ಶೂಲ ರೋಗ

ಯಾವುದೇ ತರಹದ ನೋವನ್ನು ಶೂಲ ಎಂದು ಕರೆಯುತ್ತಾರೆ. ಅದು ತಲೆನೋವು ಇರಬಹುದು, ಕಿವಿ ನೋವು, ಕಣ್ಣಿನ ನೋವು, ಹಲ್ಲು ನೋವು ಹೃದಯದಲ್ಲಿ ಆಗಿರುವ ಬೇನೆ, ಕುತ್ತಿಗೆ ನೋವು, ಕೈ ಕಾಲು ನೋವು, ಉದರ ನೋವು ಯಾವುದೇ ತರಹದ ನೋವಿದ್ದಲ್ಲಿ ಅದನ್ನು ಶೂಲ ರೋಗ ಎಂದು ಆಯುರ್ವೇದ ಪರಿಗಣಿಸುತ್ತದೆ.
ನೋವು ಬೇರೆ ರೋಗಗಳ ಲಕ್ಷಣವಾಗಿ ಕಂಡು ಬರಬಹುದು ಅಥವಾ ಯಾವುದೆ ಕಾರಣವಿಲ್ಲದ ನೋವಿರಬಹುದು. ಶೂಲ ರೋಗಕ್ಕೆ ಅನೇಕ ಕಾರಣಗಳು ಇವೆ. ಕಾರಣವನ್ನು ತಿಳಿದು ಅದರ ಚಿಕಿತ್ಸೆ ಮಾಡುವುದು ಸೂಕ್ತ. ಶೂಲ ರೋಗದಲ್ಲಿ ವಾತಜಾ, ಪಿತಜಾ, ಕಫಜ, ವಾತ ಪಿತ್ತಜ, ವಾತ ಕಫಜ, ಪಿತ್ತ ಕಫಜ, ಸನ್ನಿಪಾತಲಜ, ಅಮಜ ಎಂಬ ಅನೇಕ ಪ್ರಕಾರಗಳಿವೆ.

ರೋಗದ ಕಾರಣಗಳು
ಮಲಮೂತ್ರವನ್ನು ತಡೆಯುವುದು, ಅಧಿಕ ಭೋಜನ ಮಾಡುವುದು, ಅಜೀರ್ಣ, ತಿಂದ ಆಹಾರ ಜೀರ್ಣವಾಗದೆ ಪುನಃ ಭೋಜನ ಮಾಡುವುದು, ವಿರುದ್ಧ ಆಹಾರ ಸೇವನೆ, ಹಸಿವಾದಾಗ ತಿಂಡಿ ತಿನ್ನದೇ ಇರುವುದು, ಮೊಳಕೆ ಬರಿಸಿದ ಕಾಳುಗಳನ್ನು ಅಧಿಕ ಸೇವನೆ, ಉದ್ದಿನಬೇಳೆ ಅಧಿಕ ಸೇವನೆ, ಬೇಳೆಕಾಳಿನ ಹಿಟ್ಟಿನ ಅಧಿಕ ಸೇವನೆ, ಅಧಿಕ ವ್ಯಾಯಾಮ ಮಾಡುವುದು, ರಾತ್ರಿ ಜಾಗರಣೆ, ಫ್ರಿಜ್ಜಿನಲ್ಲಿಟ್ಟ ನೀರು ಸೇವಿಸುವುದು, ಶುಷ್ಕ ಪದಾರ್ಥಗಳ ಸೇವನೆ, ಅಧಿಕ ಉಪವಾಸ ಮಾಡುವುದು.

ರೋಗದ ಲಕ್ಷಣಗಳು
ವಾತ ದೋಷದಿಂದ ನೋವು ಕಡಿಮೆ ಅಥವಾ ಜಾಸ್ತಿಯಾಗುವುದು. ಪಿತ್ತ ದೋಷದಿಂದ ನೋವಿನ ಜೊತೆಗೆ ದಾಹ, ಬಾಯಾರಿಕೆ, ಬೆವರುವುದು, ತಲೆ ತಿರುಗುವುದು, ಮೂರ್ಛೆ ಹೋಗುವುದು. ಕಫಜ ದೋಷದಿಂದ ನೋವಿನ ಜೊತೆಗೆ ಕೆಮ್ಮು, ಅರುಚಿ, ಶರೀರದಲ್ಲಿ ಜಡತ್ವ, ಆಯಾಸ, ಊಟ ಮಾಡಿದ ತಕ್ಷಣ ಆಯಸ ಕಂಡು ಬರುವುದು.

ಏನು ಮಾಡಬೇಕು
ಮೊದಲು ಕಾರಣವನ್ನು ಹುಡುಕಿ ಅದರ ಕಾರಣವನ್ನು ದೂರ ಮಾಡುವುದು. ನೋವಿರುವ ಜಾಗದಲ್ಲಿ ಅಭ್ಯಂಗ ಹಾಗೂ ಸ್ವೇದನ ಚಿಕಿತ್ಸೆಯ ಜೊತೆಗೆ ಮದ್ದನ್ನು ಸೇವಿಸುವುದು.

ಬಿಸಿ ನೀರಿನ ಸೇವನೆ. ಜೀರ್ಣಕಾರಕ ಪದಾರ್ಥಗಳ ಸೇವನೆ. ಆಹಾರದಲ್ಲಿ ಹಿಂಗು, ಶುಂಠಿಯ, ಕಾಳು ಮೆಣಸು ಪ್ರಯೋಗ, ಬಿಸಿ ಆಹಾರ ಸೇವಿಸುವುದು, ಹಳೆ ಅಕ್ಕಿ, ಕಾಳು, ಹಾಲು ,ತುಪ್ಪ, ನೆಲ್ಲಿಕಾಯಿ, ಎಳನೀರು ಸೇವನೆ. ನಮ್ಮ ದೇಹ ಪ್ರಕೃತಿಯ ಪ್ರಕಾರ ಆಹಾರ ಸೇವನೆ ಮಾಡುವುದು.

ಏನು ಮಾಡಬಾರದು
ರಾತ್ರಿ ಜಾಗರಣೆ, ಶುಷ್ಕ ಆಹಾರ ಸೇವನೆ, ಅಧಿಕ ವ್ಯಾಯಾಮ, ಮಧ್ಯಾನ ನಿದ್ದೆ ಮಾಡುವುದು, ವಿರುದ್ಧ ಆಹಾರ ಸೇವನೆ, ಐಸ್ ಕ್ರೀಮ್, ಕೋಲ್ಡ್ ಡ್ರಿಂಕ್ಸ್ ಸೇವನೆ, ಹಳಸಿದ ಆಹಾರ ಸೇವನೆ ಮಾಡಬಾರದರು.







error: Content is protected !!
Scroll to Top