ಜನಾರ್ದನ ಪೂಜಾರಿ ಮನೆಗೆ ಭೇಟಿ ನೀಡಿದ ವೀರಪ್ಪ ಮೊಯ್ಲಿ

ಮಂಗಳೂರು : ಜನಾರ್ದನ ಪೂಜಾರಿ ಅವರ ಮನೆಗೆ ವೀರಪ್ಪ ಮೊಯ್ಲಿ ಅವರು ಭಾನುವಾರ ಭೇಟಿ ನೀಡಿದರು. ತನ್ಮೂಲಕ ರಾಷ್ಟ್ರ ರಾಜಕಾರಣದ ದಿಗ್ಗಜ ನಾಯಕರಿಬ್ಬರು ದೀರ್ಘ ಕಾಲದ ದ್ವೇಷ ಮರೆತು ಒಂದಾಗಿದ್ದಾರೆ.

ಫೆ.1ರಂದು ಕರಾವಳಿಗೆ ಆಗಮಿಸಿದ್ದ ವೀರಪ್ಪ ಮೊಯ್ಲಿ ಅವರು ಮಧ್ಯಾಹ್ನ ಬಂಟ್ವಾಳದಲ್ಲಿರುವ ಜನಾರ್ದನ ಪೂಜಾರಿ ನಿವಾಸಕ್ಕೆ ತೆರಳಿದರು. 4 ದಶಕಗಳಿಂದ ಅನಿವಾರ್ಯತೆಯನ್ನು ಹೊರತು ಪಡಿಸಿ ವೇದಿಕೆಯನ್ನೂ ಹಂಚಿಕೊಳ್ಳದ ಇಬ್ಬರ ಭೇಟಿ ಭಾವುಕವಾಗಿತ್ತು. ಪೂಜಾರಿ ಅವರನ್ನು ಭೇಟಿ ಮಾಡಲು ಬೆಂಗಳೂರಿನಿಂದ ಬರುತ್ತಿರುವುದಾಗಿ ವೀರಪ್ಪ ಮೊಯ್ಲಿ ಅವರು ಬೆಳಗ್ಗೆಯೇ ಕರೆ ಮಾಡಿ ಪೂಜಾರಿ ಮನೆಯವರಿಗೆ ತಿಳಿಸಿದ್ದರು. ಅದರಂತೆ ಬೆಳಗ್ಗೆ 10 ಗಂಟೆಯಿಂದಲೇ ಪೂಜಾರಿ ಮನೆಯವರು ಮೊಯ್ಲಿ ಬರುವಿಕೆಗಾಗಿ ಕಾಯುತ್ತಿದ್ದರು. ಆದರೆ ಮೊಯ್ಲಿ ಅವರಿಗೆ ಮಂಗಳೂರಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಆಹ್ವಾನ ಬಂದಿದ್ದರಿಂದ ಮಧ್ಯಾಹ್ನ ಈ ಭೇಟಿ ಸಾಕಾರವಾಯಿತು.

ಇಬ್ಬರು ನಾಯಕರು ಪರಸ್ಪರ ಆರೋಗ್ಯ ವಿಚಾರಿಸಿ, ವೈಯಕ್ತಿಕ ಮಾತುಕತೆ ನಡೆಸಿದರು. ಆರಂಭ ಕಾಲದಲ್ಲಿ ಅಣ್ಣ- ತಮ್ಮಂದಿರಂತೆ ಇದ್ದೆವು, ನಡುವೆ ಏನೋ ಕೆಟ್ಟ ಗಳಿಗೆ ಬಂದಿತ್ತು. ಇನ್ನು ಮುಂದೆ ಹೀಗೇ ಅಣ್ಣ- ತಮ್ಮಂದಿರಂತೆ ಇರೋಣ ಎಂದು ಹೇಳಿಕೊಂಡರು. ಹಿಂದೆ ಪೂಜಾರಿ ಕೇಂದ್ರ ಸಚಿವರಾಗಬೇಕೆಂದು ಮೊಯ್ಲಿ ಅವರ ಪತ್ನಿ ಹರಕೆ ಹೊತ್ತುಕೊಂಡದ್ದನ್ನು ಮೊಯ್ಲಿ ನೆನಪಿಸಿಕೊಂಡರು. ತಮ್ಮ ಬೆಂಗಳೂರಿನ ಮನೆಗೆ ಪೂಜಾರಿ ಅವರನ್ನು ಆಹ್ವಾನಿಸಿದರು. ಈ ಬಾಂಧವ್ಯ ಮುಂದುವರಿಸುವ ಆಶಯದೊಂದಿಗೆ ಉಭಯ ನಾಯಕರು ಸ್ನೇಹಪೂರ್ವಕವಾಗಿ ಬೀಳ್ಕೊಟ್ಟರು. ಯಾವುದೇ ರಾಜಕೀಯ ಮಾತುಕತೆ ನಡೆದಿಲ್ಲ ಎಂಬುದಾಗಿ ಸ್ಥಳದಲ್ಲಿದ್ದ ಕಾಂಗ್ರೆಸ್‌ ಮುಖಂಡರೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದರು.

