ಬೈಲೂರು – ಕಣಜಾರು-ಪಳ್ಳಿ ಮಾರ್ಗದಲ್ಲಿ ಸ್ಥಗಿತಗೊಂಡ ಸರಕಾರಿ ಬಸ್

ಕಾರ್ಕಳ : ಕಾರ್ಕಳ – ಬೈಲೂರು – ಕಣಜಾರು-ಪಳ್ಳಿ ಮಾರ್ಗವಾಗಿ ಸಂಚರಿಸುವ ಸರಕಾರಿ ಬಸ್ ಸಂಚಾರ ಸ್ಥಗಿತಗೊಂಡಿದ್ದು ಪುನರಾರಂಭ ಮಾಡುವಂತೆ ಆಗ್ರಹಿಸಿ ಪಳ್ಳಿ – ನಿಂಜೂರು ಗ್ರಾಮಸ್ಥರು ಜ. 8ರಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಮಾರ್ಗದಲ್ಲಿ ಬಸ್‌ ಸ್ಥಗಿತಗೊಂಡ ಕಾರಣವಾಗಿ ವಿದ್ಯಾರ್ಥಿಗಳು, ದಿನನಿತ್ಯ ಉದ್ಯೋಗಕ್ಕೆ ಹೋಗುವವರಿಗೆ ಮತ್ತು ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗಿದೆ. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಖಾಸಗಿ ಬಸ್‌ನಲ್ಲಿ ಕುಳಿತುಕೊಳ್ಳಲು ಸ್ಥಳಾವಕಾಶವಿಲ್ಲದೆ ಫುಟ್ ಬೋರ್ಡುಗಳಲ್ಲಿ ನೇತಾಡಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿರುವ ಗ್ರಾಮಸ್ಥರು ಶೀಘ್ರವೇ ಈ ಮಾರ್ಗದಲ್ಲಿ ಸರಕಾರಿ ಬಸ್‌ ಸಂಚಾರವನ್ನು ಪುನಾರಾರಂಭಿಸುವಂತೆ ವಿನಂತಿಸಿದ್ದಾರೆ.

ತಾತ್ಕಾಲಿಕ ಪರವಾನಿಗೆಗೆ ತಡೆ
2024ರ ಡಿಸೆಂಬರ್‌ನಲ್ಲಿ ಈ ಭಾಗದಲ್ಲಿ ಸರಕಾರಿ ಬಸ್‌ ಓಡಾಟ ಪ್ರಾರಂಭವಾಗಿದ್ದು, ಕೇವಲ ಆರೇ ತಿಂಗಳಲ್ಲಿ ನಿಂತು ಹೋಗಿತ್ತು. ನಂತರ ಸಾರ್ವಜನಿಕರ ಹೋರಾಟದ ಪ್ರತಿಫಲವಾಗಿ ಮತ್ತೆ 2025ರ ಡಿಸೆಂಬ‌ರ್‌ನಲ್ಲಿ ಮರುಸಂಚಾರ ಆರಂಭಗೊಂಡಿತು. ಆದರೆ ಕೇವಲ 29 ದಿನದಲ್ಲೇ ಇದರ ಸಂಚಾರ ಸ್ಥಗಿತಗೊಂಡಿತು. ಈ ಬಸ್‌ ಅನ್ನು ಮರು ಆರಂಭಮಾಡಿದಾಗ ತಾತ್ಕಾಲಿಕ ಪರವಾನಿಗೆ ನೀಡಲಾಗಿತ್ತು. ಆದ್ದರಿಂದ ಖಾಸಗಿ ಬಸ್ ಮಾಲಕರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಸರಕಾರಿ ಬಸ್‌ನ ತಾತ್ಕಾಲಿಕ ಪರವಾನಿಗೆಯನ್ನು ತಡೆಹಿಡಿಯುವಂತೆ ದಾವೆ ಹೂಡಿದ ಪರಿಣಾಮವಾಗಿ ಹೈಕೋರ್ಟ್ ತಡೆನೀಡಿದೆ. ಹೀಗಾಗಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಇದೀಗ ಸ್ಥಗಿತಗೊಂಡ ಬಸ್‌ ಪುನರಾರಂಭಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್ ಅವರಿಗೆ ಗ್ರಾಮಸ್ಥರಿಂದ ಮನವಿ ಸಲ್ಲಿಕೆ








error: Content is protected !!
Scroll to Top