ಸೆ.5: ಆನೆಗುಂದಿ ಮಹಾಸಂಸ್ಥಾನ ಶ್ರೀ ಸರಸ್ವತೀ ಪೀಠದಲ್ಲಿ ದ್ವಾದಶ ರಾಶಿ ಪೂಜೆ

ಕಾಪು : ಪಡುಕುತ್ಯಾರಿನ ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಶ್ರೀ ಸರಸ್ವತೀ ಪೀಠದಲ್ಲಿ 2025 ಸೆ.5ರ ಸೂರ್ಯೋದಯದಿಂದ 6ರ ಸೂರ್ಯೋದಯದ ತನಕ ದ್ವಾದಶ ರಾಶಿ ಪೂಜೆ ನಡೆಯಲಿದೆ. ಕಟಪಾಡಿಯ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಶ್ರೀ ಸರಸ್ವತೀ ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 21ನೇ ವರುಷದ ವಿಶ್ವಾವಸು ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯ ಪರ್ವಕಾಲದಲ್ಲಿ ಸಂಪನ್ನಗೊಳ್ಳುವ ಕಾರ್ಯಕ್ರಮವು ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠ ಶಾಲೆಯ ಶ್ರೀ ಸರಸ್ವತೀ ಪೂರ್ವಚಾತ್ರ ಸಂಘದ ನೇತೃತ್ವದಲ್ಲಿ ನಡೆಯಲಿದೆ. ಆನೆಗುಂದಿ ಶ್ರೀಗಳವರ ಆಶಯದಂತೆ ಕುಟುಂಬದ ಎಲ್ಲಾ ಸದಸ್ಯರೂ ಭಾಗವಹಿಲು ಅನುಕೂಲವಾಗುವಂತೆ ದ್ವಾದಶ ರಾಶಿ ಪೂಜೆಯಲ್ಲಿ ಎಲ್ಲರಿಗೂ ಉಚಿತವಾಗಿ ಭಾಗವಹಿಸುವ ಅವಕಾಶ ಕಲ್ಪಿಸಲಾಗಿದೆ.

ಸೆ.4ರಂದು ಮುಂಜಾನೆ ಶ್ರೀ ಗುರುಪಾದುಕಾಪೂಜೆ, ದ್ವಾದಶನಾರಿಕೇಳ ಶ್ರೀ ಮಹಾಗಣಪತಿ ಹೋಮ, ವೇದ ಪಾರಾಯಣ, ಮಂಟಪ ಸಂಸ್ಕಾರ ವಾಸ್ತು ಮಂಡಲಪೂಜೆ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಸೆ. 5ರಂದು ಬ್ರಾಹ್ಮೀ ಮುಹೂರ್ತದಲ್ಲಿ ಪೀಠಮಾತೆ ಶ್ರೀ ಮಹಾಸರಸ್ವತಿ ದೇವಿ ಮೂರ್ತಿಯು ಸಕಲ ವೈಭವಗಳೊಂದಿಗೆ ಇಲ್ಲಿನ ಶ್ರೀ ಸರಸ್ವತೀ ಯಾಗಶಾಲೆಯಲ್ಲಿ ವಿಶೇಷವಾಗಿ ನಿರ್ಮಿಸಲಾದ ಶ್ರೀಸರಸ್ವತೀ ಮಂಟಪಕ್ಕೆ ಆಗಮನದೊಂದಿಗೆ ರಾಶಿ ಪೂಜೆ ಆರಂಭಗೊಳ್ಳಲಿದೆ. ಸೆ.5ರಂದು ಬೆಳಗ್ಗೆ ಸಿಂಹ ಲಗ್ನದಲ್ಲಿ ಪ್ರಾರಂಭಗೊಳ್ಳುವ ದ್ವಾದಶ ರಾಶಿ ಪೂಜೆಯು ಸೆ.6 ಬೆಳಗ್ಗೆ ಕರ್ಕಾಟಕ ರಾಶಿಯಲ್ಲಿ ಪೀಠಮಾತೆ ಶ್ರೀ ಮಹಾಸರಸ್ವತಿ ದೇವಿಗೆ ವಿಶೇಷ ರಾಜೋಪಚಾರ ಮಹಾಪೂಜೆ ಬಳಿಕ ಬಲಿ ಉತ್ಸವ, ಅವಭೃತದೊಂದಿಗೆ ಸಮಾಪ್ತಿಗೊಳ್ಳಲಿದೆ. ಪ್ರತಿರಾಶಿಗೆ ಸುಮಾರು 2 ಘಂಟೆಯ ಅವಧಿಯಿದ್ದು, ನಿಗದಿತ ರಾಶಿ ಸಮಯದ ವೇಳೆ 12 ರಾಶಿಗನುಗುಣವಾದ ಬಣ್ಣದ ರಾಶಿ ಮಂಟಪಗಳಲ್ಲಿ ಶ್ರೀ ಮಹಾಸರಸ್ವತೀ ದೇವಿಗೆ ನೈವೇಧ್ಯ, ಭಜನಾ ಸಂಕೀರ್ತನೆ, ಅಷ್ಟಾವಧಾನಸೇವೆ ಸಮರ್ಪಣೆಯಾಗಲಿದೆ. ಭಕ್ತಾದಿಗಳ ರಾಶಿಗನುಗುಣವಾಗಿ ನಿಗದಿತ ಅವಧಿಯಲ್ಲಿ ಭಾಗವಹಿಸಲು ವಿಶೇಷ ಗುರುತುಚೀಟಿ ನೀಡಿ ಸೇವೆಗೆ ಅವಕಾಶಮಾಡಲಾಗುತ್ತದೆ. ದ್ವಾದಶ ರಾಶಿ ಪೂಜೆಯ ಸೇವೆಸಲ್ಲಿಸಿದ ಭಕ್ತಾದಿಗಳಿಗೆ ಆಯಾ ರಾಶಿಪೂಜೆಯ ಪ್ರಸಾದ ನೀಡುವ ವ್ಯವಸ್ಥೆ ಮಾಡಲಾಗಿದೆ. ವಿವಿಧ ಅವಧಿಗಳಲ್ಲಿ ಆಗಮಿಸುವ ಭಕ್ತಾದಿಗಳಿಗೆ ಉಪಹಾರ ಮತ್ತು ಭೋಜನದ ವ್ಯವಸ್ಥೆ ಮಾಡಲಾಗುತ್ತದೆ. ದ್ವಾದಶ ರಾಶಿ ಪೂಜೆಯಲ್ಲಿ ಭಕ್ತಾದಿಗಳಿಗೆ ವಿಶೇಷ ಸೇವೆಗಳು ಹಾಗೂ ದೇಣಿಗೆ ಮತ್ತು ಹಸಿರುವಾಣಿ ಹೊರೆಕಾಣಿಕೆ ಸಮರ್ಪಿಸಲು ಅವಕಾಶವಿದೆ.

