ದಾಸಸಾಹಿತ್ಯದ ನಿಜಾರ್ಥದ ರಾಯಭಾರಿ – ವಿದ್ಯಾಭೂಷಣ

ಕರ್ನಾಟಕ ಸಂಗೀತದ ಮೂಲಕ ದಾಸರ ಪದಗಳನ್ನು ತುಂಬಾ ಶ್ರೀಮಂತಗೊಳಿಸಿದ ಹಲವು ಗಾಯಕರು ಕನ್ನಡ ನಾಡನ್ನು ಭಾರೀ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಆ ಯಾದಿಯಲ್ಲಿ ಶಿರೋಭೂಷಣವಾದ ಒಂದು ಹೆಸರು ಡಾಕ್ಟರ್ ವಿದ್ಯಾಭೂಷಣ ಎಂದರೆ ಅದನ್ನು ಎಲ್ಲರೂ ಒಪ್ಪುತ್ತಾರೆ. ತಮ್ಮ ಜೀವನದ ಐವತ್ತು ದೀರ್ಘ ವರ್ಷಗಳನ್ನು ಸಂಗೀತಕ್ಕೆ ಮುಡಿಪಾಗಿ ಇಟ್ಟ ಅವರ ಬಗ್ಗೆ ಒಂದು ಪುಸ್ತಕವನ್ನೇ ಬರೆಯುವಷ್ಟು ಮಾಹಿತಿಗಳನ್ನು ಹರವಿಟ್ಟು ಈ ಲೇಖನ ನಾನು ಬರೆಯಬೇಕು.

ಉಡುಪಿ ಮಾಧ್ವ ಪರಂಪರೆಯ ಹಿನ್ನೆಲೆ
1952ರ ಜುಲೈ 10ರಂದು ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ ವಿದ್ಯಾಭೂಷಣರ ತಂದೆ ಗೋವಿಂದಾಚಾರ್ಯ ಅವರೇ ಮಗನ ಮೊದಲ ಸಂಗೀತ ಗುರುವಾದರು. ಬಾಲ್ಯದಲ್ಲಿಯೇ ದೇವರ ನಾಮಗಳನ್ನು ಸುಶ್ರಾವ್ಯವಾಗಿ ಹುಡುಗ ಹಾಡುವಾಗ ಉಡುಪಿಯ ಸ್ವಾಮಿಗಳು ಕರೆದು ಮೆಚ್ಚುಗೆ ಸೂಚಿಸಿದ ಹಲವು ಘಟನೆಗಳು ಇವೆ. ಮುಂದೆ ಸಂಗೀತದ ಅನ್ವೇಷಣೆಗಾಗಿ ಬಿ. ವಿ. ನಾರಾಯಣ ಐತಾಳ್ ಅವರಿಂದ ಸಂಗೀತದ ಪಾಠ ಮುಂದುವರೆಯಿತು. ಮುಂದೆ ಅವರ ಸಂಗೀತದ ಅಪ್ಪಟ ಪ್ರತಿಭೆಗೆ ಸಾಣೆ ಹಿಡಿದವರು ಮಹಾ ಗುರುಗಳಾದ ಕಲಾನಿಧಿ ಆರ್. ಕೆ. ಶ್ರೀಕಂಠನ್ ಮತ್ತು ಚೆನ್ನೈಯ ಟಿ. ವಿ. ಗೋಪಾಲಕೃಷ್ಣನ್. ಗುರುಗಳ ಪಾದಮೂಲದಲ್ಲಿ ಕುಳಿತು ಕರ್ನಾಟಕ ಸಂಗೀತವನ್ನು ತಲಸ್ಪರ್ಶಿಯಾಗಿ ಕಲಿತು ಸ್ವರ ಶುದ್ಧತೆ, ಸಂಚಾರಗಳು, ಸಂಗೀತ ಸಂಯೋಜನೆ ಎಲ್ಲವನ್ನೂ ಕಲಿತು ಪುಟವಿಟ್ಟ ಚಿನ್ನದಂತೆ ಅವರು ಮೂಡಿಬಂದರು. ಗುರುಕುಲ ಪರಂಪರೆಯಲ್ಲಿ ಅವರು ಕಲಿತ ಕಾರಣ ಶುದ್ಧ ಸಂಗೀತವನ್ನು ಆರಾಧನೆ ಮಾಡಲು ಅವರಿಗೆ ಸಾಧ್ಯವಾಯಿತು.

