಹುದು. ಮಾತ್ರವಲ್ಲ ಛಂದಖಂಡವೂ ಸರಿಯಾಗಿ ಎರಡು ವಿಷ್ಣುಗಣಗಳು ಮತ್ತು ಒಂದು ಬ್ರಹ್ಮ ಗಣ ಯೋಜಿತವಾಗಿ ಛಂದೋಗತಿಗೂ ಸಮವಾಗುವುದು. ಹಾಗಾದ ಕಾರಣ ಮುದ್ರಣದೋಷ ಇಲ್ಲಿದೆ ಎಂಬುದಕ್ಕೆ ಕಾರಣವಿದೆ. ಆದುದರಿಂದ  ಈ ಪದ್ಯವು ಅಗರಿ ಭಾಗವತರು ಹಾಡಿರುವ ಪ್ರಕಾರ ಹೀಗೆಯೇ ಆಗಬೇಕೆಂಬುದು ನನ್ನ‌ಅಭಿಪ್ರಾಯ.

ಕಂಡನೂ| ಭರತೇಶ ಕೈಲಾಸವ | ಕಂಡನೂ||ಪಲ್ಲವಿ||

ಕಂಡನು ಕೈಲಾಸ ಗಿರಿಯ| ಆರು| ಖಂಡಗಳನು ಗೆಲ್ದ ರಾಯ|| ಮುದ| ಗೊಂಡ ಮನದಲಿ ತನ್ನಯ್ಯಾ| ನೆರೆ, ಖಂಡಿಸಿ ಕರ್ಮವ| ಕಂಡಾತ್ಮ ತತ್ವವಾ| ಖಂಡ ಜ್ಞಾನವನ್ನು ಕೈಗೊಂಡಿಹಗಿರಿಯನ್ನು|| ಕಂಡನೂ ||error: Content is protected !!
Scroll to Top