ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ಒಂದು ವಾರದ ಮಟ್ಟಿಗೆ ಲಾಕ್ ಡೌನ್ ಮಾಡಲು ಸರಕಾರ ತೀರ್ಮಾನಿಸಿದೆ. ಇದರ ಬೆನ್ನಿಗೆ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಇತರ ಕೆಲವು ಜಿಲ್ಲೆಗಳು ಲಾಕ್ ಡೌನ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಸೇರಿ ಒಟ್ಟು 12 ಜಿಲ್ಲೆಗಳಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಎರಡು ಹಂತದಲ್ಲಿ ಲಾಕ್ಡೌನ್ ಮಾಡುವ ಬಗ್ಗೆ ಸೋಮವಾರ ಮುಖ್ಯಮಂತ್ರಿಗಳು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಸಚಿವ ಆರ್. ಅಶೋಕ್ ಮಾಹಿತಿ ನೀಡಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ಕೈಮೀರಿ ವ್ಯಾಪಿಸುತ್ತಿರುವುದರಿಂದ ನಗರ ಹಾಗೂ ಗ್ರಾಮಾಂತರ ಎರಡೂ ಜಿಲ್ಲೆಗಳನ್ನ ಮಂಗಳವಾರದಿಂದ ಒಂದು ವಾರ ಕಾಲ ಕಟ್ಟುನಿಟ್ಟಾಗಿ ಲಾಕ್ಡೌನ್ ಮಾಡಲು ನಿನ್ನೆ ಸರ್ಕಾರ ನಿರ್ಧರಿಸಿತ್ತು. ಇದರ ಜತೆಗೆ ಇನ್ನೂ ಹಲವು ಜಿಲ್ಲೆಗಳು ಲಾಕ್ಡೌನ್ ಆಗಲಿವೆ ಎಂಬ ದಟ್ಟ ವದಂತಿಗಳು ಹರಡಿವೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಕಾವೇರಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಇತರ ಜಿಲ್ಲೆಗಳಲ್ಲೂ ಲಾಕ್ಡೌನ್ ಮಾಡುವ ಬಗ್ಗೆ ಗಂಭೀರ ಚರ್ಚೆಯಾಗಿರುವುದು ತಿಳಿದುಬಂದಿದೆ. 10-12 ಜಿಲ್ಲೆಗಳಿಗೆ ದಿಗ್ಬಂಧನ ವಿಧಿಸುವ ಸಾಧ್ಯತೆ ಇದೆ. ಸಭೆಯಲ್ಲಿ ಪಾಲ್ಗೊಂಡಿದ್ದ ಕಂದಾಯ ಸಚಿವ ಆರ್. ಅಶೋಕ್ ಅವರು ಮಾಧ್ಯಮಗಳಿಗೆ ಇದರ ಸುಳಿವು ನೀಡಿದ್ದಾರೆ.
ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೊರೋನಾ ವೈರಸ್ ಸೋಂಕು ಬಹಳ ತೀವ್ರವಾಗಿರುವ ಇತರ ಜಿಲ್ಲೆಗಳ ಪರಿಸ್ಥಿತಿ ಬಗ್ಗೆ ಚರ್ಚೆಗಳಾಗಿವೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಸೇರಿ ಒಟ್ಟು 12 ಜಿಲ್ಲೆಗಳಲ್ಲಿ ಹೆಚ್ಚು ಗಂಭೀರ ಪರಿಸ್ಥಿತಿ ಇದೆ ಎಂದು ಪರಿಗಣಿಸಲಾಗಿದೆ. ಎರಡು ಹಂತದಲ್ಲಿ ಲಾಕ್ಡೌನ್ ಮಾಡುವ ಬಗ್ಗೆ ನಾಳೆ ಮುಖ್ಯಮಂತ್ರಿಗಳು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಆರ್. ಅಶೋಕ್ ಮಾಹಿತಿ ನೀಡಿದ್ದಾರೆ.ಬೆಂಗಳೂರು ನಗರ, ಬೆಂಗಳುರು ಗ್ರಾಮಾಂತರ, ಬಳ್ಳಾರಿ, ಕಲಬುರ್ಗಿ, ಯಾದಗಿರಿ, ಬೀದರ್, ದಕ್ಷಿಣ ಕನ್ನಡ , ಉಡುಪಿ, ಮೈಸೂರು, ವಿಜಯಪುರ, ಧಾರವಾಡ ಮತ್ತು ಮಡ್ಯ ಜಿಲ್ಲೆಗಳು ಲಾಕ್ ಡೌನ್ ಆಗುವ ಸಾಧ್ಯತೆಗಳಿವೆ.
ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ಇವತ್ತು ನಡೆದ ಸಭೆಯಲ್ಲಿ ಸಿಎಂ ಹಾಗೂ ಕಂದಾಯ ಸಚಿವರ ಜೊತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಲಾಕ್ಡೌನ್ ಮಾರ್ಗಸೂಚಿಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ.
ಬೆಂಗಳೂರೊಂದನ್ನೇ ಲಾಕ್ಡೌನ್ ಮಾಡುವುದಾ, ಅಥವಾ ಗಂಭೀರ ಪರಿಸ್ಥಿತಿ ಇರುವ 10-12 ಜಿಲ್ಲೆಗಳನ್ನ ಲಾಕ್ಡೌನ್ ಮಾಡುವುದಾ ಅಥವಾ ಇಡೀ ರಾಜ್ಯವನ್ನೇ ಲಾಕ್ಡೌನ್ ಮಾಡುವುದಾ ಎಂಬ ಸಂದಿಗ್ಧತೆಯಲ್ಲಿ ಸರ್ಕಾರ ಇದೆ. ಸೋಮವಾರ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫೆರೆನ್ಸ್ನಲ್ಲಿ ಸಿಎಂ ಅವರು ಎಲ್ಲಾ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.ಜಿಲ್ಲಾಧಿಕಾರಿಗಳೊಂದಿಗೆ ಎರಡು ಸಭೆಗಳು ನಾಳೆ ನಡೆಯಲಿವೆ. ಕೊರೋನಾ ಪ್ರಕರಣಗಳು ಗಂಭೀರವಾಗಿರುವ ಜಿಲ್ಲೆಗಳ ಡಿಸಿಗಳ ಜೊತೆ ಒಂದು ಸಭೆ ಹಾಗೂ ಗಂಭೀರವಲ್ಲದ ಜಿಲ್ಲೆಗಳ ಡಿಸಿಗಳ ಜೊತೆ ಇನ್ನೊಂದು ಸಭೆ ನಡೆಯಲಿದೆ ಎಂದು ಆರ್ ಅಶೋಕ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ಧಾರೆ.
ಜುಲೈ 14, ಮಂಗಳವಾರ ರಾತ್ರಿ 8ಗಂಟೆಯಿಂದ ಜುಲೈ 22ರವರೆಗೆ ಒಂದು ವಾರ ಕಾಲ ಲಾಕ್ಡೌನ್ ಇರಲಿದೆ. ಈ ವೇಳೆ, ಮಾರ್ಗಸೂಚಿ ಏನೆಂಬುದು ಸೋಮವಾರ ಸ್ಪಷ್ಟವಾಗಲಿದೆ. ಆರ್ ಅಶೋಕ್ ನೀಡಿರುವ ಸುಳಿವಿನ ಪ್ರಕಾರ ಔಷಧ ಕಾರ್ಖಾನೆಗಳು ಹಾಗೂ ವೆಂಟಿಲೇಟರ್ ಇತ್ಯಾದಿ ಔಷಧೋಪಕರಣ ಉತ್ಪಾದಿಸುವ ಕೈಗಾರಿಕೆಗಳಿಗೆ ಲಾಕ್ಡೌನ್ ಅನ್ವಯಿಸದೇ ಹೋಗುವ ಸಾಧ್ಯತೆ ಇದೆ.