ಪರಮಪೂಜ್ಯ ಜಗದ್ಗುರುಗಳವರ ದಿವ್ಯ ಸಾನಿಧ್ಯದಲ್ಲಿ ಸಂಪನ್ನಗೊಳ್ಳುವ ದ್ವಾದಶ ರಾಶಿ ಪೂಜೆಯ ವೇಳೆ ಆಸ್ಥಾನ ವಿದ್ವಾಂಸರಾದ ವೇ. ಬ್ರ. ಮಹಮಹೋಪಾಧ್ಯಾಯ ಪಂಜ ಭಾಸ್ಕರ ಭಟ್, ಜ್ಯೋತಿಷ್ಯ ವಿದ್ವಾನ್‌ ಉಮೇಶ್‌ ಆಚಾರ್ಯ ಪಡೀಲು, ವೈದಿಕ ವಿದ್ವಾಂಸರಾದ ವಿದ್ವಾನ್‌ ಹಿರಣ್ಯ ವೆಂಕಟೇಶ್ವರ ಭಟ್‌, ಬ್ರಹ್ಮಶ್ರೀ ಶ್ರೀಧರ ಶರ್ಮಾ ಕಟಪಾಡಿ, ಬ್ರಹ್ಮಶ್ರೀ ಲಕ್ಷ್ಮೀಕಾಂತ ಶರ್ಮಾ ಬಾರ್ಕೂರು ಸಮಾಜದ ವೈದಿಕ ಬಂಧುಗಳು, ಶ್ರೀಮಠದ ಶ್ರೀಸರಸ್ವತೀ ಪೂರ್ವಚಾತ್ರ ಸಂಘ, ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠ ಶಾಲೆ ವಿದ್ಯಾರ್ಥಿಗಳು ಭಾಗವಹಿಸುವರು.

ಧಾರ್ಮಿಕ ಸಭೆಯಲ್ಲಿ ಪೀಠಾಧೀಶ್ವರರಾದ ಪರಮಪೂಜ್ಯ ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುವರು. ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಹಾಗೂ ಆನೆಗುಂದಿ ಪ್ರತಿಷ್ಠಾನದ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ಸಭೆಯ ಅಧ್ಯಕ್ಷತೆಯನ್ನು ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಬ್ರಿಜೇಶ್‌ ಚೌಟ, ಶಾಸಕ, ದ್ವಾದಶ ರಾಶಿ ಪೂಜೆಯ ಪ್ರಧಾನ ಸಂಯೋಜಕರಾದ ಸುರೇಶ್‌ ಶೆಟ್ಟಿ ಗುರ್ಮೆ, ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಸಚಿವರಾದ ವಿನಯ್‌ ಕುಮಾರ್‌ ಸೊರಕೆ, ಅಭಯಚಂದ್ರ ಜೈನ್‌ ಭಾಗವಹಿಸುವರು. ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ದನ ಆಚಾರ್ಯ, ಸಮಾಜ ಸೇವಕರಾದ ಎಂ. ಮಿಥುನ್‌ ರೈ ಮಂಗಳೂರು, ನವೀನ್‌ ಶೆಟ್ಟಿ ಕುತ್ಯಾರು, ಪ್ರಸಾದ್‌ ಶೆಟ್ಟಿ ಕುತ್ಯಾರು, ಶಿಲ್ಪಾ ಜಿ. ಸುವರ್ಣ ಕಟಪಾಡಿ ಅತಿಥಿಗಳಾಗಿ ಭಾಗವಹಿಸುವರು.

