ಪಾಟ್ನಾ: ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸದೆ ಮಗನ ಮದುವೆ ನಡೆಸಿ 100ಕ್ಕೂ ಹೆಚ್ಚು ಮಂದಿಗೆ ಸೋಂಕು ಹರಡಲು ಕಾರಣರಾದ ವರನ ತಂದೆಯ ವಿರುದ್ಧ ಜಿಲ್ಲಾಡಳಿತ ಎಫ್‍ಐಆರ್ ದಾಖಲಿಸಿದೆ. ಬಿಹಾರದ ಪಾಟ್ನಾದಲ್ಲಿ ನಡೆದ ಮದುವೆಯಲ್ಲಿ ವರನಿಗೆ ಕೋವಿಡ್ ಸೋಂಕಿದ್ದು, ವಿವಾಹವಾದ ಎರಡೇ ದಿನಕ್ಕೆ ಸಾವನ್ನಪ್ಪಿದ್ದಾರೆ.
ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ನೀಡದೆ ಮದುವೆ ಮಾಡಿರುವ ವರನ ತಂದೆ ಅಂಬಿಕಾ ಚೌಧರಿ ವಿರುದ್ಧ ಇದೀಗ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.
ಜೂ.15 ರಂದು ಪಾಟ್ನಾದ ದೀಹ್ಪಾಲಿ ಗ್ರಾಮದಲ್ಲಿ ಈ ವಿವಾಹ ನಡೆದಿದ್ದು, ಮದುವೆಯಾದ ಎರಡು ದಿನಗಳ ನಂತರ ಅನಿಲ್‍ಕುಮಾರ್ ಆರೋಗ್ಯ ಹದಗೆಟ್ಟು ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದ್ದರು.
ಪಾಟ್ನಾ ಆಡಳಿತಕ್ಕೆ ತಿಳಿಸುವ ಮೊದಲೇ ಮೃತ ವರನ ಕುಟುಂಬವು ಅಂತಿಮ ವಿಧಿಗಳನ್ನು ನಡೆಸಿತು. ಬಳಿಕ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಮದುವೆಗೆ ಹಾಜರಾದ ಎಲ್ಲ ಅತಿಥಿಗಳ ಮೇಲೆ ಕೊರೊನಾ ಪರೀಕ್ಷೆ ನಡೆಸಿದ್ದು, ಸಮಾರಂಭಕ್ಕೆ ಹಾಜರಾದವರ ಪೈಕಿ 113 ಮಂದಿಗೆ ಪಾಸಿಟಿವ್ ಇರುವುದು ಪತ್ತೆಯಾಗಿದೆ.
ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಕುಮಾರ್ ರವಿ ಅವರು ಪಾಲಿಗಂಜ್‍ನ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಅವರ ತನಿಖೆಗೆ ಆದೇಶಿಸಿದ್ದಾರೆ, ಮಗನ ವಿವಾಹವನ್ನು ಆಯೋಜಿಸಲು ಕೊರೊನಾ ವೈರಸ್ ಪ್ರೋಟೋಕಾಲ್ ಅನುಸರಿಸದ ಕಾರಣ ಅಂಬಿಕಾ ಚೌಧರಿ ತಪ್ಪಿತಸ್ಥರೆಂದು ವರದಿ ಮಾಡಿದೆ.
ವರದಿ ಮೇರೆಗೆ ಪಾಟ್ನಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಅಂಬಿಕಾ ಚೌಧರಿ ವಿರುದ್ಧ ಎಫ್‍ಐಆರ್ ದಾಖಲಿಸಲು ಆದೇಶಿಸಿದ್ದಾರೆ.