ಲ್ಯಾಂಪ್ಸ್‌ ಸೊಸೈಟಿ ಚುನಾವಣೆಯಲ್ಲಿ ಗೌಪ್ಯತೆ ಕಾಪಾಡದೇ ಅಕ್ರಮ ಎಸಗಲಾಗಿದೆ – ಉದಯ ಕುಮಾರ್‌

ಕಾರ್ಕಳ : ಕಾರ್ಕಳ ಲ್ಯಾಂಪ್ಸ್ ಸೊಸೈಟಿಯ ಅಧ್ಯಕ್ಷ ಚುನಾವಣೆಯಲ್ಲಿ ಗೌಪ್ಯತೆ ಕಾಪಾಡದೆ ಚುನಾವಣಾಧಿಕಾರಿ ಅಕ್ರಮ ಎಸಗಿದ್ದಾರೆ ಎಂದು ಲ್ಯಾಂಪ್ಸ್‌ ಸೊಸೈಟಿ ನಿರ್ದೇಶಕ ಉದಯ ಕುಮಾರ್ ಸಹಕಾರ ಸಂಘಗಳ ಉಪನಿಬಂಧಕರಿಗೆ ದೂರು ಸಲ್ಲಿಸಿದ್ದಾರೆ.
ಕಾರ್ಕಳ ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೊದ್ದೇಶ ಸಹಕಾರ ಸಂಘ ನಿಯಮಿತ (ಲ್ಯಾಂಪ್ಸ್‌) ಅಧ್ಯಕ್ಷ ಸ್ಥಾನದ ಆಯ್ಕೆಯಾಗಿ 2025ರ ಜುಲೈ 28 ರಂದು ಬೆಳಿಗ್ಗೆ 11 ಗಂಟೆಗೆ ಸಂಘದ ಕಚೇರಿಯಲ್ಲಿ ಮತದಾನ ನಡೆದಿದೆ. ಮತದಾನದ ಸಂದರ್ಭದಲ್ಲಿ ಮತಗಟ್ಟೆಯಲ್ಲಿ ಚುನಾವಣಾ ಅಧಿಕಾರಿಗಳಾದ ಕೆ.ಆರ್‌. ರೋಹಿತ್‌ ಅವರು ಮತದಾನದ ಗೌಪ್ಯತೆಯನ್ನು ಕಾಪಾಡಿಕೊಳ್ಳದೆ ಅಕ್ರಮ ಎಸಗಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದವರು ಆರೋಪಿಸಿದ್ದಾರೆ.
ಮತದಾನದ ಪ್ರಕ್ರಿಯೆಯು ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ನಿಗದಿಯಾಗಿದ್ದರೂ ಯಾರಿಗೋ ಅಥವಾ ಯಾರದೋ ನಿರ್ದೇಶನಕ್ಕೆ ಕಾದು ಕುಳಿತಂತೆ ಮತದಾನವನ್ನು ತಡವಾಗಿ ಆರಂಭಿಸಲಾಗಿದೆ. ಮತಗಟ್ಟೆಯಲ್ಲಿ ನಿರ್ದೇಶಕರು ಹಾಗೂ ಅಧಿಕಾರಿಗಳು ಅಧ್ಯಕ್ಷ ಸ್ಥಾನದ ಉಮೇದುವಾರರನ್ನು ಪ್ರೇರೇಪಿಸುವುದು, ಮೊಬೈಲ್‌ಗಳಲ್ಲಿ ಮತದಾನದ ಪ್ರಕ್ರಿಯೆಯನ್ನು ಚಿತ್ರೀಕರಿಸುವುದು, ಕೆಲವು ನಿರ್ದೇಶಕರ ಮತ ಯಾರಿಗೆ ಹಾಕಲಾಗಿದೆ ಎಂಬ ಮತಪತ್ರವನ್ನು ಸಹ ಮೊಬೈಲ್‌ ಗಳಲ್ಲಿ ಸೆರೆ ಹಿಡಿಯಲಾಗಿದೆ.
ಅಧ್ಯಕ್ಷ ಸ್ಥಾನದ ಆಯ್ಕೆಗಾಗಿ ಈ ಹಿಂದೆ ನಡೆದ ಚುನಾವಣೆಯು ಪಾರದರ್ಶಕವಾಗಿ ನಡೆಸಿಲ್ಲ ಎಂಬ ಕಾರಣಕ್ಕಾಗಿ ನಿರ್ದೇಶಕರುಗಳ ಆಗ್ರಹದಂತೆ ಜು. 28ರಂದು ಮರು ಮತದಾನ ಪ್ರಕ್ರಿಯೆ ನಡೆದರೂ ಕೂಡ ಚುನಾವಣೆಯ ಗೌಪ್ಯತೆಯನ್ನು ಕಾಪಾಡಿಲ್ಲ. ಇಂತಹ ಚುನಾವಣಾ ಪ್ರಕ್ರಿಯೆಯು ಪ್ರಜಾಪ್ರಭುತ್ವಕ್ಕೆ ಮಾರಕ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಉದಯ ಕುಮಾರ್ ಅವರು ಸಹಕಾರ ಸಂಘಗಳ ಉಪನಿಬಂಧಕರಿಗೆ ನೀಡಿದ ದೂರಿನಲ್ಲಿ ಆಗ್ರಹಿಸಿದ್ದಾರೆ.



































































































error: Content is protected !!
Scroll to Top