ಸುಬ್ರಹ್ಮಣ್ಯ ಮಠದ ಸ್ವಾಮಿಯಾಗಿ ಆಯ್ಕೆ
ಬಾಲ್ಯದಲ್ಲಿಯೇ ಅವರನ್ನು ಸುಬ್ರಹ್ಮಣ್ಯ ಮಠದ ಸ್ವಾಮೀಜಿಯಾಗಿ ಆರಿಸಲಾಯಿತು. ಬಾಲಸನ್ಯಾಸಿಯಾಗಿ ಒಂದೆಡೆ ಆಧ್ಯಾತ್ಮದ ಶೋಧ, ಇನ್ನೊಂದೆಡೆ ಸಂಗೀತದ ಅಧ್ಯಯನ ಎರಡನ್ನೂ ವಿದ್ಯಾಭೂಷಣರು ಸಮದೂಗಿಸಿಕೊಂಡು ಹೋದರು. ವೇದಿಕೆಗಳಲ್ಲಿ ಸಂಗೀತದ ಕಛೇರಿಗಳನ್ನು, ದಾಸವಾಣಿಯ ಕಾರ್ಯಕ್ರಮಗಳನ್ನು ಕೊಡಲು ಅವರು ಆಗಲೆ ಆರಂಭ ಮಾಡಿದ್ದರು. ಆಗ ಅವರನ್ನು ಹಾಡುವ ಸ್ವಾಮೀಜಿ ಎಂದು ಕನ್ನಡ ನಾಡು ಕರೆಯಿತು. ಆಗ ಅವರ ಗುರುಗಳಾದ ಟಿ. ವಿ. ಜಿ. ಎಂದೇ ಖ್ಯಾತರಾದ ಗೋಪಾಲಕೃಷ್ಣನ್ ಅವರು ಸಂಗೀತ ಸಂಯೋಜನೆ ಮಾಡಿದ ಭಕ್ತಿ ಸಂಗೀತದ ಹಾಡುಗಳು ತುಂಬಾ ಜನಪ್ರಿಯ ಆದವು. ನಮ್ಮಮ್ಮ ಶಾರದೆ, ಕಟಿಯಲ್ಲಿ ಕರವಿಟ್ಟನು, ಮಧುಕರ ವೃತ್ತಿ ಎನ್ನದು, ಪಿಲ್ಲಂಗೋವಿಯ ಚೆಲುವ ಕೃಷ್ಣನ…ಮೊದಲಾದ ಹಾಡುಗಳು ಕನ್ನಡಿಗರ ಮನೆಮಾತಾದ ದಿನಗಳವು. ಆಗ ಅವರ ಅನೇಕ ಆರಂಭಿಕ ಸಂಗೀತದ ಕಾರ್ಯಕ್ರಮಗಳನ್ನು ನಾನು ಮುಂದೆ ಕೂತು ವೀಕ್ಷಣೆ ಮಾಡಿದ್ದೆ. ಅನೇಕ ಕಛೇರಿಗಳಿಗೆ ಮೃದಂಗ ಸಾಥಿ ಅವರ ಗುರುಗಳಾದ ಟಿವಿಜಿ ಅವರೇ ಕೊಡುತ್ತಿದ್ದರು. ದಾಸರ ಪದಗಳ ದಾಸವಾಣಿ ಜನಪ್ರಿಯ ಆದಂತೆ ಕರ್ನಾಟಕ ಸಂಗೀತದ ಕಛೇರಿಗಳನ್ನು ಕಡಿಮೆ ಮಾಡಿ ಅವರು ದಾಸಸಾಹಿತ್ಯದಲ್ಲಿ ಮುಳುಗಿಬಿಟ್ಟರು ಮತ್ತು ಮುಂದೆ ಪುರಂದರದಾಸರೇ ಆಗಿ ಹೋದರು.

