ಕಾರ್ಕಳ : ಕುಕ್ಕುಂದೂರು ಫ್ರೆಂಡ್ಸ್ ಕುಕ್ಕುಂದೂರು – ಮುಂಬೈ ಇದರ 17ನೇ ವಾರ್ಷಿಕೋತ್ಸವ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಫೆ. 7ರಂದು ಟಪ್ಪಾಲುಕಟ್ಟೆ ಶ್ರೀ ದುರ್ಗಾದೇವಿ ಅನುದಾನಿತ ಹಿ. ಪ್ರಾ. ಶಾಲೆ ಬಳಿ ಸಮಾಜ ಮಂದಿರದಲ್ಲಿ ನಡೆಯಲಿದೆ.
ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ, 9.30ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ಮಧ್ಯಾಹ್ನ 12ಗಂಟೆಗೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನೆರವೇರಲಿದೆ.
ಸಭಾ ಕಾರ್ಯಕ್ರಮ
ರಾತ್ರಿ 8 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಶಂಕರನಾರಾಯಣ ಭಟ್ ಉದ್ಘಾಟಿಸಲಿದ್ದು, ಮೂಡುಬಿದಿರೆ ಶ್ರೀ ದಿಗಂಬರ ಜೈನ ಮಠದ ಡಾ|| ಸ್ವಸ್ತಿ ಶ್ರೀ ಭಟ್ಟಾರಲ ಚಾರುಕೀರ್ತಿ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ದಿವ್ಯ ಉಪಸ್ಥಿತಿಯಲ್ಲಿರಲಿದ್ದಾರೆ. ಮುಂಬೈ ಉದ್ಯಮಿ ಮಹೇಶ್ ಶೆಟ್ಟಿ ಕುಡುಪುಲಾಜೆ ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಪ್ರದೀಪ್ ಆರ್., ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ, ಕುಕ್ಕುಂದೂರು ಶ್ರೀ ದುರ್ಗಾದೇವಿ ಅನುದಾನಿತ ಹಿ. ಪ್ರಾ. ಶಾಲೆಯ ಸಂಚಾಲಕ ರಾಜೇಂದ್ರ ಮುದ್ಯ, ಕಾರ್ಕಳ ಮೀರಾ ಕಾಮತ್ ಮೆಮೋರಿಯಲ್ ಫಂಡ್ ಸಂಸ್ಥಾಪಕ ಕಮಲಾಕ್ಷ ಕಾಮತ್, ಶಾಲಾ ಮಖ್ಯ ಶಿಕ್ಷಕಿ ಸುಜಾತಾ ಎನ್. ರಾಜ್, ಕುಕ್ಕುಂದೂರು ಫ್ರೆಂಡ್ಸ್, ಕುಕ್ಕುಂದೂರು-ಮುಂಬೈ ಗೌರವಾಧ್ಯಕ್ಷ ತ್ರಿವಿಕ್ರಮ ಕಿಣಿ ಹಾಗೂ ಉದ್ಯಮಿ ಕಮಲಾಕ್ಷ ನಾಯಕ್ ಭಾಗಿಯಾಗಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮ
ಸಂಜೆ 6.30ರಿಂದ ಭಜನಾ ಕಾರ್ಯಕ್ರಮ ಹಾಗೂ ಶಾಲಾ ವಿದ್ಯಾರ್ಥಿಗಳು ಮತ್ತು ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಸಂಘದ ಸದಸ್ಯರು ಹಾಗೂ ಅತಿಥಿ ಕಲಾವಿದರಿಂದ ಪ್ರಸನ್ನ ಕುಕ್ಕುಂದೂರು ರಚನೆಯ ಮದಿಮೆ ದಾಯೆ..? ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ. ಬಳಿಕ ಚಿತ್ರನಟ, ಬಲೆ ತೆಲಿಪಾಲೆ ಖ್ಯಾತಿಯ ಉಮೇಶ್ ಮಿಜಾರ್ ರಚಿಸಿ ನಿರ್ದೇಶಿಸಿರುವ ನಮ್ಮ ಕಲಾವಿದೆರ್ ಬೆದ್ರ ತಂಡದವರಿಂದ ತುಳು ಹಾಸ್ಯಮಯ ನಾಟಕ ʼವೈರಲ್ ವೈಶಾಲಿʼ ಪ್ರದರ್ಶನಗೊಳ್ಳಲಿದೆ.

ಸಮಾಜ ಜಾಗೃತಿ
ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಸಂಘದ ಕಾರ್ಯಚಟುವಟಿಕೆಗಳ ಚಿತ್ರಣದೊಂದಿಗೆ, ಪರಿಸರ ಸಂರಕ್ಷಣೆ ಹಾಗೂ ಮಾದಕ ವ್ಯಸನ ನಿರ್ಮೂಲನೆಯ ಕುರಿತಾಗಿ ಜಾಗೃತಿ ಮೂಡಿಸಿರುವುದು ಗಮನಾರ್ಹವಾಗಿದೆ.
























































































