ಬೇಡಿಕೆ ಈಡೇರಿಸದಿದ್ದಲ್ಲಿ ಉಪವಾಸ ಸತ್ಯಾಗ್ರಹದ ಎಚ್ಚರಿಕೆ ನೀಡಿದ್ದ ಸಂಘಟನೆಗಳು – ಸಂಧಾನ ಯಶಸ್ವಿ
ಕಾರ್ಕಳ : ರಾಜ್ಯ ಹಿಂದುಳಿದ ವರ್ಗಗಳ ಅಯೋಗದಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿಯಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಸರಕಾರಿ ನೌಕರರ ಸಂಘ, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಸಂಘದ ವತಿಯಿಂದ ತಹಶೀಲ್ದಾರ್ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಸೆ. 24ರಂದು ಕಾರ್ಕಳ ತಹಶೀಲ್ದಾರ್ ಪ್ರದೀಪ್ ಹಾಗೂ ಗಣತಿ ತಾಲೂಕು ನೋಡಲ್ ಅಧಿಕಾರಿ ಚಂದ್ರಶೇಖರ್ ನಾಯಕ್ ಅವರೊಂದಿಗೆ ನೌಕರರ ಹಾಗೂ ಶಿಕ್ಷಕರ ಸಂಘಟನೆಗಳು ಗಣತಿ ಕಾರ್ಯದಲ್ಲಿ ಗಣತಿದಾರರಿಗೆ ಆಗುತ್ತಿರುವ ಸಮಸ್ಯೆ ಕುರಿತು ಚರ್ಚೆ ನಡೆಯಿತು.

ಸೆ. 22ರಿಂದ ಅ. 7ರವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕಾರ್ಯ ನಡೆಯುತ್ತಿದೆ. ಗಣತಿಗೆ ನಿಯೋಜನೆಗೊಂಡಿರುವ ಶಿಕ್ಷಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಒಂದು ವೇಳೆ ನಮ್ಮ ಬೇಡಿಕೆ ಈಡೇರದಿದ್ದಲ್ಲಿ ಸೆ. 24ರ ಸಂಜೆ 4.30 ಕ್ಕೆ ತಾಲೂಕು ಆಡಳಿತ ಕಚೇರಿಯ ಎದುರು ಸರಕಾರಿ ನೌಕರರ ಸಂಘದ ನೇತೃತ್ವದಲ್ಲಿ ಸಾಂಕೇತಿಕವಾದ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಈ ಹಿಂದೆ ನೌಕರರ ಹಾಗೂ ಶಿಕ್ಷಕರ ಸಂಘ ಎಚ್ಚರಿಕೆ ನೀಡಿತ್ತು.
ಬೇಡಿಕೆ ಏನು ?
ಗಣತಿ ಕಾರ್ಯದಲ್ಲಿ ನಿವೃತ್ತಿಗೆ ಒಂದು ವರ್ಷವಿರುವವರನ್ನು, ತೀವ್ರತರದ ವಿಕಲಚೇತನರನ್ನು, ಗರ್ಭಿಣಿಯರನ್ನು ಹಾಗೂ ಆರೋಗ್ಯ ಸಮಸ್ಯೆಯಿರುವ ಗಣತಿದಾರರನ್ನು ತಕ್ಷಣದಿಂದ ಕೈ ಬಿಡಬೇಕು. ಎಪ್ರಿಲ್‌ನಲ್ಲಿ ಮಾಡಿದ ಪರಿಶಿಷ್ಠ ಜಾತಿ ಒಳ ಮೀಸಲಾತಿ ಗಣತಿಯ ಗಣತಿದಾರರಿಗೆ ಇದುವರೆಗೆ ದೊರೆಯದ ಗೌರವಧನ ಹಾಗೂ ನ್ಯಾಯಬದ್ಧವಾಗಿ ಸಿಗಬೇಕಾದ ಗಳಿಕೆ ರಜೆಗೆ ಹಾಜರಾತಿ ಪ್ರಮಾಣಪತ್ರವನ್ನು ನೀಡಬೇಕು. ಈ ಗಣತಿ ಕಾರ್ಯದಲ್ಲಿ ಶಿಕ್ಷಕರಿಗೆ ಅನುಕೂಲವಾಗುವ ಅವರ ಶಾಲಾ ಸ್ಥಳ ಅಥವಾ ಅಲ್ಲೇ ಪಕ್ಕದ ಏರಿಯಾದಲ್ಲಿ ಗಣತಿಗೆ ನಿಯೋಜಿಸಬೇಕು. ಇಲಾಖೆಯ ನೌಕರರನ್ನು ಸರಕಾರದ ಆದೇಶ ಮತ್ತು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಗಣತಿಗೆ ಬಳಸಿಕೊಳ್ಳುವುದು, ಪ್ರೌಢಶಾಲಾ ಶಿಕ್ಷಕರನ್ನು ಕೊನೆಯ ಆದ್ಯತೆಯಲ್ಲಿ ಪರಿಗಣಿಸುವುದು, ಬಿ.ಎಲ್.ಒ. ಗಣತಿದಾರರನ್ನು ಈ ಕಾರ್ಯದಿಂದ ಕೈಬಿಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಗಣತಿಯ ಆ್ಯಪ್‌ನಲ್ಲಿರುವ ತಾಂತ್ರಿಕ ತೊಂದರೆಯನ್ನು ಸರಿಪಡಿಸಬೇಕು, ಗಣತಿದಾರರಿಗೆ ಗಣತಿ ಪ್ರದೇಶದ ಮನೆ ಪಟ್ಟಿಯ ಹಾರ್ಡ್ ಪ್ರತಿಯನ್ನು ಒದಗಿಸಬೇಕು, ತಮ್ಮ ಶಾಲೆ ಅಥವಾ ಅನುಕೂಲವಾಗುವ ಪ್ರದೇಶದಲ್ಲಿ ಗಣತಿಗೆ ನಿಯೋಜಿಸುವುದು. ಮಹಿಳಾ ಗಣತಿದಾರರಿಗೆ ದೂರದ ದುರ್ಗಮ ಪ್ರದೇಶಕ್ಕೆ ನಿಯೋಜಿಸದೇ ಅವರಿಗೆ ಅನುಕೂಲವಾಗುವ ಸ್ಥಳದಲ್ಲಿ ಗಣತಿಗೆ ಅವಕಾಶ ಮಾಡಿಕೊಡಬೇಕು, ಗಣತಿ ಮನೆಗಳ ಸಂಖ್ಯೆಯನ್ನು ಕಡಿಮೆ ಮಾಡವಂತೆ, ಗಣತಿ ಬಗ್ಗೆ ಗ್ರಾಮ ಪಂಚಾಯತ್ ಮೂಲಕ ಪ್ರತಿ ಮನೆಯವರಿಗೆ ಮನವರಿಕೆ ಮಾಡುವಂತೆ ಮನವಿಯಲ್ಲಿ ತಿಳಿಸಲಾಗಿತ್ತು.
ಅ. 7ರ ಮುನ್ನ ಓರ್ವ ಗಣತಿದಾರ 80ರಿಂದ 150 ಮನೆಗಳನ್ನು ಸಮೀಕ್ಷೆ ಮಾಡುವಂತೆ ಸೂಚಿಸಲಾಗಿತ್ತು. ಇಂಟರ್‌ನೆಟ್ ಸಮರ್ಪಕವಾಗಿದ್ದು, ಆಪ್ ಸರಿಯಾಗಿ ಕಾರ್ಯನಿರ್ವಹಿಸಿದಲ್ಲಿ ಒಂದು ಮನೆಯ ಸಮೀಕ್ಷಾ ಕಾರ್ಯ 1 ಗಂಟೆಯಲ್ಲಿ ಮುಗಿಯಲಿದೆ. ಹೀಗಾಗಿ ದಿನದಲ್ಲಿ ಗರಿಷ್ಠ 8 ಮನೆಗಳ ಸಮೀಕ್ಷೆ ನಡೆಸಬಹುದಾಗಿದೆ. ಮನೆ ಸಂಖ್ಯೆಯನ್ನು ಕಡಿಮೆಗೊಳಿಸುವಂತೆಯೂ ಮನವಿ ಮಾಡಿಕೊಳ್ಳಲಾಗಿದೆ.