ಸಂಗೀತದ ಶೋಧನೆಗೆ ಪೀಠತ್ಯಾಗ
ತಮ್ಮ 25 ವರ್ಷಗಳ ಸನ್ಯಾಸಕ್ಕೆ ಅವರು ವಿದಾಯವನ್ನು ಹೇಳುವ ಅನಿವಾರ್ಯತೆಯು 1997ರಲ್ಲಿ ಒದಗಿಬಂತು. ಅವರ ಸಂಗೀತವನ್ನು ಆರಾಧನೆ ಮಾಡಿಕೊಂಡು ಬಂದ ಬಳ್ಳಾರಿಯ ರಮಾ ಎಂಬ ವಕೀಲೆಯ ಪ್ರೀತಿಗೆ ಅವರು ಶರಣಾದರು. ಸನ್ಯಾಸವನ್ನು ತೊರೆದು ಗೃಹಸ್ಥಾಶ್ರಮಕ್ಕೆ ಅವರು ಕಾಲಿಟ್ಟರು. ಸಂಗೀತಕ್ಕಾಗಿ ಬದುಕನ್ನು ಸಮರ್ಪಣೆ ಮಾಡಲು ನಿರ್ಧಾರ ಮಾಡಿದರು. 46 ವರ್ಷ ಪ್ರಾಯದ ವಿರಕ್ತ ಸನ್ಯಾಸಿಯು 23 ವರ್ಷದ ರಮಾ ಅವರನ್ನು ಮದುವೆಯಾದಾಗ ತೀವ್ರ ಸಂಪ್ರದಾಯಸ್ಥ ಸಮಾಜದಲ್ಲಿ ಸಣ್ಣ ಭೂಕಂಪವೇ ಆಯಿತು! ಆದರೆ ವಿದ್ಯಾಭೂಷಣರು ಮುಂದೆ ಹೋಗಬೇಕಾದ ದಾರಿಯು ಅವರಿಗೆ ಚೆನ್ನಾಗಿ ಗೊತ್ತಿತ್ತು. ಎರಡು ಕಾರಣಕ್ಕೆ ನಾನು ಇಲ್ಲಿ ಅವರನ್ನು ಅಭಿನಂದಿಸಬೇಕು. ಒಂದು ಅವರು ಸುಬ್ರಹ್ಮಣ್ಯ ಮಠದಿಂದ ಅವರು ಹೊರಬರುವಾಗ ಒಂದು ರೂಪಾಯಿ ಕೂಡ ಅಲ್ಲಿಂದ ತಾರದೇ ಬರಿಗೈಯ್ಯಿಂದ ಹೊರಬಂದದ್ದು! ಇನ್ನೊಂದು ರಮಾ ಅವರ ಪ್ರೇರಣೆ ಪಡೆದು ಮುಂದೆ ಸಂಗೀತವನ್ನು ಗೆಲ್ಲಿಸುತ್ತಾ ಹೋದದ್ದು! ರಮಾ ಅವರು ತನ್ನ ಪತಿಯ ಎಲ್ಲ ಸಂಗೀತದ ಕಾರ್ಯಕ್ರಮಗಳಿಗೆ ಮೊದಲ ಸಾಲಿನ ಪ್ರೇಕ್ಷಕರಾಗಿ ಕೂತು ಗಂಡನನ್ನು ಪ್ರೋತ್ಸಾಹಿಸಿದ ಕ್ಷಣಗಳನ್ನು ಮರೆಯಲು ಸಾಧ್ಯವೇ ಇಲ್ಲ.

