1 ದಿನದ ಮಟ್ಟಿಗೆ ಪುತ್ತೂರು ಪೌರಾಯುಕ್ತರಾಗಿ ನಿಯುಕ್ತಿ – ಮತ್ತೆ ಕಾರ್ಕಳದಲ್ಲಿ ಮುಂದುವರಿಕೆ
ಕಾರ್ಕಳ : ಕಾರ್ಕಳ ಪುರಸಭೆಯ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರನ್ನು 1 ದಿನದ ಮಟ್ಟಿಗೆ ಪುತ್ತೂರು ನಗರಸಭೆಯ ಪೌರಾಯುಕ್ತರ ಹುದ್ದೆಗೆ ನಿಯುಕ್ತಿಗೊಳಿಸಲಾಗಿದ್ದು ಆ ಬಳಿಕ ಅವರನ್ನು ಮತ್ತೆ ಕಾರ್ಕಳ ಪುರಸಭೆ ಮುಖ್ಯಾಧಿಕಾರಿಯಾಗಿ ಮುಂದುವರಿಸಿ ಆದೇಶ ಹೊರಡಿಸಲಾಗಿದೆ.
ಮುಖ್ಯಾಧಿಕಾರಿ ಶ್ರೇಣಿ- 1 ವೃಂದದ ಅಧಿಕಾರಿಗಳಿಗೆ ಪೌರಾಯುಕ್ತರು ಶ್ರೇಣಿ-2 ವೃಂದಕ್ಕೆ ಕರ್ನಾಟಕ ನಾಗರಿಕ ಸೇವಾ ನಿಯಮಗಳು 1958ರ ನಿಯಮ 42ರಡಿ ಸ್ಥಾನಪಲ್ಲಟ ಆಧಾರದ ಮೇಲೆ ಮುಂಬಡ್ತಿ ನೀಡಿ ಕರ್ನಾಟಕ ಸರಕಾರದ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಟಿ. ಮಂಜುನಾಥ ಅವರು ಆದೇಶಿಸಿದ್ದಾರೆ. ಅದರಂತೆ ಉಡುಪಿ ಜಿಲ್ಲೆ ಕಾರ್ಕಳ ಪುರಸಭೆಯಲ್ಲಿ ಮುಖ್ಯಾಧಿಕಾರಿಯಾಗಿದ್ದ ಲೀನಾ ಬ್ರಿಟ್ಟೋ ಅವರಿಗೆ ಮುಂಬಡ್ತಿ ನೀಡಲಾಗಿದ್ದು ಅವರನ್ನು ಒಂದು ದಿನದ ಮಟ್ಟಿಗೆ ಪುತ್ತೂರು ನಗರಸಭೆಯ ಪೌರಾಯುಕ್ತರ ಹುದ್ದೆಗೆ ನಿಯುಕ್ತಿಗೊಳಿಸಿ ತದನಂತರ ಕಾರ್ಕಳ ಪುರಸಭೆಯ ಮುಖ್ಯಾಧಿಕಾರಿ ಹುದ್ದೆಯಲ್ಲಿ ಮುಂದುವರೆಸಿ ಆದೇಶಿಸಲಾಗಿದೆ.

ಲೀನಾ ಬ್ರಿಟ್ಟೋ ಅವರು ಪುತ್ತೂರು ಸಾಮೆತ್ತಡ್ಕ ನಿವಾಸಿಯಾಗಿದ್ದು ಪ್ರಸ್ತುತ ಬಂಟ್ವಾಳದಲ್ಲಿ ವಾಸವಾಗಿದ್ದಾರೆ. ಶಿರಸಿ ನಗರಸಭೆ, ಪುತ್ತೂರು ಪುರಸಭೆ, ಸುಳ್ಯ ನಗರ ಪಂಚಾಯತ್, ಪುತ್ತೂರು ಪುರಸಭೆ, ಮೂಡಬಿದ್ರೆ ಪುರಸಭೆ, ಹೊನ್ನಾವರ ಪಟ್ಟಣ ಪಂಚಾಯತ್, ಮೂಡಿಗೆರೆ ಪಟ್ಟಣ ಪಂಚಾಯತ್, ಬಂಟ್ವಾಳ ಪುರಸಭೆ, ವಿಟ್ಲ ಪಟ್ಟಣ ಪಂಚಾಯತ್, ಬೇಲೂರು ಪುರಸಭೆ, ಪುತ್ತೂರು ನಗರಸಭೆ, ಬಂಟ್ವಾಳ ಪುರಸಭೆ, ಮುಳಬಾಗಿಲು ಪುರಸಭೆ, ಮಂಗಳೂರು ಮಹಾನಗರ ಪಾಲಿಕೆ, ಬಂಟ್ವಾಳ ಪುರಸಭೆಯಲ್ಲಿ ಕಾರ್ಯನಿರ್ವಹಿಸಿದ್ದು ಪ್ರಸ್ತುತ ಕಾರ್ಕಳ ಪುರಸಭೆ ಮುಖ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.











