ಎಳ್ಳು – ಎಳ್ಳೆಣ್ಣೆಯ ಉಪಯೋಗಗಳು

ಎಳ್ಳಿಗೆ ಸಂಸ್ಕೃತದಲ್ಲಿ ತಿಲ ಎಂದು ಹೆಸರು. ಚಳಿಗಾಲದಲ್ಲಿ ಎಳ್ಳನ್ನು ಉಪಯೋಗಿಸುವುದು ಲಾಭದಾಯಕ. ಆಯುರ್ವೇದದ ಪ್ರಕಾರ ತಿಲತೈಲ ಸರ್ವ ಶ್ರೇಷ್ಠ ಎಂದು ಹೇಳಲಾಗಿದೆ. ಯಾಕೆಂದರೆ ಸ್ಥೂಲಕಾಯದ ವ್ಯಕ್ತಿಯನ್ನು ತೆಳು ಕಾಯ ಮಾಡುವ ಹಾಗೂ ತೆಳುಕಾಯದ ವ್ಯಕ್ತಿಯನ್ನು ಸ್ಥೂಲ ಕಾಯ ಮಾಡುವ ಗುಣ ಈ ಎಳ್ಳಿನಲ್ಲಿದೆ. ಆಯುರ್ವೇದದಲ್ಲಿ ತೊಂಭತ್ತು ಪ್ರತಿಶತ ಔಷಧೀಯ ಎಣ್ಣೆಯ ತಯಾರಿಕೆಯಲ್ಲಿ ತಿಲ ತೈಲವನ್ನು ಮುಖ್ಯ ದ್ರವ್ಯವಾಗಿ ಬಳಸುತ್ತಾರೆ. ಉದಾಹರಣೆಗೆ ಕ್ಷೀರಬಲಾ ತೈಲ, ಧನ್ವಂತರಿ ತೈಲ, ಮಹಾ ಮಾಷತೈಲ, ಗಂಧ ತೈಲ. ಇದರಲ್ಲಿ ತಿಲ ತೈಲವನ್ನು ಮುಖ್ಯ ದ್ರವ್ಯವಾಗಿ ಬಳಸುತ್ತಾರೆ. ಇದು ನಮ್ಮ ದೇಹದ ಸಪ್ತ ಧಾತುಗಳಲ್ಲಿ ಕಾರ್ಯನಿರ್ವಹಿಸುತ್ತದೆ.

ಇದರಲ್ಲಿ ಎರಡು ವಿಧ ಬಿಳಿ ಎಳ್ಳು ಹಾಗೂ ಕರಿ ಎಳ್ಳು. ಎರಡೂ ಬಗೆಯ ಎಳ್ಳುಗಳ ಗುಣಗಳು ಸಮಾನವಾದರೂ ಕರಿ ಎಳ್ಳಿನಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚು.
ಎಳ್ಳಿನ ಪ್ರಯೋಗ ಬಾಹ್ಯವಾಗಿಯೂ ಆಂತರಿಕವಾಗಿಯೂ ಕೂಡ ಬಳಸಲಾಗುವುದು.

ಎಳ್ಳಿನ ಗುಣಗಳು
ಮಧುರ, ಕಹಿ ಹಾಗು ಕಷಾಯ ರಸದಿಂದ ಕೂಡಿದೆ. ಉಷ್ಣ ವೀರ್ಯ ಕಟು ವಿಪಾಕದಿಂದ ಕೂಡಿದ್ದು ವಾತ ಹಾಗೂ ಕಫವನ್ನು ಸಮತೋಲನಗೊಳಿಸಿ ಪಿತ್ತವನ್ನು ಅಲ್ಪಪ್ರಮಾಣದಲ್ಲಿ ಕುಪಿತಗೊಳಿಸುತ್ತದೆ .

ಎಳ್ಳಿನ ಲಾಭಗಳು
ಎಳ್ಳನ್ನು ಸರಿಯಾಗಿ ಜಗಿಯುವುದರಿಂದ ನಮ್ಮ ಹಲ್ಲುಗಳು ಸದೃಢಗೊಳ್ಳುತ್ತದೆ. ಎಳ್ಳಿನ ಕಣಕವನ್ನು ಹಲ್ಲು ನೋವಿನ ಜಾಗದಲ್ಲಿ ಹಚ್ಚುವುದರಿಂದ ಹಲ್ಲಿನ ನೋವು ತಾತ್ಕಾಲಿಕವಾಗಿ ಕಡಿಮೆಗೊಳ್ಳುತ್ತದೆ.

ದಂತಗಳನ್ನು ಸದೃಢ ಗೊಳಿಸಲು ಹೀಗೆ ಮಾಡಿ.
ಅರ್ಧ ಲೋಟ ನೀರಿನಲ್ಲಿ ಸ್ವಲ್ಪ ಎಳ್ಳಿನ ಕಣಕವನ್ನು ಬೆರೆಸಿ ಈ ನೀರನ್ನು ಮೂರು ನಿಮಿಷ ಬಾಯಲ್ಲಿ ಇಟ್ಟು ಮುಕ್ಕಳಿಸಿ. ಎಳ್ಳಿನ ಕಣಕದ ಬದಲು ಮೂರು ಅಥವಾ ನಾಲ್ಕು ಹನಿ ಎಳ್ಳೆಣ್ಣೆ ಬಳಸಬಹುದು. ಬಾಯಿ ಹುಣ್ಣು ಇರುವವರು ಕೂಡ ಇದರಿಂದ ಲಾಭ ಪಡೆಯಬಹುದು .

