ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ – ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಕಾರ್ಕಳ : ಜಾಗೃತಿ, ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ವತಿಯಿಂದ ಮಾ. 8ರಂದು ಸಂಘಟನೆಯ ಸದಸ್ಯೆ ಜ್ಯೋತಿ ಗುರುಪ್ರಸಾದ್‌ ಅವರ ಮನೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ಜ್ಯೋತಿ ಅವರು ಸದಸ್ಯೆಯರಿಗೆ ಪುಸ್ತಕ ಬಾಗಿನವನ್ನು ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಜಾಗೃತಿ ಸಂಘಟನೆ ಮಹಿಳಾಪರ ಧ್ವನಿಗೆ ಸೇತುವಾಗಿ, ಆಕೆಯ ಗಟ್ಟಿ ವ್ಯಕ್ತಿತ್ವವನ್ನು ಪೋಷಿಸುವ ಚಾಲಕ ಶಕ್ತಿಯಾಗಿ ಬೆಳೆಯಲಿ ಎಂದು ಹಾರೈಸಿದರು.
ಅನುಪಮಾ ಚಿಪ್ಳೂಂಕರ್ ಅವರು ಸಬಲ ಮಹಿಳೆ ಎಂಬ ವಿಷಯದ ಕುರಿತು ಪ್ರಬಂಧ ಮಂಡನೆ ಮಾಡುತ್ತಾ ಮಹಿಳೆಯರನ್ನು ಸಬಲರಾಗಿಸುವುದು ಕೇವಲ ಸರಕಾರದ ಕೆಲಸವಲ್ಲ. ಅದು ಸಾಮಾಜಿಕ ಹೊಣೆಗಾರಿಕೆ. ಸ್ವತಃ ಮಹಿಳೆಯರೆ ಈ ಬಗ್ಗೆ ಜಾಗೃತರಾಗಬೇಕಾಗಿದೆ ಎಂದರು. ಡಾ. ಮಾಲತಿ ಪೈಯವರು ಚಿ. ನ. ಮಂಗಳಾ ಅವರ ಕವಿತೆಯನ್ನು ವಾಚಿಸಿದರು. ವಸುಧಾ ಅವರು ಸ್ವರಚಿತ ಕಥೆಯನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ಸಾಧಕ ಸದಸ್ಯೆಯರಾದ ಜ್ಯೋತಿ ಗುರುಪ್ರಸಾದ್, ಸಾವಿತ್ರಿ ಮನೋಹರ್ ಹಾಗು ಮಿತ್ರಪ್ರಭಾ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಾಗೃತಿಯ ಅಧ್ಯಕ್ಷೆ ಶ್ಯಾಮಲಾ ಗೋಪೀನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗಾಯತ್ರಿ ವಿಜಯೇಂದ್ರ ಅವರು ಪ್ರಾರ್ಥಿಸಿದರು. ಡಾ. ಸುಮತಿ ಪಿ. ನಿರೂಪಿಸಿದರು. ಮಾಲತಿ ವಸಂತರಾಜ್ ವಂದಿಸಿದರು.





































error: Content is protected !!
Scroll to Top