ವಿಶೇಷ ಆಹ್ವಾನಿತರಾಗಿ ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮೂಡಬಿದ್ರೆಯ ಸಂಸ್ಥಾಪಕರು ಮತ್ತು ಆಡಳಿತ ನಿರ್ದೇಶಕರಾದ ಡಾ. ಜಿ. ರಾಮಕೃಷ್ಣ ಆಚಾರ್, ಬೆಂಗಳೂರು ಆನೆಗುಂದಿ ಶಾಖಾ ಮಠ ಸಮಿತಿ ಅಧ್ಯಕ್ಷ, “ಬ್ರಾಹ್ಮರಿ” ಕ್ರಿಯೇಶನ್ಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಸಂಸ್ಥಾಪಕರು ಹಾಗೂ ಆಡಳಿತ ನಿರ್ದೇಶಕರಾದ ಹರಿಶ್ಚಂದ್ರ ಎನ್. ಆಚಾರ್ಯ ಭಾಗವಹಿಸುವರು. ಇದೇ ವೇಳೆ ಚಲನಚಿತ್ರ ನಟರಾದ ಶಶಿರಾಜ್‌ ಆಚಾರ್ಯ ಕುತ್ಯಾರು, ರಾಧಾಕೃಷ್ಣ ಆಚಾರ್ಯ ಕುಂಬಳೆ ಇವರನ್ನು ಅಭಿನಂದಿಸಲಾಗುವುದು.

ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಗೌರವಾಧ್ಯಕ್ಷ ಪಿ.ವಿ ಗಂಗಾಧರ ಆಚಾರ್ಯ ಉಡುಪಿ, ಆನೆಗುಂದಿ ಮೂಲಮಠದ ಅಧ್ಯಕ್ಷ ದಿನೇಶ್‌ ಆಚಾರ್ಯ ಪಡುಬಿದ್ರಿ ಹಾಗೂ ಕಾಸರಗೋಡು, ಅವಿಭಜಿತ ದಕ್ಷಿಣಕನ್ನಡಜಿಲ್ಲೆ, ಮುಂಬಯಿ, ಬೆಂಗಳೂರು, ಹುಬ್ಬಳ್ಳಿ, ಧಾರವಾಡಗಳ ಕಾಳಿಕಾಂಬಾ ದೇವಳಗಳ ಧರ್ಮದರ್ಶಿಗಳು, ಮಹಾಸಂಸ್ಥಾನದ ಸಹಟ್ರಸ್ಟ್‌, ಸಮಿತಿಗಳ ಪದಾಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿರುವರು.

ಪತ್ರಿಕಾಗೋಷ್ಠಿಯಲ್ಲಿ ಆನೆಗುಂದಿ ಶ್ರೀ ಸರಸ್ವತೀ ಎಜ್ಯುಕೇಶನಲ್‌ ಟ್ರಸ್ಟ್‌ ಅಧ್ಯಕ್ಷ ಮತ್ತು ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠ ಶಾಲಾ ಪ್ರಧಾನ ಸಂಚಾಲಕ ಬಿ. ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಶ್ರೀ ಸರಸ್ವತೀ ಪೂರ್ವಛಾತ್ರ ಸಂಘದ ಸಂಚಾಲಕ ಮನೋಜ್‌ ಶರ್ಮಾ, ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರು, ಆನೆಗುಂದಿ ಗುರುಸೇವಾ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಗಣೇಶ್‌ ಆಚಾರ್ಯ ಕೆಮ್ಮಣ್ಣು, ಪ್ರಧಾನ ಕಾರ್ಯದರ್ಶಿ ಲೊಲಾಕ್ಷ ಶರ್ಮ ಕಟಪಾಡಿ, ಸರಸ್ವತೀ ಗೋವು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್, ಅಧ್ಯಕ್ಷ ಬೆಳುವಾಯಿ ಸುಂದರ ಆಚಾರ್ಯ ಮಂಗಳೂರು, ಮಾಧ್ಯಮ ವಿಭಾಗದ ಜಯಕರ ಆಚಾರ್ಯ ಕರಂಬಳ್ಳಿ ಉಪಸ್ಥಿತರಿದ್ದರು.



































































































error: Content is protected !!
Scroll to Top