ನಮ್ಮೂರ ಸಾಧಕರು – ವಿಜೇಂದ್ರ ಪ್ರಭು ಕಾರ್ಕಳ

ಶಿಸ್ತು, ಪ್ರಾಮಾಣಿಕತೆ, ಬದ್ಧತೆ, ಸೃಜನಶೀಲತೆ ಮತ್ತು ದೃಢನಿಶ್ಚಯದೊಂದಿಗೆ ಮಾಡುವ ಕಾಯಕದಲ್ಲಿ ಯಶಸ್ಸು ನಿಶ್ವಿತ. ಇದೇ ಹಾದಿಯಲ್ಲಿ ಸಾಗಿ ಓರ್ವ ಯಶಸ್ವಿ ಉದ್ಯಮಿ ಎನಿಸಿಕೊಂಡವರು ಕಾರ್ಕಳದ ವಿಜೇಂದ್ರ ಪ್ರಭು. ಬೆಂಗಳೂರಿನಲ್ಲಿ ವಿಷನ್ ಡೈಕಾಸ್ಟಿಂಗ್ (ಮುಖ್ಯ ಕಚೇರಿ) ಮತ್ತು ಮಹಾರಾಷ್ಟ್ರದ ಪುಣೆಯಲ್ಲಿ ತಾಯಿ ಹೆಸರಲ್ಲಿ ಜಯಲಕ್ಷ್ಮಿ ಎಂಜಿನಿಯರಿಂಗ್ ಸರ್ವೀಸ್‌ (ಕಾರ್ಪೊರೇಟ್ ಕಚೇರಿ) ಸ್ಥಾಪಿಸಿರುವ ವಿಜೇಂದ್ರ ಪ್ರಭು ನಮ್ಮೂರಿನ ಸಾಧಕರು.

ಎಸ್‌ವಿಟಿಯಲ್ಲಿ ಪ್ರಾಥಮಿಕ, ‍ಶ್ರೀ ಭುವನೇಂದ್ರದಲ್ಲಿ ಪ್ರೌಢ ಹಾಗೂ ಪಿಯುಸಿ ಶಿಕ್ಷಣ ಪಡೆದಿರುವ ವಿಜೇಂದ್ರ ಅವರು ಅನಂತರ ನಿಟ್ಟೆ ಕಾಲೇಜಿನಲ್ಲಿ ಮೆಕ್ಯಾನಿಕಲ್ ಡಿಪ್ಲೊಮಾ ಪೂರೈಸಿದರು. ತದನಂತರ ಪುಣೆಯಲ್ಲಿ ಬಿಇ ವ್ಯಾಸಂಗ ಪೂರ್ಣಗೊಳಿಸಿದರು.

2000ದಿಂದ 2007ರವರೆಗೆ ಜಯಶ್ರೀ ಪಾಲಿಮರ್, ಎಲ್‌ಕೆ ಮೆಷಿನರಿ ಹಾಂಗ್‌ಕಾಂಗ್, SIGMA CORPORATION USA ಮತ್ತು ಕೆನಡಾ ಮೂಲದ ಕಂಪನಿಯಲ್ಲಿ ಕೆಲಸ ಮಾಡಿರುವ ವಿಜೇಂದ್ರ ಅವರು 2002ರಲ್ಲಿ ಸಿಗ್ಮಾ ಗುಣಮಟ್ಟಕ್ಕಾಗಿ ಉತ್ಪಾದನಾ ವಲಯದಲ್ಲಿ ಸ್ಪ್ರಿಟ್ ಆಫ್ ಎಕ್ಸಲೆನ್ಸ್ ಪ್ರಶಸ್ತಿಯನ್ನೂ ಗಳಿಸಿಕೊಂಡವರು.

ಸಂಸ್ಥೆ ಸ್ಥಾಪನೆ
2007ರಲ್ಲಿ ವಿಷನ್ ಡೈಕಾಸ್ಟಿಂಗ್ ಸಂಸ್ಥೆಯನ್ನು ಸ್ಥಾಪಿಸಿದ ವಿಜೇಂದ್ರ ಪ್ರಭು ಅವರು 2014ರಲ್ಲಿ ಜಯಲಕ್ಷ್ಮಿ ಎಂಜಿನಿಯರಿಂಗ್ ಸರ್ವೀಸ್‌ ಸಂಸ್ಥೆ ಕಟ್ಟಿದರು. ಕೋಲ್ಡ್ ಮತ್ತು ಹಾಟ್ ಚೇಂಬರ್ ಡೈಕಾಸ್ಟಿಂಗ್ ಯಂತ್ರಗಳ ಆಮದು ಮತ್ತು ರಫ್ತು ಮಾಡುವಲ್ಲಿ ತೊಡಗಿಸಿಕೊಂಡಿರುವ ಪ್ರಮುಖ ಸಂಸ್ಥೆಗಳಲ್ಲಿ ಇವುಗಳು ಕೂಡ ಸೇರಿವೆ. ಭಾರತದ ವಿವಿಧೆಡೆ ಮಾತ್ರವಲ್ಲದೇ 22 ದೇಶ ಸಂಚರಿಸಿದ್ದಾರೆ ಹಾಗೂ ಭಾರತದಲ್ಲಿ 600ಕ್ಕೂ ಹೆಚ್ಚು ಡೈಕಾಸ್ಟಿಂಗ್ ಘಟಕ ಸ್ಥಾಪಿಸಿದ್ದಾರೆ.

