ಕಟೀಲು ದೇವಸ್ಥಾನದ ಸೇವಾ ದರ ಪರಿಷ್ಕರಣೆಗೂ ಸರಕಾರಕ್ಕೂ ಸಂಬಂಧವಿಲ್ಲ : ಹರಿನಾರಾಯಣ ದಾಸ ಅಸ್ರಣ್ಣ

ಮಂಗಳೂರು : ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೇವೆಗಳ ದರವನ್ನು ಅ. 1ರಿಂದ ಜಾರಿಗೆ ಬರುವಂತೆ ದೇವಸ್ಥಾನದ ಆಡಳಿತ ಮಂಡಳಿ ಪರಿಷ್ಕರಿಸಿದೆ. ಸೇವಾ ದರ ಪರಿಷ್ಕರಣೆಯಲ್ಲಿ ರಾಜ್ಯ ಸರಕಾರ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯರ ಯಾವುದೇ ಪಾತ್ರವಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಅರ್ಚಕ ಹಾಗೂ ಅನುವಂಶಿಕ ಮೊಕ್ತೇಸರ ವಾಸುದೇವ ಅಸ್ರಣ್ಣರ ಸಹೋದರ ಹರಿನಾರಾಯಣ ದಾಸ ಅಸ್ರಣ್ಣ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಅವರು ಕಟೀಲು ದೇವಸ್ಥಾನದ ಸೇವೆಗಳ ದರ ಪರಿಷ್ಕರಣೆ ರಾಜ್ಯ ಸರಕಾರದ ನಿರ್ದೇಶನದಂತೆ ನಡೆದಿದ್ದು, ದೇವಸ್ಥಾನದ ಹಣವನ್ನು ರಾಜ್ಯ ಸರಕಾರ ಗ್ಯಾರಂಟಿಗಳಿಗೆ ಬಳಸುತ್ತಿದೆ ಎಂದು ಸುಳ್ಳು ಸುದ್ದಿ ಪ್ರಚಾರ ಮಾಡುತ್ತಾ, ದೇವಸ್ಥಾನ ಮತ್ತು ರಾಜ್ಯ ಸರಕಾರಕ್ಕೆ ಮಸಿ ಬಳಿಯುವ ಷಡ್ಯಂತ್ರ ರೂಪಿಸಲಾಗಿದೆ. ದೇವಸ್ಥಾನದ ಸೇವೆಗಳ ದರವನ್ನು ಸ್ಥಳೀಯ ಮಾರುಕಟ್ಟೆಯ ದರಕ್ಕೆ ಅನುಗುಣವಾಗಿ ದೇವಸ್ಥಾನದ ಆಡಳಿತ ಮಂಡಳಿ ಪ್ರತೀ ಸಲದಂತೆ ಈ ಬಾರಿಯೂ ಪರಿಷ್ಕರಿಸಿದೆ. ಇದರಲ್ಲಿ ಬೇರೆ ಯಾರದೂ ಪಾತ್ರವಿಲ್ಲ. ಹಾಗಿದ್ದರೂ ಮುಖ್ಯಮಂತ್ರಿಯ ಹೆಸರನ್ನು ತಳಕು ಹಾಕಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಟೀಲು ದೇವಸ್ಥಾನದಲ್ಲಿ ಸಂಗ್ರಹವಾಗುವ ಹಣ ದೇವಸ್ಥಾನದ ಹೆಸರಿನಲ್ಲೇ ಅದರ ಬ್ಯಾಂಕ್ ಖಾತೆಯಲ್ಲೇ ಇರುತ್ತದೆ. ಅದನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತಿದೆ. ಉಳಿಕೆಯಾಗುವ ಮೊತ್ತದ ಶೇ.10ನ್ನು ಧಾರ್ಮಿಕ ದತ್ತಿ ಇಲಾಖೆಗೆ ನೀಡಲಾಗುತ್ತದೆ. ದತ್ತಿ ಇಲಾಖೆಯಿಂದ ಆ ಹಣವನ್ನು ದೇವಸ್ಥಾನ ನೌಕರರ ಮಕ್ಕಳ ವಿದ್ಯಾಭ್ಯಾಸಕ್ಕೆ, ನೌಕರರ ಪಿಂಚಣಿ, ಸಣ್ಣಪುಟ್ಟ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಹೀಗೆ ಒಟ್ಟಾರೆ ಹಿಂದೂ ಧರ್ಮದ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಸರಕಾರದ ಬಳಕೆಗಾಗಲಿ, ಬೇರೆ ಧರ್ಮಗಳ ಅಭಿವೃದ್ಧಿಗಾಗಲಿ ಈ ಹಣ ಬಳಕೆಯಾಗುವುದಿಲ್ಲ ಎಂದು ಹರಿನಾರಾಯಣ ದಾಸ ಅಸ್ರಣ್ಣ ತಿಳಿಸಿದ್ದಾರೆ.

ಕಳೆದ ವರ್ಷ 30 ರೂ.ಗೆ ಸಿಗುತ್ತಿದ್ದ ಎಳನೀರಿಗೆ ಈ ವರ್ಷ 60 ರೂ. ಆಗಿದೆ. ಅದೇ ರೀತಿ ಸ್ಥಳೀಯ ಮಾರುಕಟ್ಟೆ ಯಲ್ಲಿ ಲಭಿಸುವ ಅಗತ್ಯ ವಸ್ತುಗಳ ಬೆಲೆಯೇರಿಕೆಯನ್ನು ಆಧರಿಸಿ ದೇವಳದ ಕೆಲವೊಂದು ಸೇವೆಗಳ ದರವನ್ನು ಪರಿಷ್ಕರಿಸಲಾಗಿದೆ. ಈ ದರ ಪರಿಷ್ಕರಣೆಯಲ್ಲಿ ಸಿದ್ದರಾಮಯ್ಯ ಅಥವಾ ರಾಜ್ಯ ಸರಕಾರ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಈ ರೀತಿ ಸುಳ್ಳು ಅಪವಾದ ಹಾಕುವುದು ಸರಿಯಲ್ಲ. ಇಂತಹ ಹೇಳಿಕೆಯಿಂದ ಕಾನೂನಾತ್ಮಕ ತೊಡಕುಗಳು ಎದುರಾದಲ್ಲಿ ಹೇಳಿಕೆ ನೀಡಿರುವ ವ್ಯಕ್ತಿಗಳೇ ಹೊಣೆಗಾರರು ಹೊರತು ದೇವಸ್ಥಾನವಲ್ಲ ಎಂದು ಹರಿನಾರಾಯಣ ದಾಸ ಅಸ್ರಣ್ಣ ಸ್ಪಷ್ಟಪಡಿಸಿದ್ದಾರೆ.



















































































error: Content is protected !!
Scroll to Top