ಅಕ್ಷತಾ ಪೂಜಾರಿ ಮೇಲೆ ಪೊಲೀಸರಿಂದ ಹಲ್ಲೆ ಆರೋಪ – ತನಿಖೆಯನ್ನು ಬ್ರಹ್ಮಾವರ ಪೊಲೀಸ್‌ ಠಾಣೆಯಿಂದ ವರ್ಗಾವಣೆಗೆ ನಿರ್ಧಾರ

ಉಡುಪಿ : ಅಕ್ಷತಾ ಪೂಜಾರಿ ಮೇಲೆ ಪೊಲೀಸರಿಂದ ಹಲ್ಲೆ ಆರೋಪದ ಕುರಿತಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಟಣೆ ಹೊರಡಿಸಿದ್ದು, ಒಂದು ವೇಳೆ ಪೊಲೀಸರಿಂದ ಲೋಪ ಸಾಬೀತಾದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದು ತನಿಖೆಯನ್ನು ಬ್ರಹ್ಮಾವರ ಪೊಲೀಸ್‌ ಠಾಣೆಯಿಂದ ವರ್ಗಾಯಿಸುವುದಾಗಿಯೂ ಸ್ಪಷ್ಟಪಡಿಸಿದ್ದಾರೆ. ಸಂತ್ರಸ್ತ ಮಹಿಳೆಯರು ಇಲಾಖಾ ಸಿಬ್ಬಂದಿ ಮೇಲೆ ಮಾಡಿರುವಂತಹ ಆರೋಪಗಳನ್ನು ಇಲಾಖೆಯ ಹಿರಿಯ ಅಧಿಕಾರಿಗಳಿಂದ ವಿಚಾರಣೆಗೊಳಪಡಿಸಿ, ಲೋಪಗಳು ಕಂಡುಬಂದಲ್ಲಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಪ್ರಕರಣ
2014ರಲ್ಲಿ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ 2025ರ ಡಿ. 9ರಂದು ಆರೋಪಿ ಆಶಿಕ್‌ ವಿರುದ್ಧ ಕೋರ್ಟ್‌ನಿಂದ ಸಜೆ ಆಗಿರುತ್ತದೆ. 20 ಲಕ್ಷ ರೂ. ಹಾಗೂ ಅದರ ಬಡ್ಡಿಯನ್ನು ನ್ಯಾಯಾಲಯಕ್ಕೆ ಜಮಾ ಮಾಡುವಂತೆ ನ್ಯಾಯಾಲಯ ತೀರ್ಪು ನೀಡಿರುತ್ತದೆ. ಆರೋಪಿ ಆಶಿಕ್‌ ನ್ಯಾಯಾಲಯಕ್ಕೆ ಹಾಜರಾಗದೇ, ಹಣವನ್ನು ಕಟ್ಟದೇ ಇರುವುದರಿಂದ ನ್ಯಾಯಾಲಯವು ಆರೋಪಿಯನ್ನು ಡಿ. 17ರೊಳಗೆ ಹಾಜರುಪಡಿಸುವಂತೆ ಮಲ್ಪೆ ಪೊಲೀಸ್‌ ಠಾಣೆಗೆ ಆದೇಶ ಮಾಡಿರುತ್ತದೆ. ನ್ಯಾಯಾಲಯದ ಸೂಚನಾ ಪತ್ರದಂತೆ ವಾರಂಟ್‌ ಜಾರಿ ಮಾಡುವ ಕುರಿತು ಮಲ್ಪೆ ಪೊಲೀಸ್‌ ಠಾಣಾ ಸಿಬ್ಬಂದಿ ಬ್ರಹ್ಮಾವರದಲ್ಲಿರುವ ಆಶಿಕ್‌ನ ಚಿಕ್ಕಮನ ಮನೆಗೆ ತೆರಳಿರುತ್ತಾರೆ. ಈ ಸಂದರ್ಭದಲ್ಲಿ ಆ ಮನೆಯಲ್ಲಿ ಇಬ್ಬರು ಮಹಿಳೆಯರಿದ್ದು ಅದರಲ್ಲಿ ಅಕ್ಷತಾ ಪೂಜಾರಿ ಅವರ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೇ ಮಹಿಳೆಯರಿರುವ ಮನೆಗೆ ಮಹಿಳಾ ಸಿಬ್ಬಂದಿಯನ್ನು ಕರೆ ತರದೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ. ಈ ಬಗ್ಗೆ ಪೊಲೀಸ್‌ ಠಾಣೆಗೆ ದೂರು ನೀಡಲು ಹೋದಾಗ ಕೇಸ್‌ ದಾಖಲಿಸಿಕೊಳ್ಳಲಿಲ್ಲ ಎಂದು ಅಕ್ಷತಾ ಪೂಜಾರಿ ಆರೋಪಿಸಿದ್ದಾರೆ. ಇನ್ನು ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಕುರಿತಂತೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಅಕ್ಷತಾ ಪೂಜಾರಿ ಮತ್ತು ಅವರ ತಾಯಿಯ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