ಗ್ಲೋಬಲ್‌ ಲೀಡರ್‌ಶಿಪ್‌ ಪ್ರಶಸ್ತಿ
ವಿಜೇಂದ್ರ ಅವರ ಕಾರ್ಯವನ್ನು ಗುರುತಿಸಿ ಹತ್ತಾರು ಪ್ರಶಸ್ತಿಗಳು ಅರಸಿ ಬಂದಿವೆ. 2023ರಲ್ಲಿ ದುಬೈನಲ್ಲಿ ನಡೆದ ಸಮಾವೇಶದಲ್ಲಿ ಗ್ಲೋಬಲ್ ಲೀಡರ್‌ಶಿಪ್ ಪ್ರಶಸ್ತಿ, ದೆಹಲಿಯಲ್ಲಿ ಭಾರತ್‌ ಗೌರವ, ಬೆಂಗಳೂರಿನಲ್ಲಿ ವಿಶೇಶ್ವರಯ್ಯ ಪ್ರಶಸ್ತಿ, ಇಂಟರ್‌ನ್ಯಾಶನಲ್‌ ಬಿಸಿನೆಸ್‌ ಎಕ್ಸಲೆನ್ಸ್‌ ಆವಾರ್ಡ್‌, ಡಾಕ್ಟರೇಟ್ ಅವುಗಳಲ್ಲಿ ಪ್ರಮುಖವಾದುವು.

ಐದು ದಿನ ತಂದೆಗೆ ಮೀಸಲು
ತಂದೆ ತಾಯಿ ಕುರಿತು ಅಪಾರ ಭಕ್ತಿ, ಪ್ರೀತಿ, ಗೌರವ ಹೊಂದಿರುವ ವಿಜೇಂದ್ರ ಪ್ರಭು ಅವರು ತಾಯಿಯ ಹೆಸರಲ್ಲಿ ಸಂಸ್ಥೆ ಸ್ಥಾಪಿಸಿರುತ್ತಾರೆ. ದೇವರ ಮೇಲೆ ಅಚಲ ನಂಬಿಕೆ ಹೊಂದಿರುವ ವಿಜೇಂದ್ರ ಪ್ರಭು ತನ್ನ ತಂದೆಯೊಂದಿಗೆ ನಿರಂತರವಾಗಿ ದೇಗುಲ ದರ್ಶನ ಮಾಡುತ್ತಿರುತ್ತಾರೆ. ಭಾರತದ ಬಹುತೇಕ ಎಲ್ಲ ದೇವಸ್ಥಾನಗಳಿಗೆ ತಂದೆಯನ್ನು ಕರೆದುಕೊಂಡು ಹೋಗಿರುತ್ತಾರೆ. ತಂದೆ ಕೂಡ 84ರ ಇಳಿವಯಸ್ಸಿನಲ್ಲೂ ಅತ್ಯಂತ ಉತ್ಸಾಹದಲ್ಲೇ ಮಗನೊಂದಿಗೆ ಪ್ರಯಾಣ ಬೆಳೆಸುತ್ತಾರೆ. ತಾನೋರ್ವ ಉದ್ಯಮಿಯಾಗಿ ಬ್ಯುಸಿ ಶೆಡ್ಯೂಲ್ ಹೊಂದಿರುವ ಹೊರತಾಗಿಯೂ ತಿಂಗಳಿಗೆ 5 ದಿನ ತಂದೆಗೆಂದೇ ಮೀಸಲಿಡುತ್ತಾರೆ. ಹಾಂಗಾಂಗ್‌, ಚೀನಾಗೂ ತಂದೆ ತಾಯಿಯನ್ನು ಸುತ್ತಾಡಿಸಿದ್ದಾರೆ.

