ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರದಿಂದ ಒಂದು ವಾರ ಲಾಕ್‌ ಡೌನ್‌

ಮಂಗಳೂರು:ಕೊರೊನಾ ಸೋಂಕು ಅಂಕೆ ಮೀರಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಮ ಒಂದು ವಾರ  ಸಂಪೂರ್ಣ ಲಾಕ್‌ ಡೌನ್‌  ಮಾಡಲು ನಿರ್ಧರಿಸಲಾಗಿದೆ. ದಕ್ಷಿಣ ಕನ್ನಡ ಪೂರ್ತಿ ಬಂದ್‌ ಆಗಲಿದೆ.  

ಇಂದು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಜಿಲ್ಲೆಗಳ ಕೊರೊನಾ ನಿಯಂತ್ರಣದ ಕುರಿತು ಮಾಹಿತಿ ಪಡೆದರು. ಸಂಪೂರ್ಣ ಜಿಲ್ಲೆಯಲ್ಲಿ ಲಾಕ್ ಡೌನ್ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಮಂಗಳೂರು ಸಂಸದ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಜಿಲ್ಲಾಡಳಿತ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದರು. ಜನಪ್ರತಿನಿಧಿಗಳ ಜೊತೆಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳುವಂತೆ ಸಿಎಂ ಸೂಚಿಸಿದ್ದರು.

ಸಭೆಯ ಬಳಿಕ ಮಾಹಿತಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು, ಬುಧವಾರ ರಾತ್ರಿಯಿಂದ ಒಂದು ವಾರ ಲಾಕ್ ಡೌನ್ ಮಾಡಲಾಗುವುದು. ಲಾಕ್ ಡೌನ್ ಮಾರ್ಗಸೂಚಿಗಳನ್ನು ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಯವರು ಬಿಡುಗಡೆ ಮಾಡಲಿದ್ದಾರೆ ಎಂದರು.

ಕರಾವಳಿ ಜಿಲ್ಲೆಗಳಲ್ಲಿ  ಕೋವಿಡ್-19 ಸೋಂಕಿತರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಅದರಲ್ಲೂ ಹೊರ ರಾಜ್ಯ, ರಾಷ್ಟ್ರದ ಪ್ರಯಾಣಿಕರಿಗಿಂತ ಸ್ಥಳೀಯರಲ್ಲಿ ಹೆಚ್ಚಾಗಿ ಕೋವಿಡ್ 19 ಸೋಂಕು ಕಾಣಿಸಿಕೊಳ್ಳುತ್ತಿದೆ. ಕೋವಿಡ್ ಸಂಕಷ್ಟದ ಮಧ್ಯೆ ಮಳೆಗಾಲವೂ ಆರಂಭವಾದ ಕಾರಣ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ. ಇದರಿಂದ ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ಲಾಕ್ ಡೌನ್ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದರು.

ರಾಜ್ಯ ರಾಜಧಾನಿಯಲ್ಲಿ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಮಂಗಳವಾರದಿಂದ ಒಂದು ವಾರಗಳ ಕಾಲ ಲಾಕ್ ಡೌನ್ ಮಾಡಲು ಸರ್ಕಾರ ಈಗಾಗಲೇ ನಿರ್ಧರಿಸಿದೆ. ಇತರ ಜಿಲ್ಲೆಗಳಲ್ಲೂ ಲಾಕ್ ಡೌನ್ ಮಾಡಬೇಕೆಂದು ಕೂಗುಗಳು ಕೇಳಿಬಂದ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ಇಂದು ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಚರ್ಚೆ ನಡೆಸಿದರು.

ಉಡುಪಿ ಜಿಲ್ಲೆ: ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ಮಾಡುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಸಿಎಂ ಜೊತೆಗಿನ ಸಭೆಯಲ್ಲಿ ಲಾಕ್ ಡೌನ್ ಮಾಡುವುದು ಬೇಡ. ಜಿಲ್ಲಾ ಗಡಿಗಳನ್ನು ಬಂದ್ ಮಾಡುವಂತೆ ಜಿಲ್ಲಾಧಿಕಾರಿಗಳು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಲಾಕ್ ಡೌನ್ ನಿರ್ಧಾರವನ್ನು ಜಿಲ್ಲಾಡಳಿತಕ್ಕೆ ನೀಡಿದ್ದು, ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎನ್ನಲಾಗಿದೆ.





























































































































































































































error: Content is protected !!
Scroll to Top