ಎಳ್ಳನ್ನು ಅಡುಗೆಯಲ್ಲಿ ಬಳಸುವುದರಿಂದ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಬುದ್ಧಿವಂತಿಕೆಯನ್ನು ಇಮ್ಮಡಿಗೊಳಿಸುತ್ತದೆ.
ಎಳ್ಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದು ಹಿತಕರವಲ್ಲ.

ಮುಟ್ಟಿನ ಸಮಸ್ಯೆ ಇರುವವರು ಒಂದು ದೊಡ್ಡ ಚಮಚ ಕರಿ ಎಳ್ಳನ್ನು ನೀರಿನಲ್ಲಿ ರಾತ್ರಿಯಲ್ಲಿ ನೆನೆಸಿಟ್ಟು ಮರುದಿನ ನೀರನ್ನು ಬಸಿದು, ಅರ್ಧ ದೊಡ್ಡ ಚಮಚ ಬೆಲ್ಲವನ್ನು ಮಿಶ್ರಣ ಮಾಡಿ ಸರಿಯಾಗಿ ಜಗಿದು ತಿನ್ನುವುದರಿಂದ ಮುಟ್ಟಿನಲ್ಲಿ ಬರುವಂತಹ ನೋವು ಹಾಗೆಯೇ ವಿಳಂಬಿತ ಮುಟ್ಟು ಆಗುವವರಿಗೆ ಇದು ಲಾಭದಾಯಕ. ಮುಟ್ಟಾಗುವ ಐದು ದಿನಗಳ ಮುಂಚೆ ಸೇವಿಸಲು ಆರಂಭಿಸಿ ಮುಟ್ಟು ಆರಂಭವಾಗುವವರೆಗೂ ಸೇವಿಸಬೇಕು. ಎಳ್ಳಿನ ಚಿಕ್ಕಿ ಅಥವಾ ಬೆಲ್ಲದಿಂದ ತಯಾರಿಸಿದ ಎಳ್ಳುಂಡೆ ಕೂಡ ಸೇವಿಸಬಹುದು. ನಾಭಿಪ್ರದೇಶದಲ್ಲಿ ದಿನಾಲು ಎಳ್ಳೆಣ್ಣೆ ಸವರುವುದರಿಂದ ಮುಟ್ಟಿನಲ್ಲಿ ಆಗುವಂತಹ ನೋವನ್ನು ಕಡಿಮೆಗೊಳಿಸಬಹುದು.

ಎಳ್ಳೆಣ್ಣೆ ಅಭ್ಯಂಗದ ಲಾಭಗಳು
ಚಳಿಗಾಲದಲ್ಲಿ ತೈಲಾಭ್ಯಂಗ ಮಾಡುವುದು ಹಿತಕರ. ಇದು ಮಾಂಸವನ್ನು ಬಲಗೊಳಿಸುತ್ತದೆ. ಬೊಜ್ಜನ್ನು ಕಡಿಮೆಗೊಳಿಸುತ್ತದೆ. ತ್ವಚೆಯ ಶುಷ್ಕತೆ ಹಾಗೂ ರೂಕ್ಷತೆಯನ್ನು ಕಡಿಮೆಗೊಳಿಸುತ್ತದೆ. ಮೂಳೆಗಳನ್ನು ಸದೃಢಗೊಳಿಸುತ್ತದೆ. ಸಂದು ನೋವು ಇರುವವರು ಎಳ್ಳೆಣ್ಣೆ ಅಭ್ಯಂಗ ಮಾಡುವುದರಿಂದ ನೋವು ನಿವಾರಣೆಯಾಗುತ್ತದೆ. ಅಭ್ಯಂಗ ಮಾಡಿ ಮುಂಜಾನೆಯ ಸೂರ್ಯ ಕಿರಣಗಳಿಗೆ ಮೈ ಒಡ್ಡಿದರೆ ನಮ್ಮ ದೇಹಕ್ಕೆ ಅಗತ್ಯವಾದ ವಿಟಮಿನ್ ಡಿ ದೊರೆಯುತ್ತದೆ ಹಾಗೂ ಕ್ಯಾಲ್ಸಿಯಂ ಮೂಳೆಗಳಲ್ಲಿ ಹೀರಲ್ಪಡುತ್ತದೆ.

ಮುಂಜಾನೆ ಎದ್ದ ತಕ್ಷಣ 2 ಹನಿ ಎಳ್ಳೆಣ್ಣೆಯನ್ನು ಮೂಗಿನ ಹೊಳ್ಳೆಗೆ ಹಾಕುವುದರಿಂದ ನಮ್ಮ ಬುದ್ಧಿಶಕ್ತಿ ಹೆಚ್ಚುತ್ತದೆ. ಶಿರೋಅಭ್ಯಂಗ ಮಾಡುವುದರಿಂದ ತಲೆನೋವು, ಕೂದಲು ಉದುರುವ ಸಮಸ್ಯೆ, ಎಳೆವಯಸ್ಸಿನಲ್ಲಿ ಬೂದ ಕೂದಲಿನ ಸಮಸ್ಯೆ ಕಡಿಮೆಗೊಳ್ಳುವುದು. ಜ್ಞಾನೇಂದ್ರಿಯಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಒಳ್ಳೆಯ ನಿದ್ದೆಗೆ ಸಹಾಯವಾಗುತ್ತದೆ.



































































































error: Content is protected !!
Scroll to Top