ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಸೌಹಾರ್ದ ಇಫ್ತಾರ್ ಕೂಟ

ಕಾರ್ಕಳ : ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಸಾಲ್ಮರ ಜಾಮೀಯಾ ಮಸೀದಿಯ ಶಾದಿ‌ ಮಹಲ್ ಸಭಾಂಗಣದಲ್ಲಿ ಸೌಹಾರ್ದ ಇಫ್ತಾರ್‌ ಕೂಟ ನಡೆಯಿತು.
ಕಾರ್ಕಳ ಬಂಗ್ಲೆಗುಡ್ಡೆಯ ತೈಬಾ ಗಾರ್ಡನ್ ಪ್ರಾಂಶುಪಾಲ ಮೌಲಾನ ಅಹ್ಮದ್ ಶರೀಫ್‌ ಮಾತನಾಡಿ, ಅನೇಕ ಸಂಶೋಧಕರು, ವಿಜ್ಞಾನಿಗಳು ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಮನಃಶಾಂತಿಗಾಗಿ ಧರ್ಮದ ಪಾಲನೆಗೆ ಮೊರೆ ಹೋಗುತ್ತಾರೆ. ನಾವೆಲ್ಲರೂ ನಮ್ಮ ನಮ್ಮ ಧರ್ಮ ಪಾಲಿಸುತ್ತಾ ಶಾಂತಿ ಸೌಹಾರ್ದತೆಯಿಂದಿರಬೇಕೆಂದರು.
ನಕ್ರೆ ಚರ್ಚ್ ಧರ್ಮಗುರುಗಳಾದ ವಂದನೀಯ ಫಾದರ್ ಲೂಯಿಸ್ ಡೇಸಾ ಮಾತನಾಡಿ, ನಾವೆಲ್ಲರೂ ದೇವರ ಮಕ್ಕಳು, ಜಾತಿ, ಧರ್ಮಗಳ ಭೇದ ಸಮಾಜದ ಒಡೆಯದಂತೆ ಜಾಗೃತ್ರೆವಹಿಸಬೇಕಿದೆ ಎಂದರು.
ಹಿರಿಯ ನ್ಯಾಯವಾದಿ, ಕಾಂಗ್ರೆಸ್ ಮುಖಂಡ ಶೇಖರ ಮಡಿವಾಳ ಮಾತನಾಡಿ, ಜಗತ್ತು ಯುದ್ದದ ಕಾರ್ಮೋಡ ಕವಿದಿದೆ. ಮುಂದಿನ ದಿನಗಳಲ್ಲಿ ಶಾಂತಿ ನೆಲೆಸುವಂತಾಗಬೇಕು. ಈ ನಿಟ್ಟಿನಲ್ಲಿ ಸರ್ವರೂ ಏಕಮನಸ್ಸಿನಿಂದ ಮುಂದುವರಿಯುವುದು ಅವಶ್ಯ ಎಂದರು.
ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಮಾತನಾಡಿ, ಸಮಾನತೆಯನ್ನು ಸಾರಿದ ಸಂತ ಶಿಶುನಾಳ ಶರೀಫರ ಜಯಂತಿಯ ಪುಣ್ಯ ದಿನದಂದು ಎಲ್ಲರೂ ಒಂದಾಗಿದ್ದೇವೆ. ಎಲ್ಲರಿಗೂ ಉಪವಾಸದ ತಿಂಗಳು ಶುಭವನ್ನುಂಟು ಮಾಡಲಿ ಆಶಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕವು ಸರ್ವ ಧರ್ಮವನ್ನೂ ಒಗ್ಗೂಡಿಸಿ ಸೌಹಾರ್ದತೆಯನ್ನು ಸಾರುವ ನಿಟ್ಟಿನಲ್ಲಿ ಸೌಹಾರ್ದ ಇಪ್ತಾರ್ ಕೂಟ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು.


ಕಾರ್ಯಕ್ರಮದಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಮುಸ್ಲಿಂ ಒಕ್ಕೂಟ ಕಾರ್ಕಳ ಘಟಕದ ಅಧ್ಯಕ್ಷ ಮೊಹ್ಮದ್ ಗೌಸ್, ಆಶ್ಫಕ್ ಅಹ್ಮದ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಪ್ರಮುಖ ಎಂ.ಪಿ. ಮೊಯಿದಿನಬ್ಬ ಇನ್ನಾ ಸ್ವಾಗತಿಸಿದರು. ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಶೇಖ್ ಶಬೀರ್ ಮಿಯ್ಯಾರು ನಿರೂಪಿಸಿದರು. ಅಬ್ದುಲ್ ಸಾಣೂರು ವಂದಿಸಿದರು.



























































































































error: Content is protected !!
Scroll to Top