ಇಂದು (ಜೂ. 29) ಮಂಜುನಾಥ ಪೈ ಸಭಾಭವನದಲ್ಲಿ ಮಾಹಿತಿ ಕಾರ್ಯಾಗಾರ
ಕಾರ್ಕಳ : ಉಡುಪಿ ಜಿಲ್ಲಾ ಪೊಲೀಸ್ ಮತ್ತು ಕಾರ್ಕಳ ಪೊಲೀಸ್ ಇಲಾಖೆ ವತಿಯಿಂದ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಪೊಲೀಸ್ ನೇಮಕಾತಿ ಕುರಿತು ಅರ್ಜಿ ಸಲ್ಲಿಸುವ ಮತ್ತು ಪರೀಕ್ಷಾ ವಿಧಾನದ ಬಗ್ಗೆ ಮಾಹಿತಿ ಕಾರ್ಯಾಗಾರವು ಇಂದು (ಸೋಮವಾರ) ಸಂಜೆ 4 ಗಂಟೆಗೆ ಕಾರ್ಕಳ ಮಂಜುನಾಥ ಪೈ ಸಭಾಭವನದಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು 3395 ಕಾನ್‌ಸ್ಟೇಬಲ್ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿಗೊಳಿಸಲು ಅರ್ಜಿ ಆಹ್ವಾನಿಸಿದ್ದು ಅರ್ಜಿ ಸಲ್ಲಿಸಲು 2026ರ ಜುಲೈ 3 ಕೊನೆಯ ದಿನಾಂಕವಾಗಿದೆ.
ಪೊಲೀಸ್ ಇಲಾಖೆಗೆ ಕಾರ್ಕಳ, ಹೆಬ್ರಿ, ಮೂಡುಬಿದಿರೆ ಭಾಗದ ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಗೊಳ್ಳಬೇಕೆಂಬ ಉದ್ದೇಶದಿಂದ ಅರ್ಜಿ ಸಲ್ಲಿಸುವ ಮತ್ತು ಪರೀಕ್ಷಾ ವಿಧಾನದ ಬಗ್ಗೆ ಪೊಲೀಸ್ ಇಲಾಖೆಯ ಹಿರಿಯ, ಅನುಭವಿ ಅಧಿಕಾರಿಗಳಿಂದ ಮಾಹಿತಿ ನೀಡಲಾಗುತ್ತಿದೆ. ಯುವಕ, ಯುವತಿಯರು, ಪಿಯುಸಿ ತೇರ್ಗಡೆಗೊಂಡಿರುವ ವಿದ್ಯಾರ್ಥಿಗಳು ಹಾಗೂ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಕಾರ್ಕಳ ಡಿವೈಎಸ್‌ಪಿ ವಿಜಯ ಪ್ರಸಾದ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






































