ಸಂಧಾನ ಯಶಸ್ವಿ
ಶಿಕ್ಷಕರ ಸಮಸ್ಯೆ ಆಲಿಸಿದ ತಹಶೀಲ್ದಾರ್ ಹಾಗೂ ನೋಡಲ್ ಅಧಿಕಾರಿಯವರು ಶಿಕ್ಷಕರ ಎಲ್ಲ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಲಾಗುವುದು. 59ರ ವಯೋಮಾನದ ಶಿಕ್ಷಕರು, ವಿಕಲಚೇತನರು, ಆರೋಗ್ಯ ಸಮಸ್ಯೆ ಇರುವ ಶಿಕ್ಷಕರನ್ನು ಗಣತಿ ಕಾರ್ಯದಿಂದ ಕೈಬಿಡುವುದಾಗಿ, ಗಣತಿದಾರರನ್ನು ಕರ್ತವ್ಯ ನಿರ್ವಹಿಸುವ ಶಾಲೆಯ ಸಮೀಪ ಅಥವಾ ಸಮೀಪದ ಗ್ರಾಮಕ್ಕೆ ನಿಯೋಜಿಸುವುದಾಗಿ, ಬಿಎಲ್ಒ ಶಿಕ್ಷಕರಿಗೆ ಚುನಾವಣೆಯ ಕೆಲಸವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು. ಸೆ. 25ರಂದು ನಡೆಯುವ ಬಿಎಲ್ಒ ಶಿಕ್ಷಕರ ಸಭೆಯನ್ನು ರದ್ದುಪಡಿಸಲಾಗುವುದು ಎಂದು ತಿಳಿಸಿದರು.
ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 312 ಸರಕಾರಿ ಶಿಕ್ಷಕರಿದ್ದು ಅವರಲ್ಲಿ 49 ಮಂದಿ, ಅನುದಾನಿತ ಶಾಲೆಗಳಲ್ಲಿ 26 ಶಿಕ್ಷಕರಿದ್ದು ಅವರಲ್ಲಿ 7 ಮಂದಿ ಶಿಕ್ಷಕರು ಮತ್ತು ಪ್ರೌಢಶಾಲೆಯ 191 ಶಿಕ್ಷಕರಲ್ಲಿ 31 ಮಂದಿ ಶಿಕ್ಷಕರು ಗಣತಿ ಕಾರ್ಯದಲ್ಲಿ ಪಾಲ್ಗೊಳ್ಳದಂತಹ ಸ್ಥಿತಿಯಲ್ಲಿದ್ದಾರೆ.
ರಮಾನಂದ ಶೆಟ್ಟಿ
ಅಧ್ಯಕ್ಷರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ
ಉಡುಪಿ ಜಿಲ್ಲಾ ನೌಕಕರ ಸಂಘ ಹಾಗೂ ಶಿಕ್ಷಕರ ಸಂಘದ ಅಧ್ಯಕ್ಷ ಅಂಪಾರು ದಿನಕರ ಶೆಟ್ಟಿ, ನೌಕರರ ಸಂಘದ ತಾಲೂಕು ಅಧ್ಯಕ್ಷ ಬಾಲಕೃಷ್ಣ ಎನ್., ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ತಾಲೂಕು ಅಧ್ಯಕ್ಷ ಆನಂದ ಮಾಳ ಸೇರಿದಂತೆ ಸುಮಾರು 200 ಕ್ಕೂ ಅಧಿಕ ಮಂದಿ ಶಿಕ್ಷಕರು ಸಭೆಯಲ್ಲಿ ಪಾಲ್ಗೊಂಡರು.






















