ಪದ್ಮಾವತಿ ಮಹಿಳಾ ಭಜನಾ ಮಂಡಳಿ ದಶಮಾನೋತ್ಸವ – ವಾಕಥಾನ್

ಕಾರ್ಕಳ : ಮಹಿಳೆಯರು ಪ್ರಸ್ತುತ ಪ್ರತಿಯೊಂದು ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಮಹಿಳೆಯರು ಸಂಘಟಿತವಾಗಿ ಕಾರ್ಯಕ್ರಮ ಆಯೋಜಿಸುವುದರಿಂದ ಸಮಾಜದ ಬದಲಾವಣೆ ಸಾಧ್ಯವಾಗಲಿದೆ ಎಂದು ಶಾಸಕ ವಿ. ಸುನಿಲ್‌ ಕುಮಾರ್‌ ಅಭಿಪ್ರಾಯಪಟ್ಟರು.
ಅವರು ಮಾ. 9ರಂದು ಪದ್ಮಾವತಿ ಮಹಿಳಾ ಭಜನಾ ಮಂಡಳಿಯ ದಶಮಾನೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ವಾಕಥಾನ್‌ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆರೋಗ್ಯಕರ ಜೀವನಕ್ಕೆ ವ್ಯಾಯಾಮ, ನಡಿಗೆಗೆ ಆದ್ಯತೆ ನೀಡುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ವಾಕಥಾನ್‌ನಂತಹ ಪ್ರಯತ್ನಗಳು ಸ್ತುತ್ಯರ್ಹ ಎಂದರು.
ಉಡುಪಿ ಜಿಲ್ಲಾ ಸ್ಕೌಟ್ ಅಂಡ್ ಗೈಡ್ಸ್ ನ ಆಯುಕ್ತೆ ಜ್ಯೋತಿ ಜೆ. ಪೈ ದೀಪ ಬೆಳಗಿ ವಾಕಥಾನ್‌ಗೆ ಚಾಲನೆ ನೀಡಿದರು. ಜಾಥಾವು ಮುಂಜಾನೆ 6.15ರಿಂದ ಕಾರ್ಕಳ ಸ್ವರಾಜ ಮೈದಾನದಿಂದ ಅನಂತಶಯನ ಮುಖ್ಯರಸ್ತೆಯಾಗಿ ವೆಂಕಟರಮಣ ದೇವಸ್ಥಾನ, ಸ್ಟೇಟ್ ಬ್ಯಾಂಕ್ ಸಮೀಪವಾಗಿ ಗಾಂಧಿ ಮೈದಾನ, ಆನೆಕೆರೆ ಸರ್ಕಲ್, ಗೋಮಟೇಶ್ವರ ಬೆಟ್ಟ ಮಾರ್ಗವಾಗಿ ಬಾಹುಬಲಿ ಹಾಲ್, ಫಿಷರೀಸ್ ಆಗಿ ಸುಮಾರು 5 ಕಿ.ಮೀ. ಸಾಗಿ ಮರಳಿ ಸ್ವರಾಜ್ ಮೈದಾನಕ್ಕೆ ತಲುಪಿತು. ಜಾಥಾಕ್ಕೂ ಮುನ್ನ ಕುಮಾರಿ ಅದಿತಿ ರಾವ್ ವಾರ್ಮ್‌-ಅಪ್ ವ್ಯಾಯಾಮ ನಡೆಸಿದರು.

ಧನ ಸಹಾಯ
ಇದೇ ಸಂದರ್ಭದಲ್ಲಿ ಮಹಿಳಾ ಮಂಡಳಿಯಿಂದ 8 ಮಂದಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಸೇವಾ ಭಾರತೀಯ ಮಣಿಪುರಿ ಮಕ್ಕಳಿಗೆ, ಸ್ಕೌಟ್ ಅಂಡ್ ಗೈಡ್ಸ್ ಮಕ್ಕಳಿಗೆ ಧನ ಸಹಾಯ ನೀಡಲಾಯಿತು.

ಸನ್ಮಾನ
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 6 ಮಂದಿ ಮಹಿಳೆಯರಾದ ನಿರ್ಮಲಾ ಪೈ, ಪ್ರಭಾ ಕಿಶೋರ್, ಭಾರತಿ ಅಮೀನ್, ಯಶೋದಾ ಶೆಟ್ಟಿ, ಶಶಿಕಲಾ ಹೆಗ್ಡೆ ಹಾಗೂ ಶಕುಂತಲಾ ಶೆಣೈ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾಲ್ನಡಿಗೆ ಜಾಥಾದಲ್ಲಿ ವಿಜೇತರಾದ ಅವನಿ, ಶ್ರೇಯಾ, ಅನನ್ಯಾ ಅವರಿಗೆ ಪ್ರಶಸ್ತಿ ಹಾಗೂ ಮೆಚ್ಚುಗೆ ಪಡೆದಂತಹ 10 ವರ್ಷದ ಬಾಲಕಿಯರಾದ ಅಂಜನಿ, ಭೂವಿ ಹಾಗೂ ಹಿರಿಯ ನಾಗರಕರಿಕರಾದ ಪ್ರಭಾ ವಿಜಯ್ ಅವರಿಗೆ ಪದಕ ನೀಡಿ ಗೌರವಿಸಲಾಯಿತು.

ನಿವೃತ್ತ ಲೆಕ್ಕಪರಿಶೋಧಕ ಕಮಲಾಕ್ಷ ಕಾಮತ್, ಬೋಳ ಆಗ್ರೋ ಇಂಡಸ್ಟ್ರೀಸ್‌ನ ಬೋಳಾ ಶಾಲಿನಿ ಕಾಮತ್, ಉದ್ಯಮಿ ಅನಂತಕೃಷ್ಣ ಶೆಣೈ, ಡಾ. ಆಶಾ ಪಿ. ಹೆಗ್ಡೆ, ವಿದ್ವಾನ್ ಯೋಗೇಶ್ ಕಿಣಿ, ಪದ್ಮಾವತಿ ಮಹಿಳಾ ಮಂಡಳಿಯ ಅಧ್ಯಕ್ಷೆ ಅರ್ಚನಾ ಕಿಣಿ ಉಪಸ್ಥಿತರಿದ್ದರು.
​ಸುಷ್ಮಾ ಕಾಮತ್ ಪ್ರಾರ್ಥಿಸಿದರು. ಕಾರ್ಯದರ್ಶಿ ವಾರಿಜಾ ವಿ. ಕಾಮತ್ ಸ್ವಾಗತಿಸಿ, ಕೋಶಾಧಿಕಾರಿ ರಶ್ಮಿ ಭಟ್ ಪ್ರಾಸ್ತಾವಿಕ ಮಾತನ್ನಾಡಿದರು. ಸೀಮಾ ಕಾಮತ್, ಬೋಳಾ ಗೀತಾ ಕಾಮತ್ ನಿರೂಪಿಸಿದರು. ಲಕ್ಷ್ಮೀ ಪ್ರಭು ವಂದಿಸಿದರು.





























































































error: Content is protected !!
Scroll to Top