ವೀರಪ್ಪ ಮೊಯ್ಲಿ ಅವರು 1972ರಲ್ಲಿ ಕಾರ್ಕಳ ಶಾಸಕರಾಗುವ ಮೂಲಕ ರಾಜಕೀಯ ಅಧಿಕಾರಕ್ಕೆ ಬಂದವರು. ಜನಾರ್ದನ ಪೂಜಾರಿ 1977ರಲ್ಲಿ ಮೊದಲ ಬಾರಿ ಸಂಸದರಾದವರು. ವೀರಪ್ಪ ಮೊಯ್ಲಿ 6 ಬಾರಿ ಶಾಸಕ, 2 ಬಾರಿ ಎಂಪಿ, ಮುಖ್ಯಮಂತ್ರಿಯಾಗಿ, ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಜನಾರ್ದನ ಪೂಜಾರಿ ಅವರು 4 ಬಾರಿ ಎಂಪಿ, 2 ಬಾರಿ ರಾಜ್ಯಸಭಾ ಸದಸ್ಯ, 2 ಬಾರಿ ಕೆಪಿಸಿಸಿ ಅಧ್ಯಕ್ಷರಾಗಿದ್ದವರು. ಅಧಿಕಾರಕ್ಕೆ ಬರುವ ಮೊದಲೇ ಇವರಿಬ್ಬರ ಸ್ನೇಹ ರಾಜಕೀಯದಲ್ಲಿ ಮನೆ ಮಾತಾಗಿತ್ತು. ಆದರೆ ಒಂದು ಹಂತದಲ್ಲಿ ದಿಢೀರನೆ ಇಬ್ಬರ ನಡುವೆ ಗಾಢ ವೈರತ್ವ ಬೆಳೆದಿತ್ತು. 1985ರಿಂದಲೂ ಈ ವೈರತ್ವ ಇತ್ತು, ಕಾಲಕ್ರಮೇಣ ಬದ್ಧ ವೈರಿಗಳಾಗಿ ಬದಲಾಗಿದ್ದರು ಎನ್ನುವ ಮಾತಿದೆ. ಆದರೆ ಇದೀಗ ಈ ಭೇಟಿಯ ಮೂಲಕ ಮನಸ್ತಾಪವೆಲ್ಲವೂ ಅಂತ್ಯ ಕಂಡು ರಾಜಕೀಯ ದ್ವೇಷ ಶಾಶ್ವತವಲ್ಲ ಎಂಬುದನ್ನು ಅವರು ಸಾಬೀತಪಡಿಸಿದರು.

ಈ ಸಂದರ್ಭ ಮಾಜಿ ಸಚಿವ ರಮಾನಾಥ ರೈ, ಕಾಂಗ್ರೆಸ್‌ ಮುಖಂಡರಾದ ಭಾಸ್ಕರ್‌ ಕೆ., ಡಿ.ಕೆ. ಅಶೋಕ್‌, ಬೇಬಿ ಕುಂದರ್‌, ಬಾಲಕೃಷ್ಣ ಅಂಚನ್‌, ನವೀನ್‌ ಭಂಡಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

















































































































































































error: Content is protected !!
Scroll to Top