ಕಾರ್ಕಳ : ಉಡುಪಿ ಜಿಲ್ಲಾ ಪಂಚಾಯತ್ ಸಾಮಾಜಿಕ ಅರಣ್ಯ ವಲಯ ಕಾರ್ಕಳ ಇದರ ವತಿಯಿಂದ ಮಾಳ ಕೂಡಿಗೆ ಕೇಂದ್ರೀಯ ಸಸ್ಯ ಕ್ಷೇತ್ರದಲ್ಲಿ ಸುಮಾರು 34 ಸಾವಿರ ವಿವಿಧ ಸಸಿಗಳನ್ನು ಬೆಳೆಸಿ, ವಿತರಣೆಗೆ ಮುಂದಾಗಿದೆ. ಈ ಪೈಕಿ 23 ಸಾವಿರ ಸಸಿಗಳನ್ನು ಸಾರ್ವಜನಿಕರಿಗೆ ಹಾಗೂ ರೈತರಿಗೆ ನೆಡಲು ಸರಕಾರದ ಸಹಾಯಧನ ರೂಪದಲ್ಲಿ ನೀಡಲಾಗುತ್ತಿದೆ. ಉಳಿದಂತೆ 11 ಸಾವಿರ ಗಿಡಗಳನ್ನು ರಸ್ತೆ ಬದಿ, ಬ್ಲಾಕ್ ನೆಡುತೋಪು, ಶಾಲಾ ಆವರಣದಲ್ಲಿ ನೆಡಲು ಸಿದ್ಧಗೊಳಿಸಲಾಗಿದೆ. ಸಾರ್ವಜನಿಕರು ಒಂದು ಗಿಡಕ್ಕೆ 3 ರೂ. ಹಾಗೂ ದೊಡ್ಡ ಚೀಲದ ಗಿಡಕ್ಕೆ 6 ರೂ. ಪಾವತಿಸಿ ಪಡೆಯಬಹುದಾಗಿದೆ.
ಕಾರ್ಕಳ ತಾಲೂಕಿನ ವಿವಿಧ ಭಾಗದ ರಸ್ತೆ ಬದಿಗಳಲ್ಲಿ 16 ಕಿ. ಮೀ. ದೂರ, ಖಾಲಿ ಇರುವ ಸರಕಾರಿ ಜಾಗದಲ್ಲಿ 15 ಹೆಕ್ಟೇರ್ ಅಲ್ಲದೇ 2 ಹೆಕ್ಟೇರ್ ಶಾಲಾ ವನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ನರೇಗಾ ಯೋಜನೆಯಡಿಯಲ್ಲಿಯೂ ರಸ್ತೆ ಬದಿಗಳಲ್ಲಿ ಸಸಿ ನೆಡಲು ಕ್ರಮವಹಿಸಲಾಗಿದೆ.
ಯಾವೆಲ್ಲ ಗಿಡಗಳಿವೆ ?
ಮಾಳ ಕೂಡಿಗೆ ಸಸ್ಯಕ್ಷೇತ್ರದಲ್ಲಿ ಸಾಗುವಾನಿ, ಗೇರು, ಮಹಾಗನಿ, ಸೀತಾಫಲ, ಹೊಳೆ ದಾಸವಾಳ, ಕುಂಕುಮ, ರಕ್ತಚಂದನ, ನೆಲ್ಲಿ, ಬಿದಿರು, ಮುತ್ತುಗ, ಬಾದಾಮಿ, ಜಂಬುನೇರಳೆ, ನೇರಳೆ, ರಾಂಬುಟನ್, ಲಕ್ಷ್ಮಣಫಲ, ಮಾವು, ಕಹಿಬೇವು, ಲಿಂಬೆ, ಸಂಪಿಗೆ, ಶ್ರೀಗಂಧ, ಹಲಸು, ಪುನರ್ಪುಳಿ, ಸ್ಪೆಥೋಡಿಯಾ, ಬೇಂಗ, ಸಿಹಿಹುಣಸೆ, ಟಬುಬಿಯಾ ಇತ್ಯಾದಿ ಸಸ್ಯಗಳು ಲಭ್ಯವಿದೆ.

ಗಿಡ ಪಡೆಯಲು ರೈತರು, ಸಾರ್ವಜನಿಕರು ತಮ್ಮ ಜಮೀನಿನ ಆರ್‌ಟಿಸಿ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ ನೀಡಿ ಈ ಮೇಲಿನ ಸಸ್ಯ ಕ್ಷೇತ್ರದಿಂದ ಸಸಿಗಳನ್ನು ಪಡೆಯಬಹುದಾಗಿದೆ. ಹಾಗೆಯೇ ಶಾಲೆ, ಸಂಘ ಸಂಸ್ಥೆಗಳಿಗೆ ವನಮಹೋತ್ಸವ, ಪರಿಸರ ದಿನಾಚರಣೆ ಆಚರಣೆಗೆ ಉಚಿತವಾಗಿ ಸಸಿಗಳನ್ನು ವಿತರಿಸಲಾಗುತ್ತಿದೆ ಎಂದು ಸಾಮಾಜಿಕ ಅರಣ್ಯ ವಲಯ ಅರಣ್ಯಾಧಿಕಾರಿ ರವೀಂದ್ರ ಪಿ. ಆಚಾರ್ಯ ತಿಳಿಸಿದ್ದಾರೆ.
