ಅಲ್ಲಿಗೆ ಗೊಡ್ಡು ಸಂಪ್ರದಾಯವು ಸೋತಿತು. ಶುದ್ಧ ಸಂಗೀತವು ಗೆದ್ದಿತು.

ಐವತ್ತು ವರ್ಷಗಳ ಬಿಡುವಿಲ್ಲದ ಸಂಗೀತ ಯಾತ್ರೆ
ವಿದ್ಯಾಭೂಷಣರು ಈ ಐವತ್ತು ವರ್ಷಗಳ ಅವಧಿಯಲ್ಲಿ ದಾಸ ಸಾಹಿತ್ಯವನ್ನು ಅದೆಷ್ಟು ಜನಪ್ರಿಯ ಮಾಡಿದರೆಂದರೆ ಕನ್ನಡಿಗರ ಮನೆಮನೆಗಳಲ್ಲಿ ಅವರ ಹಾಡುಗಳು ನಿತ್ಯ ಭಜನೆಯ ಹಾಡುಗಳಾದವು. ದೇವಸ್ಥಾನಗಳ ಜನಪ್ರಿಯವಾದ ಕ್ಯಾಸೆಟ್, ಆಲ್ಬಂ, ಡಿವಿಡಿಗಳಾದವು. ಭಜನಾ ಮಂಡಳಿಗಳ ವೇದಿಕೆಗಳನ್ನು ಅಲಂಕರಿಸಿದವು. ಭಕ್ತಿ ಸಂಗೀತದ ಆಭರಣಗಳಾದವು. ಆಧ್ಯಾತ್ಮದ ಜಿಜ್ಞಾಸುಗಳಿಗೆ ಆತ್ಮಶೋಧನೆಯ ದಾರಿಗಳಾದವು. ದಾಸ ಸಾಹಿತ್ಯದಲ್ಲಿ ಇಷ್ಟೊಂದು ಶ್ರೀಮಂತಿಕೆ ಇದೆಯಾ? ಎಂಬ ನಮ್ಮ, ನಿಮ್ಮೆಲ್ಲರ ಬೆರಗಿಗೆ ಕಾರಣವಾದವು. ಪುರಂದರ ದಾಸರ, ಕನಕದಾಸರ, ವಿಜಯ ವಿಠ್ಠಲದಾಸರ, ಮಹೀಪತಿದಾಸರ, ಗುರು ಜಗನ್ನಾಥದಾಸರ, ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಸಾವಿರಾರು ಹಾಡುಗಳು, ಉಗಾಭೋಗಗಳು, ಶೋಭಾನೆಯ ಹಾಡುಗಳು ವಿದ್ಯಾಭೂಷಣರ ಧ್ವನಿಯಲ್ಲಿ ಹೊಸಹುಟ್ಟು ಪಡೆದವು. ಆಚಾರ್ಯ ಮಧ್ವರ ಕೃತಿಗಳು, ಭಗವದ್ಗೀತೆ, ಹನುಮಾನ್ ಚಾಲೀಸಾ, ರಾಮರಕ್ಷಾ ಸ್ತೋತ್ರಗಳು, ಮಂಗಲಾಷ್ಟಕ, ಗಣಪತಿ ಸಹಸ್ರನಾಮ, ಧನ್ವಂತರಿ ಸ್ತೋತ್ರ, ಸುಮಧ್ವ ವಿಜಯ ಕೃತಿ, ದೇವಿಯ ಹಾಡುಗಳು, ವಿಷ್ಣು ಸಹಸ್ರನಾಮ…..
ಇವುಗಳೆಲ್ಲವೂ ಅನನ್ಯವಾಗಿ ಮೂಡಿಬಂದವು.