ತನಿಖೆಯನ್ನು ಬೇರೆಡೆ ವರ್ಗಾವಣೆಗೆ ನಿರ್ಧಾರ
ಘಟನೆಗೆ ಸಂಬಂಧಿಸಿದಂತೆ ಕಳೆದ ಎರಡು ದಿನಗಳಿಂದ ಬಿಲ್ಲವ ಸಮಾಜದ ಸಂಘಟನೆಗಳು, ಚುನಾಯಿತ ಪ್ರತಿನಿಧಿಗಳು, ಮಹಿಳಾ ಸಂಘಟನೆಗಳ ಮುಖಂಡರು ಹಾಗೂ ರಾಜಕೀಯ ಪಕ್ಷದ ಮುಖಂಡರು ಬೇರೆ ಬೇರೆ ರೀತಿಯಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ. ಆದುದರಿಂದ ಸದ್ಯಕ್ಕೆ ಈ ಪ್ರಕರಣದ ತನಿಖೆಯನ್ನು ಸ್ಥಗಿತಗೊಳಿಸಿ, ತನಿಖೆಯನ್ನು ಬ್ರಹ್ಮಾವರ ಪೊಲೀಸ್‌ ಠಾಣೆಯಿಂದ ಸೂಕ್ತವಾದ ತನಿಖಾಧಿಕಾರಿಗೆ ವರ್ಗಾಯಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಲ್ಲದೆ ಸಂತ್ರಸ್ತ ಮಹಿಳೆಯರು ಇಲಾಖಾ ಸಿಬ್ಬಂದಿ ಮೇಲೆ ಮಾಡಿರುವಂತಹ ಆರೋಪಗಳನ್ನು ಇಲಾಖೆಯ ಹಿರಿಯ ಅಧಿಕಾರಿಗಳಿಂದ ವಿಚಾರಣೆ ಪಡಿಸಿ, ಲೋಪ ಕಂಡುಬಂದಲ್ಲಿ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ನಿರ್ದರಿಸಿದ್ದೇನೆ. ಈ ಘಟನೆ ಸಂಬಂಧಪಟ್ಟಂತೆ ನ್ಯಾಯ ಒದಗಿಸಬೇಕಾದ ಹಿತದೃಷ್ಠಿಯಿಂದ ಈ ನಿರ್ಧಾರವನ್ನು ಕೈಗೊಂಡಿರುತ್ತೇನೆ. ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಯಾವುದೇ ರೀತಿಯಲ್ಲಿ ಗೊಂದಲ ಹಾಗೂ ಅನುಮಾನ ಪಡುವ ಅವಶ್ಯಕತೆ ಇಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ಕಚೇರಿ ಪ್ರಕಟಣೆ ಮೂಲಕ ತಿಳಿಸಿದೆ.

































































































error: Content is protected !!
Scroll to Top