ಕಾರ್ಕಳ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಘಟಕದ ಆಶ್ರಯದಲ್ಲಿ ಮಳೆಯಲಿ ಜೊತೆಯಲಿ- ಮುಂಗಾರು ಯುವ ಕವಿಗೋಷ್ಠಿ ಜು. 21ರಂದು ಇನ್ನಾದ ಮರದ ಮನೆಯ ಪ್ರಕೃತಿ ಹಣ್ಣಿನ ತೋಟ ಸುಕಂತಾಯಿ ಕಾಟೇಜ್‌ನಲ್ಲಿ ನಡೆಯಿತು.
ಮರದ ಮನೆಯ ಯಜಮಾನ ಚಂದ್ರಕಾಂತ ರಾವ್ ಇನ್ನಾ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಇಂದು ಮರದ ಮನೆಯ ಸುತ್ತಲೂ ಸಾವಿರಾರು ಹಣ್ಣಿನ ಗಿಡಗಳ, ಮರಗಳ ನಿತ್ಯೋತ್ಸವ ಇಲ್ಲಿದೆ. ನಾನು ಹುಟ್ಟಿ ಬೆಳೆದು ಆಟವಾಡುತ್ತಾ ಓಡಾಡಿದ ಜಾಗವಿದು. ಜೀವನವನ್ನು ಕಟ್ಟಿಕೊಟ್ಟ ಪುಣ್ಯ ಮಣ್ಣಿದು. ಈ ಮಣ್ಣಿನ ಕಂಪು ನನ್ನನ್ನು ಮತ್ತೆ ಇಲ್ಲಿಗೆ ಬರಮಾಡಿದೆ. ಮರಳಿ ಮಣ್ಣಿಗೆ ಎಂಬಂತೆ ಈ ಮಣ್ಣಿನ ಋಣವನ್ನು ತೀರಿಸಲು ಪ್ರಕೃತಿ ಪ್ರೀತಿ ತೋರಿದೆ. ಪ್ರಕೃತಿ ಪರಿಸರದ ಶ್ರೇಷ್ಠತೆಯಲ್ಲಿ ನನಗೂ ಸಾರ್ಥಕತೆಯ ಭಾವವಿದೆ ಎಂದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿ ಕಸಾಪ ಕಾರ್ಕಳ ಘಟಕ ನಿರಂತರವಾಗಿ ನಡೆಸುವ ಸಾಹಿತ್ಯ ಚಟುವಟಿಕೆಗಳು ಅಭಿನಂದನಾರ್ಹ ಎಂದರು.
ಕವಿಗೋಷ್ಠಿಯ ಸಮನ್ವಯಕಾರ ತಾಲೂಕು ಸಮ್ಮೇಳನದ ಸರ್ವಾಧ್ಯಕ್ಷ ಹಿರಿಯ ಸಾಹಿತಿ ಸಿದ್ದಾಪುರ ವಾಸುದೇವ ಭಟ್ ಮಾತನಾಡಿ, ಕವಿಗಳು ಹಾಗು ಕವಯತ್ರಿಯರು ಪ್ರಕೃತಿ ಪ್ರೀತಿಯೊಂದಿಗೆ ಸಕಾರಾತ್ಮಕ ದೃಷ್ಟಿಯನ್ನು ರೂಢಿಸಿಕೊಂಡಾಗ ಕವನಗಳು ಸುಂದರವಾಗಿ ಮೂಡಿಬರುತ್ತವೆ ಎಂದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಮಾತನಾಡಿ, ಕನ್ನಡ ನಾಡು ಪ್ರಕೃತಿ ಸೌಂದರ್ಯದ ಬೀಡು. ಸೌಂದರ್ಯದ ಸೊಬಗಿಗೆ ಇನ್ನಾದ ಮರದ ಮನೆಯ ಪ್ರಕೃತಿ ಹಣ್ಣಿನ ತೋಟವೂ ಇನ್ನಷ್ಟು ಚೆಲುವು ನೀಡಿದೆ. ಮರದ ಮನೆಯ ಯಜಮಾನ ಅಪ್ಪಟ ಪರಿಸರ ಪ್ರೇಮಿ ಚಂದ್ರಕಾಂತ್ ರಾವ್ ಅವರ ಸುಂದರವಾದ ಪ್ರಕೃತಿ ಹಣ್ಣಿನ ತೋಟ ಕಲ್ಪನೆಯೇ ನಮಗೆಲ್ಲಾ ಆದರ್ಶ ಎಂದರು.