ವಿದ್ಯಾಭೂಷಣರ ದಾಸವಾಣಿಯ ಜನಪ್ರಿಯತೆ
ಅವರ ಸಾವಿರಾರು ದಾಸವಾಣಿಯ ಕಾರ್ಯಕ್ರಮಗಳು ಭಾರತದ ಮೂಲೆಮೂಲೆಗಳಲ್ಲಿ, ನಾಡಿನ ಎಲ್ಲೆಡೆಗಳಲ್ಲಿ, ಜಾಗತಿಕ ವೇದಿಕೆಗಳಲ್ಲಿ ಮೂಡಿಬಂದು ಜನಪ್ರಿಯವಾದವು. ಕನ್ನಡ,ತುಳು, ಹಿಂದಿ, ಮರಾಠಿ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅವರ ಮಾಧುರ್ಯಪೂರ್ಣವಾದ ಧ್ವನಿಯಲ್ಲಿ ಸಾವಿರಾರು ಹಾಡುಗಳು ಕೋಟಿ ಕೋಟಿ ಅಭಿಮಾನಿಗಳನ್ನು ತಲುಪಿದವು.

ಅವರ ಇನ್ನೂರಕ್ಕೂ ಹೆಚ್ಚು ಕ್ಯಾಸೆಟ್, ಆಲ್ಬಮ್, ಡಿವಿಡಿಗಳು ಈಗಾಗಲೇ ಬಿಡುಗಡೆಯಾಗಿವೆ ಮತ್ತು ಎಲ್ಲವೂ ಅತ್ಯಂತ ಜನಪ್ರಿಯವಾಗಿವೆ. ಹಲವು ಮರಾಠಿ ಅಭಂಗಗಳು ಅವರ ಗಾಯನದ ವೇದಿಕೆಗಳಲ್ಲಿ ಕನ್ನಡಕ್ಕೆ ಅನುವಾದವಾಗಿ ಅನುರಣನ ಆಗುತ್ತವೆ. ಅವರ ಗಾಯನದಲ್ಲಿ ಕೇವಲ ಶುದ್ದರಾಗಗಳು ವಿಜೃಂಭಿಸುತ್ತವೆ. ಶುದ್ಧ ಸಾಹಿತ್ಯದ, ಸ್ಪಷ್ಟ ಉಚ್ಚಾರದ ಮೆರವಣಿಗೆ ಇರುತ್ತದೆ. ಎಲ್ಲ ಅಹಂಗಳನ್ನು ದೇವರ ಪಾದಮೂಲಗಳಲ್ಲಿ ಇರಿಸಿ ಹಾಡುವ ನಿರಹಂಕಾರದ ಮನೋವೃತ್ತಿ ಇರುತ್ತದೆ. ಶ್ವೇತವರ್ಣದ ದಿರಿಸು, ಹಣೆಯಲ್ಲಿ ಎದ್ದು ಕಾಣುವ ನಾಮ ಧರಿಸಿ ಪದ್ಮಾಸನದಲ್ಲಿ ಕುಳಿತು ಅವರು ಹಾಡಲು ತೊಡಗಿದರೆ ವೇದಿಕೆ ವೈಕುಂಠ, ಪಂಡರಾಪುರ ಎಲ್ಲವೂ ಆಗುತ್ತವೆ. ಅದು ವಿದ್ಯಾಭೂಷಣರ ಸಂಗೀತದ ಶಕ್ತಿ. ಗಣಪತಿ, ಶಾರದೆ, ಲಕ್ಷ್ಮಿ, ಕೃಷ್ಣ, ವಿಠ್ಠಲ, ಈಶ್ವರ, ಪಾರ್ವತಿ, ಸುಬ್ರಹ್ಮಣ್ಯ, ಹನುಮಂತ, ರಾಘವೇಂದ್ರ ಸ್ವಾಮಿ, ವೆಂಕಟರಮಣ, ಸತ್ಯನಾರಾಯಣ ಸ್ವಾಮಿ, ರಾಮಚಂದ್ರ ಮೊದಲಾದ ಎಲ್ಲ ದೇವರ ಹಾಡುಗಳನ್ನೂ ವಿದ್ಯಾಭೂಷಣರು ಹಾಡಿದ್ದಾರೆ ಮತ್ತು ಜನಪ್ರಿಯಗೊಳಿಸಿದ್ದಾರೆ. ಈಗ ಸಾಂಕ್ರಾಮಿಕವಾಗಿರುವ ದಾಸರ ಪದಗಳನ್ನು ಸಿನೆಮಾ ಟ್ಯೂನಗಳಲ್ಲಿ ಹಾಡುವ ನವ್ಯ ಸಂಗೀತವನ್ನು ಧಿಕ್ಕರಿಸಿ ಅವರು ಇಂದಿಗೂ ಶುದ್ಧ ಸಂಗೀತವನ್ನೇ ಪೋಷಣೆ ಮಾಡಿಕೊಂಡು ಬಂದಿದ್ದಾರೆ. ವೇದಿಕೆಗಳಲ್ಲಿ ಕೂಡ ಅವರು ಯಾವುದೇ ಗಿಮಿಕ್ ಮಾಡಲು ಹೋಗದೆ, ಚಪ್ಪಾಳೆಗಳಿಗೆ ಹಾತೊರೆಯದೆ ಕಣ್ಣು ಮುಚ್ಚಿ ಸಂಗೀತವನ್ನು ಆವಾಹನೆ ಮಾಡಿಕೊಂಡು ಹಾಡುತ್ತಾರೆ. ನಮ್ಮನ್ನು ಸಂಗೀತ ಶರಧಿಯಲ್ಲಿ ಮುಳುಗಿಸುತ್ತಾರೆ.