ಮರೆಯಲಾಗದ ಕ್ಷಣ
ನಿಟ್ಟೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ಅನಾರೋಗ್ಯಕ್ಕೆ ತುತ್ತಾಗಿದ್ದೆ. ಆರೋಗ್ಯ ತೀವ್ರ ಹದಗೆಟ್ಟು ಜೀವನ್ಮರಣ ಸ್ಥಿತಿಯಲ್ಲಿದ್ದೆ. ಅಂದು ಡಾ. ಎನ್.‌ ಆರ್.‌ ರಾವ್‌ ನನ್ನನ್ನು ಬದುಕಿಸಿದರು. ಅಂದು ವೆಂಕಟರಾಜ್‌, ಶೈಲ ಶೆಟ್ಟಿ, ಚಂದ್ರಕಾಂತ್‌, ದೊಡ್ಡಪ್ಪನ ಮಕ್ಕಳಾದ ಶೇಷಗಿರಿ ಪ್ರಭು, ಸುರೇಶ್‌ ಪ್ರಭು ಮತ್ತು ರಾಧಾಕೃಷ್ಣ ಪ್ರಭು ಹಾಗೂ ನಮ್ಮ ಅಣ್ಣ ನೀಡಿದ ಸಹಕಾರ ಯಾವತ್ತಿಗೂ ಮರೆಯಲ್ಲ. ನನ್ನ ಗುರುಗಳು, ಹಾಸ್ಟೆಲ್‌, ರೋಟರಾಕ್ಟ್ ಸ್ನೇಹಿತರು ನನ್ನ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದ್ದರು. ಆ ಘಟನೆ ನನ್ನ ಜೀವನದಲ್ಲಿ ಮರೆಯಲಾಗದ ಕ್ಷಣ. ಏಕೆಂದರೆ ಅವರೆಲ್ಲರ ಪ್ರಾರ್ಥನೆಗೆ ದೇವರು ಒಲಿದರು. ಅನಾರೋಗ್ಯಕ್ಕೀಡಾದ ಸಂದರ್ಭ ಅಂದುಕೊಂಡೆ, ಬದುಕಿದರೆ ಏನಾದರೂ ಸಾಧಿಸಬೇಕೆಂದು. ದೇವರ ಅನುಗ್ರಹ, ತಂದೆ ತಾಯಿಯ ಆಶೀರ್ವಾದದಿಂದ ಉದ್ಯಮಿಯಾಗಿ ಒಂದಷ್ಟು ಸಾಮಾಜಿಕ ಕಾರ್ಯ ಮಾಡುವಂತಾಗಿದೆ ಎಂದು ವಿನೀತರಾಗಿ ಹೇಳುತ್ತಾರೆ ವಿಜೇಂದ್ರ ಪ್ರಭು.

ಕುಟುಂಬ
ತಂದೆ ಕೆಲ್ಲಪುತ್ತಿಗೆ ರವಳನಾಥ ಪ್ರಭು (ಕಾರ್ಕಳದಲ್ಲಿ ಎಳ್ಳು ಜ್ಯೂಸ್‌ ಪರಿಚಯಿಸಿದವರು). ಪತ್ನಿ ಧನಲಕ್ಷ್ಮೀ. ಪುತ್ರಿ ಸೌಮ್ಯ ಪ್ರಭು 2021ರಲ್ಲಿ ಬಿಡುಗಡೆಗೊಂಡ ಅಕ್ಷಿ ಚಲನಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದರು. ಪುತ್ರ ನಾಗರಾಜ್‌ ಪ್ರಭು ಸ್ನಾತಕೋತ್ತರ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದಾರೆ.

ತನ್ನ ಉದ್ಯಮದ ಲಾಭಾಂಶದಲ್ಲಿ ಒಂದು ಪಾಲನ್ನು ಸಾಮಾಜಿಕ, ಧಾರ್ಮಿಕ ಕಾರ್ಯಗಳಿಗೆ ವಿನಿಯೋಗಿಸಿಕೊಂಡು ಬಂದಿದ್ದಾರೆ ವಿಜೇಂದ್ರ ಪ್ರಭು. ತನ್ನೆಲ್ಲ ಕಾರ್ಯಗಳಿಗೂ ತಾಯಿ ಸ್ಫೂರ್ತಿಯಾಗಿದ್ದಾರೆ. ಆಕೆ ಹೇಳುತ್ತಿದ್ದ ಶ್ರೀರಾಮ, ಕೃಷ್ಣನ ಕಥೆಗಳು ನನ್ನ ಮೇಲೆ ಪ್ರಭಾವ ಬೀರಿದೆ. ವಿದ್ಯಾರ್ಥಿ ದೆಸೆಯಲ್ಲಿ ರೋಟರಾಕ್ಟ್ನಲ್ಲಿ ತೊಡಗಿಸಿಕೊಂಡಿರುವುದು ನನ್ನ ವೃತ್ತಿ ಜೀವನಕ್ಕೆ ಬಹಳಷ್ಟು ನೆರವಾಯಿತು. ರೋಟರಾಕ್ಟ್ ಧ್ಯೆಯವಾಕ್ಯವೇ ನನ್ನ ಬದುಕಿಗೆ ತಿರುವು ನೀಡಿತು ಎನ್ನುವ ವಿಜೇಂದ್ರ ಪ್ರಭು ಅವರು ತಮ್ಮ ಫೀಲ್ಡ್‌ನಲ್ಲಿ ಆಸಕ್ತಿಯಿರುವ ಯುವಕರಿಗೆ ಉಚಿತವಾಗಿ ಮಾರ್ಗದರ್ಶನ ನೀಡುವ ಇರಾದೆಯನ್ನು ಹೊಂದಿದ್ದಾರೆ.



































































































error: Content is protected !!
Scroll to Top