ಘಾಜಿಯಾಬಾದ್, ಜು.28: ಬಕ್ರೀದ್ ಹಬ್ಬಕ್ಕೆ ಪ್ರಾಣಿಗಳ ಬದಲು ಮುಸ್ಲಿಮರು ತಮ್ಮ ಮಕ್ಕಳನ್ನು ಬಲಿ ನೀಡಲಿ ಎಂದು ಉತ್ತರಪ್ರದೇಶದ ಲೋನಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ನಂದ್ ಕಿಶೋರ್ ಗುರ್ಜರ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಾಂಸವು ಕೊರೋನಾ ವೈರಸನ್ನು ಹರಡುತ್ತಿದೆ. ಹೀಗಾಗಿ ಜನರು ಮುಗ್ಧ ಪ್ರಾಣಿಗಳನ್ನು ಬಲಿಕೊಡಬಾರದು. ಬಕ್ರೀದ್ ಹಬ್ಬಕ್ಕೆ ಪ್ರಾಣಿಗಳನ್ನು ಬಲಿಕೊಡುವ ಜನರು ತಮ್ಮ ಮಕ್ಕಳನ್ನು ಬಲಿಕೊಡಲಿ. ಜನರು ಮಾಂಸಾಹಾರ ಹಾಗೂ ಮದ್ಯಪಾನ ಮಾಡಲು ನಾವು ಬಿಡುವುದಿಲ್ಲ. ಮುಗ್ಧ ಪ್ರಾಣಿಗಳನ್ನು ಬಲಿಕೊಟ್ಟು ಕೊರೋನಾ ಸೋಂಕು ಹರಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಕೊರೋನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಮಸೀದಿಗಳು, ದೇವಾಲಾಯಕ್ಕೆ ತೆರಳದೆ, ನಮಾಜ್ ಹಾಗೂ ಪ್ರಾರ್ಥನೆ ಸಲ್ಲಿಸದೆ ಜನರು ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದಾರೆ. ಅದೇ ರೀತಿಯಲ್ಲಿಯೇ ಪ್ರಾಣಿಗಳ ಬಲಿಕೊಡುವುದನ್ನೂ ಜನರು ಕೈಬಿಡಬೇಕು ಎಂದು ತಿಳಿಸಿದ್ದಾರೆ.