ಸಂಗೀತ ವಿದ್ಯಾನಿಧಿ – ಇದು ಅನ್ವರ್ಥ ನಾಮ
ಇದು ಅವರಿಗೆ ಅಭಿಮಾನಿಗಳು ಕೊಟ್ಟ ಬಿರುದು. ಭಕ್ತಿ ಭಾರತೀ ಪ್ರತಿಷ್ಠಾನ ಅವರೇ ಹುಟ್ಟುಹಾಕಿದ ಸಂಸ್ಥೆ. ನೆನಪೇ ಸಂಗೀತ ಅವರ ಆತ್ಮಚರಿತ್ರೆಯ ಪುಸ್ತಕ. ಅದನ್ನು ಓರ್ವ ಸಂಗೀತದ ವಿದ್ಯಾರ್ಥಿಯಾಗಿ ನಾನು ಓದುತ್ತಾ ಹೋದಂತೆ ವಿದ್ಯಾಭೂಷಣರ ವಿರಾಟ್ ರೂಪ ಕಣ್ಣಮುಂದೆ ಬರುತ್ತದೆ.

ಕಳೆದ ವರ್ಷ ಪುರಂದರದಾಸರ ಜೀವನದ ಆಧಾರಿತವಾದ ‘ಹರಿದಾಸರ ದಿನಚರಿ’ ಕನ್ನಡ ಸಿನೆಮಾದಲ್ಲಿ ಅವರು ಪುರಂದರ ದಾಸರ ಪಾತ್ರವನ್ನು ಅದ್ಭುತವಾಗಿ ನಿರ್ವಹಣೆ ಮಾಡಿದ್ದಾರೆ. ಪುರಂದರ ದಾಸರೇ ಆಗಿದ್ದಾರೆ! ಅವರ ಮಗಳು ಮೇಧಾ ವಿದ್ಯಾಭೂಷಣ ಅವರು ಶಾಸ್ತ್ರೀಯ ಸಂಗೀತವನ್ನು ಆಳವಾಗಿ ಅಧ್ಯಯನ ಮಾಡಿ ತಂದೆಯ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅದ್ಭುತವಾಗಿ ಹಾಡುತ್ತಾರೆ. ಮಗ ಅನಿರುದ್ಧ ಇಂಜಿನಿಯರಿಂಗ್ ಓದಿ ಒಳ್ಳೆಯ ವರ್ಲ್ಡ್ ಲೈಫ್ ಫೋಟೋಗ್ರಾಫರ್ ಆಗಿ ಜನಪ್ರಿಯರಾಗಿದ್ದಾರೆ.

