ಸಾರ್ವಜನಿಕರಿಗೆ, ವಾಹನ ಸವಾರರಿಗೆ ಸಂಕಷ್ಟ – ಅಧಿಕಾರಿಗಳ ಮೌನ ಖಂಡನೀಯ : ಸುರೇಶ್ ಶೆಟ್ಟಿ ಶಿವಪುರ
ಕಾರ್ಕಳ : ಮುನಿಯಾಲು – ಪಡುಕುಡೂರು- ಶಿವಪುರ ರಸ್ತೆ ಶಿವಪುರ ಮತ್ತು ಮುನಿಯಾಲು ಭಾಗದ ಜನರಿಗೆ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಲೋಕೋಪಯೋಗಿ ಇಲಾಖೆ ಅಧೀನದಲ್ಲಿದೆ. ಈ ರಸ್ತೆಯನ್ನು ಕಳೆದ ಬೇಸಿಗೆಯಲ್ಲಿ ಯಾವುದೇ ಟೆಂಡರ್ ಪಡೆಯದೆ ಏಕಾಏಕಿಯಾಗಿ ಕಾರ್ಕಳದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರು ಕಾನೂನು ಬಾಹಿರವಾಗಿ ಇಲಾಖೆಯ ಅನುಮತಿಯಿಲ್ಲದೆ ತನ್ನ ಯಂತ್ರೋಪಕರಣ ಮತ್ತು ವಾಹನಗಳನ್ನು ಉಪಯೋಗಿಸಿ ರಸ್ತೆ ಅಗೆದು ಬಿಟ್ಟಿರುವುದರಿಂದ ಇದೀಗ ಮಳೆಗಾಲ ಆರಂಭವಾಗಿ ರಸ್ತೆಗಳಲ್ಲಿ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು ವಾಹನ ಸವಾರರು ವಾಹನ ಚಲಾಯಿಸಲಾಗದೆ ಪರದಾಡುತ್ತಿದ್ದಾರೆ. ಯಾರೋ ಮಾಡಿದ ಹೇಯ ಕೃತ್ಯಕ್ಕೆ ಈ ಭಾಗದ ಜನರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಕಾರ್ಕಳ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಶ್ ಶೆಟ್ಟಿ ಶಿವಪುರ ತಿಳಿಸಿದ್ದಾರೆ.
ಯಾರ ಕೈವಾಡ ಇದೆ ?
ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಇಂತಹ ಪ್ರಮುಖ ರಸ್ತೆಯನ್ನು ಅಗೆದು ಹಾಳು ಮಾಡಿದರೂ ಕೂಡ ರಸ್ತೆ ಅಗೆದವರ ಮೇಲೆ ಕಾನೂನು ಕ್ರಮ ಆಗದೇ ಇರುವುದು ಆಶ್ಚರ್ಯ ತಂದಿದೆ. ಇದರ ಹಿಂದೆ ಯಾರ ಕೈವಾಡ ಇದೆ ? ಅಧಿಕಾರಿಗಳ ಮೌನ ಏನನ್ನು ಹೇಳುತ್ತಿದೆ ? ರಾಜ್ಯದಲ್ಲಿ ತನ್ನ ಪಕ್ಷದ ಸರ್ಕಾರ ಇದೆ ಎಂಬ ದರ್ಪದಲ್ಲಿ ರಸ್ತೆ ಅಗೆತ ಮಾಡಿರುವುದು ಎಷ್ಟು ಸರಿ. ಕಾರ್ಕಳ ಕ್ಷೇತ್ರದಲ್ಲಿ ಬೇರೆ ಯಾವುದೇ ಅಭಿವೃದ್ಧಿ ಚಟುವಟಿಕೆಗಳು ನಡೆದರು ಅದು ನಾನೆ ಮಾಡಿದ್ದು ಎಂದು ಪೋಸ್ ಕೊಡುವ ಮುನಿಯಾಲು ಉದಯ ಶೆಟ್ಟಿ ಅಕ್ರಮವಾಗಿ ತನ್ನ ಯಂತ್ರಗಳಿಂದ ಸಾರ್ವಜನಿಕ ರಸ್ತೆ ಅಗೆದು ಸಾರ್ವಜನಿಕರು ಅನುಭವಿಸುವ ತೊಂದರೆ ಕಣ್ಣೆದುರು ಕಂಡರೂ ಕಣ್ಣಿಗೂ ಕಾಣದಂತೆ ವರ್ತಿಸುತ್ತಿದ್ದು ಇದನ್ನು ನೋಡಿದರೆ ಈ ಭಾಗದ ಜನತೆಗೆ ತೊಂದರೆ ಕೊಡುವುದೇ ಇದರ ಮುಖ್ಯ ಉದ್ದೇಶದಂತೆ ಭಾಸವಾಗುತ್ತಿದೆ ಎಂದು ಸುರೇಶ್ ಶೆಟ್ಟಿ ಆರೋಪಿಸಿದ್ದಾರೆ.

