ಕಾರ್ಕಳ : ನಾವು ಬಡವರ, ನಿರ್ಗತಿಕರ ಕಷ್ಟಕಾರ್ಪಣ್ಯಗಳನ್ನು ಅರಿತು ಅವರ ಬಾಳಿನಲ್ಲಿ ಸಂತೋಷವನ್ನು ತರಲು ಕಾರಣವಾದಾಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಉಡುಪಿ ಧರ್ಮ ಪ್ರಾಂತ್ಯದ ಧರ್ಮಾದ್ಯಕ್ಷ ವಂ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅಭಿಪ್ರಾಯಪಟ್ಟರು.
ಅವರು ಆ.10ರಂದು ಅತ್ತೂರು ಸಂತ ಲಾರೆನ್ಸರ ಬಸಿಲಿಕದ ಸಮರ್ಪಣೆಯ ದಶಮಾನೋತ್ಸವ ಹಾಗೂ ಪಾಲಕ ಸಂತರ ಹಬ್ಬದ ಪ್ರಯುಕ್ತ ಬಲಿ ಪೂಜೆಯಲ್ಲಿ ಪಾಲ್ಗೊಂಡು ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಧರ್ಮಸಭೆಯ ಸಂಪತ್ತನ್ನು ಬಡವರಿಗೆ ಹಾಗೂ ನಿರ್ಗತಕರಿಗೆ ಹಂಚಿದ ಸಂತ ಲಾರೆನ್ಸರು ನಮಗೆಲ್ಲರಿಗೂ ಆದರ್ಶ. ಅವರು ಬೋಧಿಸಿದ ತತ್ವಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು.

ಕ್ರಿಸ್ತ ಕೃಪ ಕಟ್ಟಡದ ಆಶೀರ್ವಚನ ಹಾಗೂ ನೂತನವಾಗಿ ನಿರ್ಮಿಸಲಾಗುತ್ತಿರುವ ಬಲಿಪೀಠದ ಶಂಕುಸ್ಥಾಪನೆಯನ್ನು ಧರ್ಮಾದ್ಯಕ್ಷರ ನೇತೃತ್ವದಲ್ಲಿ ನಡೆಸಲಾಯಿತು. ಉಡುಪಿ ಧರ್ಮ ಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಬಲಿ ಪೂಜೆಯಲ್ಲಿ ಪ್ರವಚನ ನೀಡಿದರು. ಉಡುಪಿ ಧರ್ಮ ಪ್ರಾಂತ್ಯದ ವಿಕಾರ ಜನರಲ್ ಮೊ. ಫ್ರಾನ್ಸಿಸ್ ಲುವಿಸ್, ಧರ್ಮಪ್ರಾಂತ್ಯದ ಚಾನ್ಸಲರ್ ವಂ. ಸ್ಟೀವನ್ ಡಿಸೋಜಾ ಪಾಲ್ಗೊಂಡಿದ್ದರು.

ಸನ್ಮಾನ
ಬಲಿಪೂಜೆಯ ನಂತರ ನಡೆದ ದಶಮಾನೋತ್ಸವದ ಆಚರಣೆಯಲ್ಲಿ ಕ್ರಿಸ್ತಕೃಪ ಕಟ್ಟಡದ ರಚನೆಯಲ್ಲಿ ಶ್ರಮವಹಿಸಿದ ಹಾಗೂ ಬಸಿಲಿಕಾದಲ್ಲಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ವಂ. ಅಲ್ಬನ್ ಡಿಸೋಜಾ, ವಂ. ಜಾರ್ಜ್ ಡಿಸೋಜಾ ಹಾಗೂ ವಂ. ರೋಮನ್ ಮಸ್ಕರೇನಸ್ ಹಾಗೂ ನಿವೃತ್ತ ಮತ್ತು ಹಾಲಿ ಧರ್ಮಾಧ್ಯಕ್ಷರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಪಾಲನಾ ಆಯೋಗಗಳ ಸಂಯೋಜಕಿ ರೀಟಾ ಲೋಬೊ ಉಪಸ್ಥಿತರಿದ್ದರು. ಬಸಿಲಿಕಾದ ನಿರ್ದೇಶಕ ವಂ. ಆಲ್ಬನ್ ಡಿಸೋಜ ಸ್ವಾಗತಿಸಿದರು. ಪಾಲನಾ ಮಂಡಳಿಯ ಕಾರ್ಯದರ್ಶಿ ಮೆಲ್ವಿನ್ ಕ್ಯಾಸ್ತಲಿನೊ ದಶಮಾನೋತ್ಸವದ ವರದಿಯನ್ನು ವಾಚಿಸಿದರು. ವಿಲ್ಸನ್ ಟೆಲ್ಲಿಸ್ ಕಾರ್ಯಕ್ರಮ ನಿರೂಪಿಸಿದರು. ಪಾಲನಾ ಮಂಡಳಿಯ ಉಪಾಧ್ಯಕ್ಷ ವಂದೀಶ್ ಮಥಾಯಸ್ ವಂದಿಸಿದರು.































