ಸರಕಾರಿ ಕಾರ್ಯಕ್ರಮಗಳಲ್ಲಿ ತಮಿಳು ನಾಡಗೀತೆ ಕಡ್ಡಾಯ : ಸಿಎಂ ವಿಜಯ್

ಚೆನ್ನೈ : ಸರಕಾರಿ ಕಾರ್ಯಕ್ರಮಗಳ ಆರಂಭದಲ್ಲಿ ರಾಜ್ಯಗೀತೆಯಾದ ‘ತಮಿಳ್ ತಾಯ್ ವಾಲ್ತು’ವನ್ನು ಮೊದಲು ಹಾಡಬೇಕೆಂದು ಕಡ್ಡಾಯಗೊಳಿಸುವ ನಿರ್ಣಯವೊಂದನ್ನು, ತಮಿಳುನಾಡು ವಿಧಾನಸಭೆಯು ಸರ್ವಾನುಮತದಿಂದ ಅಂಗೀಕರಿಸಿದೆ.

ಉದ್ಘಾಟನಾ ಗೀತೆಗಳ ಸರಣಿಯಲ್ಲಿ ರಾಷ್ಟ್ರಗೀತೆಯಾದ ‘ವಂದೇ ಮಾತರಂ’ ಗೀತೆಯನ್ನು ಮೊದಲು ನುಡಿಸಬೇಕೆಂಬ ಕೇಂದ್ರ ಸರ್ಕಾರದ ನಿರ್ದೇಶನಕ್ಕೆ, ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಒಡ್ಡಿರುವ ಸವಾಲು ಎಂದೇ ಈ ಬೆಳವಣಿಗೆಯನ್ನು ಪರಿಗಣಿಸಲಾಗಿದೆ. ವಿಧಾನಸಭೆಯಲ್ಲಿ ಈ ನಿರ್ಣಯ ಮಂಡಿಸಿದ ವಿಜಯ್, ರಾಜ್ಯದಲ್ಲಿ ತಮಿಳು ಗೀತೆಗೆ ಅತ್ಯುನ್ನತ ಆದ್ಯತೆ ನೀಡಬೇಕು ಎಂದು ಪ್ರತಿಪಾದಿಸಿದರು.

ಪ್ರತಿಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಈ ನಿರ್ಣಯವನ್ನು ಬೆಂಬಲಿಸಿದವು. ನಿರ್ಣಯವು ಅಂಗೀಕಾರಗೊಂಡಿದೆ ಮತ್ತು ಇದರ ಅನುಷ್ಠಾನಕ್ಕೆ ಹೆಚ್ಚಿನ ಅನುಮತಿಯ ಅಗತ್ಯವಿಲ್ಲ ಎಂದು ಸ್ಪೀಕರ್ ಜೆಸಿಡಿ ಪ್ರಭಾಕರ್ ಘೋಷಿಸಿದರು. ಕೇಂದ್ರದ ವಂದೇ ಮಾತರಂ ಕಡ್ಡಾಯ ನಿರ್ಣಯ ಬಳಿಕ, ತಮಿಳುನಾಡು ಇದಕ್ಕೆ ವ್ಯತಿರಿಕ್ತವಾದ ನಿರ್ಣಯ ಅಂಗೀಕರಿಸಿದೆ.

ಆ.10ರಂದು ತಮಿಳುನಾಡು ವಿಧಾನಸಭೆಯಲ್ಲಿ ಭಾವನಾತ್ಮಕ ಭಾಷಣ ಮಾಡಿದ ಸಿಎಂ ವಿಜಯ್, ರಾಜ್ಯದ ಭಾಷಾ ಮತ್ತು ಸಾಂಸ್ಕೃತಿಕ ಹಕ್ಕುಗಳ ವಿಷಯದಲ್ಲಿ ತಮ್ಮ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ದೃಢವಾಗಿ ಪ್ರತಿಪಾದಿಸಿದರು. ತಮಿಳು ಕೇವಲ ಒಂದು ಭಾಷೆಯಲ್ಲ, ಅದು ನಮ್ಮ ಜೀವನಾಡಿ ಮತ್ತು ಭಾವನೆ, ಮಾತೃಭಾಷೆಯು ಮಾತೃತ್ವದಷ್ಟೇ ಪವಿತ್ರವಾದುದು ಎಂದು ಬಣ್ಣಿಸಿದರು. ಮುಂದುವರೆದು, ತಮಿಳು ಎಂದರೆ ಹೆಮ್ಮೆ, ತಮಿಳು ಎಂದರೆ ಶಕ್ತಿ. ತಮಿಳು ಎಂದು ಹೇಳಿದ ಕ್ಷಣವೇ, ಇಡೀ ತಮಿಳುನಾಡು ಒಗ್ಗೂಡಿ ಒಂದಾಗಿ ನಿಲ್ಲುತ್ತದೆ. ತಮಿಳುನಾಡಿನಲ್ಲಿ ‘ತಮಿಳ್ ತಾಯಿ ವಾಲ್ತು’ ರಾಜ್ಯಗೀತೆಯೇ ಪ್ರಥಮ ಸ್ಥಾನವನ್ನು ಹೊಂದಿರಬೇಕು. ಅದಕ್ಕೆ ಪ್ರಥಮ ಸ್ಥಾನ ನೀಡುವುದು ನಮ್ಮ ಹಕ್ಕು ಎಂದು ಜೋಸೆಫ್‌ ವಿಜಯ್‌ ಪ್ರತಿಪಾದಿಸಿದೆರು.