ಮೌನವೇಕೆ ?
ಕಾನೂನುಬಾಹಿರವಾಗಿ ರಸ್ತೆ ಅಗೆದಿರುವ ಬಗ್ಗೆ ಶಾಸಕರು ಹಾಗೂ ಸ್ಥಳೀಯರು ಇಲಾಖೆಗೆ ದೂರು ಕೊಟ್ಟಿದ್ದರೂ ಯಾವುದೇ ಕ್ರಮವಾಗದೇ ಇರುವುದು ಸ್ಥಳೀಯ ಸಾರ್ವಜನಿಕರಲ್ಲಿ ಅಧಿಕಾರಿಗಳ ನಡೆಯ ಮೇಲೆ ಸಂಶಯ ವ್ಯಕ್ತವಾಗುತ್ತದೆ. ಇದೇ ಜಾಗದಲ್ಲಿ ಬೇರೆ ಯಾರಾದರೂ ಒಂದು ಇಂಚು ರಸ್ತೆ ಆಗಿದಿದ್ದರೂ ಕ್ರಮ ಕೈಗೊಳ್ಳುವ ಇಲಾಖೆ ಇಲ್ಲಿ ಇಷ್ಟು ಅಕ್ರಮ ಕೆಲಸ ಮಾಡಿದ್ದರೂ ಮೌನ ವಹಿಸಿರುವುದು ಯಾಕೆ? ಈ ಕೂಡಲೇ ಅಧಿಕಾರಿಗಳು ಇದರ ಕುರಿತು ಗಮನ ಹರಿಸಿ ರಸ್ತೆಯನ್ನು ಸಂಚಾರ ಯೋಗ್ಯ ರಸ್ತೆಯನ್ನಾಗಿಸಿ ಎಂದು ಆಗ್ರಹಿಸಿದ್ದಾರೆ.
ಕ್ಷಮೆಯಾಚಿಸಿ
ಸುಮಾರು ಒಂದು ಕಿಲೋಮೀಟರ್ ರಸ್ತೆ ವಾಹನ ಸಂಚಾರಕ್ಕೆ ಅಯೋಗ್ಯವಾಗಿದ್ದು, ಜನರು ಪರ್ಯಾಯ ಮಾರ್ಗ ಹುಡುಕುವ ಅನಿವಾರ್ಯತೆ ಉಂಟಾಗಿದೆ. ಅದರಲ್ಲೂ ದ್ವಿಚಕ್ರ ವಾಹನದವರಂತೂ ಸಂಚರಿಸಲು ಸಾಧ್ಯವೇ ಇಲ್ಲ. ಆದ್ದರಿಂದ ಮಾನ್ಯ ಉದಯ ಶೆಟ್ಟಿ ಅವರಿಗೆ ನಿಜವಾಗಿಯೂ ಜನರ ಕುರಿತು ಕಾಳಜಿ ಇದ್ದರೆ ತಾನು ಮಾಡಿದ ತಪ್ಪನ್ನು ಅರಿತುಕೊಂಡು ಈ ಭಾಗದ ಜನರಲ್ಲಿ ಕ್ಷಮೆಯಾಚಿಸಿ ಇಲಾಖೆಗೆ ದಂಡ ಕಟ್ಟಬೇಕು. ನಂತರ ಇಲಾಖೆ ಈ ರಸ್ತೆಯನ್ನು ಸಾರ್ವಜನಿಕ ಸುಗಮ ಸಂಚಾರಕ್ಕೆ ಸಿದ್ದ ಮಾಡಿ ಕೊಡಬೇಕಾಗಿ ಈ ಭಾಗದ ಜನತೆಯ ಪರವಾಗಿ ನಮ್ಮ ಆಗ್ರಹ ಎಂದ ಸುರೇಶ್ ಶೆಟ್ಟಿ ರಸ್ತೆ ಸರಿಪಡಿಸದಿದ್ದಲ್ಲಿ ಈ ಭಾಗದ ಜನತೆಯೊಂದಿಗೆ ಇದೇ ರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
