ಕವಿಗೋಷ್ಠಿಯಲ್ಲಿ ರಮೇಶ್ ಪ್ರಭು, ಕಾಂತಾವರ ಶಿವಾನಂದ ಶೆಣೈ, ಗಂಗಾಧರ ಪಣಿಯೂರು, ಶಿವಪ್ಪ ಕಾರ್ಕಳ, ಶ್ಯಾಮ್ ಪ್ರಸಾದ್, ಚಂದ್ರ ನಾಯ್ಕ್ ನಿಟ್ಟೆ, ಧರಣೇಂದ್ರ ಕುಮಾರ್, ಗಣೇಶ ಜಾಲ್ಸೂರು, ದಿನೇಶ್ ಮುಂಡ್ಕೂರು, ಅನುಪಮಾ ದೇವಿ ಮಾಳ, ಸುಲೋಚನಾ, ಶೈಲಜಾ ಹೆಗ್ಡೆ, ಡಾ. ಸುಮತಿ, ಡಾ. ಮಾಲತಿ ಪ್ರಭು, ಅವನೀ ಉಪಾಧ್ಯ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.
ಲೇಖಕ ರಾಜೇಂದ್ರ ಭಟ್ ಮುಖ್ಯ ಅತಿಥಿ ಚಂದ್ರಕಾಂತ್ ರಾವ್ ಅವರನ್ನು ಪರಿಚಯಿಸಿದರು. ರಂಗ ಸಂಸ್ಕೃತಿ ಅಧ್ಯಕ್ಷ ಎಸ್. ನಿತ್ಯಾನಂದ ಪೈ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ರೇಷ್ಮಾ ಉದಯ ಶೆಟ್ಟಿ, ಪ್ರಕಾಶ್ ನಾಯ್ಕ್ ಮುಂಡ್ಕೂರು, ಕೋಶಾಧಿಕಾರಿ ಅರುಣ್ ರಾವ್, ಕಸಾಪ ಕಾರ್ಯದರ್ಶಿ ದೇವದಾಸ್ ಕೆರೆಮನೆ ಉಪಸ್ಥಿತರಿದ್ದರು.
ವಿದ್ಯಾ ಶೇಡಿಗೇರಿ ಪ್ರಾರ್ಥಿಸಿ, ಕಾರ್ಕಳ ಕಸಾಪ ಸಂಘಟನಾ ಕಾರ್ಯದರ್ಶಿ ಗಣೇಶ್ ಜಾಲ್ಸೂರು ನಿರೂಪಿಸಿ, ಗೌರವ ಕಾರ್ಯದರ್ಶಿ ಸುಧಾಕರ ಪೋಸ್ರಾಲು ವಂದಿಸಿದರು. ಕಸಾಪ ಸದಸ್ಯರಾದ ಶಿವಸುಬ್ರಹ್ಮಣ್ಯ ಉಪಾಧ್ಯ, ದೇವುದಾಸ್ ನಾಯಕ್, ತಿಪ್ಪೇಸ್ವಾಮಿ ಚಳ್ಳಕೆರೆ, ಲಕ್ಷ್ಮೀ ಹೆಗ್ಡೆ, ಸುಧಾ ಶ್ಯಾಮ್ ಪ್ರಸಾದ್, ಸುಜಿತ್ ಸಹಕರಿಸಿದರು.