ತಮಿಳುನಾಡಿನ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ನಡೆಯುವ ಕಾರ್ಯಕ್ರಮಗಳ ಆರಂಭದಲ್ಲಿ ರಾಜ್ಯಗೀತೆಯನ್ನು ಮೊದಲು ಹಾಡಬೇಕು ಎಂದು ಇಂದು ಅಂಗೀಕಾರಗೊಂಡ ನಿರ್ಣಯವು ಸ್ಪಷ್ಟಪಡಿಸಿದೆ.

ಕಳೆದ ಜನವರಿಯಲ್ಲಿ, ಕೇಂದ್ರ ಗೃಹ ಸಚಿವಾಲಯವು ಸರ್ಕಾರಿ ಕಾರ್ಯಕ್ರಮಗಳಲ್ಲಿ ಮೊದಲು ರಾಷ್ಟ್ರಗೀತೆಯನ್ನು ಮತ್ತು ನಂತರ ರಾಷ್ಟ್ರೀಯ ಗೀತೆಯನ್ನು ನುಡಿಸುವಂತೆ ನಿರ್ದೇಶನ ನೀಡಿತ್ತು. ಜುಲೈನಲ್ಲಿ ಹೊರಡಿಸಿದ ಸಲಹಾ ಸೂಚನೆಯಲ್ಲಿ, ಆ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿತ್ತು.

ತಮಿಳುನಾಡಿನ ಸರ್ಕಾರಿ ಕಾರ್ಯಕ್ರಮಗಳಲ್ಲಿ ‘ತಮಿಳ್ ತಾಯ್ ವಾಲ್ತು’ (ತಮಿಳು ತಾಯಿಯ ಸ್ತುತಿಗೀತೆ) ಗೀತೆಯನ್ನು ಕಡ್ಡಾಯಗೊಳಿಸುವ ಕ್ರಮವನ್ನು 1970ರಲ್ಲೇ ಜಾರಿಗೆ ತರಲಾಗಿತ್ತು. ಅಂದಿನಿಂದಲೇ ಅಧಿಕೃತ ಕಾರ್ಯಕ್ರಮಗಳ ಆರಂಭದಲ್ಲಿ ಈ ಗೀತೆಯನ್ನು ಮೊದಲು ನುಡಿಸುವುದು ಸಂಪ್ರದಾಯವಾಗಿದೆ. ಮುಂದೆ 2021ರಲ್ಲಿ ಇದನ್ನು ‘ರಾಜ್ಯ ಗೀತೆ’ಯಾಗಿ ಅಧಿಕೃತವಾಗಿ ಮಾನ್ಯ ಮಾಡಲಾಯಿತು.

ವಿಶ್ವವಿದ್ಯಾಲಯವೊಂದರ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ಮತ್ತು ರಾಷ್ಟ್ರೀಯ ಗೀತೆಯ ನಂತರ, ತಮಿಳು ರಾಜ್ಯ ಗೀತೆಯನ್ನು ನುಡಿಸಿದಾಗ ವಿವಾದ ಭುಗಿಲೆದ್ದಿತ್ತು. ಇತ್ತೀಚೆಗೆ, ತಮಿಳುನಾಡಿನ 21 ಸಂಸದರು ರಾಜ್ಯಪಾಲರಿಗೆ ಪತ್ರ ಬರೆದು, ಇಂತಹ ಕಾರ್ಯಕ್ರಮಗಳಲ್ಲಿ ರಾಜ್ಯ ಗೀತೆಯನ್ನು ಮೊದಲು ಹಾಗೂ ರಾಷ್ಟ್ರೀಯ ಗೀತೆಯನ್ನು ಕೊನೆಯಲ್ಲಿ ನುಡಿಸುವುದನ್ನು ಕಡ್ಡಾಯಗೊಳಿಸುವಂತೆ ಕೋರಿದ್ದರು.























































error: Content is protected !!
Scroll to Top