ತಿಮರೋಡಿ ಬಂಧನದ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪ
ಬೆಳ್ತಂಗಡಿ : ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಗಿರೀಶ್ ಮಟ್ಟಣ್ಣವರ್ ಸೇರಿ 30 ಜನರ ಮೇಲೆ ಎಫ್‌ಐಆರ್ ದಾಖಲಾಗಿದೆ.
ಗಿರೀಶ್ ಮಟ್ಟಣ್ಣವರ್ ಕೂಡಾ ಪೊಲೀಸ್ ಅಧಿಕಾರಿಯಾಗಿದ್ದವರು, ನಂತರ ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಾ ಬಂದಿದ್ದರು. ಬೆಳ್ತಂಗಡಿ ಠಾಣೆಯಲ್ಲಿ ಗಿರೀಶ್ ಮಟ್ಟಣ್ಣವರ್ ಮಾನವ ಹಕ್ಕುಗಳ ಹೋರಾಟಗಾರರು ಹಾಗೂ ವಕೀಲರ ಜೊತೆಗೆ ವಿಚಾರಣೆಗೆ ಹಾಜರಾಗಿದ್ದಾರೆ.

ಬೆಳ್ತಂಗಡಿ ಠಾಣೆಯಲ್ಲಿ ಸರ್ವರ್ ಡೌನ್ ಇರುವುದರಿಂದ ಎಫ್ಐಆರ್ ತಡವಾಗ್ತಿದ್ದು, ನೋಟೀಸ್ ಕೊಡುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ. ಬ್ರಹ್ಮಾವರ ಠಾಣೆಯ ಪಿಎಸ್ಐ ನೀಡಿದ ದೂರಿನ ಹಿನ್ನೆಲೆ ಕೇಸ್ ದಾಖಲಾಗಿದೆ.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಮಟ್ಟಣ್ಣವರ್, ನಿನ್ನೆ ಮಹೇಶ್ ಶೆಟ್ಟಿ ತಿಮರೋಡಿಯನ್ನು ಅರೆಸ್ಟ್ ಮಾಡಲು ಪೊಲೀಸರು ಅವರ ಮನೆವರೆಗೆ ಹೋಗುವ ಅವಶ್ಯಕತೆ ಇರಲಿಲ್ಲ, ನಮಗೆ ಜಾರಿಗೊಳಿಸಿದ್ದ ನೋಟೀಸಿಗೆ ಉತ್ತರ ಕೊಡಲೆಂದು ನಾವೆಲ್ಲ ಸೇರಿ ಬ್ರಹ್ಮಾವರ ಪೊಲೀಸ್ ಠಾಣೆಗೆ ಹೋಗುವ ಸಿದ್ಧತೆಯಲ್ಲಿದ್ದಾಗಲೇ ಎರಡು ಜಿಲ್ಲೆಗಳ ಸುಮಾರು 100 ಕ್ಕೂ ಹೆಚ್ಚು ಪೊಲೀಸರು ಬಂದು ತಿಮರೋಡಿಯನ್ನು ಅರೆಸ್ಟ್ ಮಾಡಿದ್ದಾರೆ. ಮಹೇಶ್ ಶೆಟ್ಟಿ ಅವರಿಗೆ ಸಮಯವೂ ಕೊಟ್ಟಿಲ್ಲ. ಬ್ರಹ್ಮಾವರಕ್ಕೆ ಹೊರಟಿದ್ದವರನ್ನು ಅವಕಾಶವೂ ಕೊಡದೆ ಬಂಧನ ಮಾಡಿದ್ದಾರೆ. ಮಹೇಶ್ ಶೆಟ್ಟಿಯವರ ಬಿಪಿ 180 ಇದೆ, ಯಾವ ಕಾರಣಕ್ಕಾಗಿ ಬಂಧನ ಎಂದು ಕೇಳಿದ್ದೇ ತಪ್ಪಾ ? ಎಂದು ಪ್ರಶ್ನಿಸಿದ್ದಾರೆ.
ಇಂದು 30 ಜನರ ಮೇಲೆ ಎಫ್ಐಆರ್ ಹಾಕಿದ್ದಾರೆ. ಪೊಲೀಸರಿಂದ ನಾವು ಓಡಿ ಹೋಗ್ತಿಲ್ಲ. ಬಂಧನ ಮಾಡುವುದಾದರೆ ಮಾಡಲಿ. ಪೊಲೀಸರಿಗೆ ತೊಂದರೆ ಬೇಡ, ಸರ್ಕಾರದ ಪೆಟ್ರೋಲ್, ಡೀಸೆಲ್ ಖರ್ಚಾಗೋದು ಬೇಡ ಅಂತ ನಾವೇ ಪೊಲೀಸ್ ಸ್ಟೇಷನ್ಗೆ ಬಂದಿದ್ದೇವೆ ಎಂದು ಮಟ್ಟಣ್ಣನವರ್ ಹೇಳಿದರು.