ಗಾಯನ ಯಾನದ ಸುವರ್ಣ ಮಹೋತ್ಸವ ಬೆಂಗಳೂರಿನಲ್ಲಿ
ಡಾಕ್ಟರ್ ವಿದ್ಯಾಭೂಷಣ ಅವರ ಗಾಯನ ಯಾನದ ಐವತ್ತನೇ ವರ್ಷವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲು ಬೆಂಗಳೂರಿನಲ್ಲಿ ವೇದಿಕೆಯೊಂದು ಸಿದ್ಧವಾಗಿದೆ. ಕುಂದಾಪ್ರ ಕನ್ನಡದ ಮಹಾ ಉತ್ಸವದ ಪ್ರದಾನ ವೇದಿಕೆಯಲ್ಲಿ ಈ ಆದಿತ್ಯವಾರ (ಜುಲೈ 27ರಂದು) ಬೆಳಿಗ್ಗೆ ಹತ್ತಾರು ಸಿತಾರ್ ಕಲಾವಿದರ ಹಿನ್ನೆಲೆಯ ಸಂಗೀತದ ಸಿಂಪೋನಿ ಕಾರ್ಯಕ್ರಮದಲ್ಲಿ ಅವರು ಮೊದಲ ಬಾರಿಗೆ ಹಾಡಲಿದ್ದಾರೆ. ಅಲ್ಲಿ ಮತ್ತೆ ಶುದ್ಧ ಸಂಗೀತ ಮತ್ತು ದಾಸರ ಪದಗಳು ಆವಿರ್ಭಾವ ಆಗಲಿವೆ ಅನ್ನುವುದು ಒಂದು ಅದ್ಭುತವಾದ ನಿರೀಕ್ಷೆ. ಇಡೀ ಕರ್ನಾಟಕದ ಸಂಗೀತ ಪ್ರೇಮಿಗಳು ಅವರ ಈ ಕಾರ್ಯಕ್ರಮಕ್ಕಾಗಿ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಅಲ್ಲಿ ಕೂಡ ಖಂಡಿತವಾಗಿ ಮೊದಲ ಸಾಲಿನಲ್ಲಿ ರಮಾ ವಿದ್ಯಾಭೂಷಣ ಇರುತ್ತಾರೆ.

ಅವರ ಜನಪ್ರಿಯ 25 ಹಾಡುಗಳು.
ಅವರ ಸಾವಿರಾರು ದಾಸರ ಪದಗಳಲ್ಲಿ ಕೆಲವೇ ಹಾಡುಗಳನ್ನು ಆರಿಸುವುದು ಸುಲಭದ ಮಾತಲ್ಲ. ಆದರೆ ನಾನು ತುಂಬಾ ಇಷ್ಟಪಟ್ಟ ಅವರ 25 ಹಾಡುಗಳನ್ನು ಇಲ್ಲಿ ಸಮರ್ಪಣೆ ಮಾಡಿ ಅವರನ್ನು ಅಭಿನಂದಿಸಬೇಕು. ಅವರ ಪಾದಸ್ಪರ್ಷ ಮಾಡಬೇಕು.

1) ನಮ್ಮಮ್ಮ ಶಾರದೆ.
2) ಮಧುಕರ ವೃತ್ತಿ ಎನ್ನದು.
3) ಈ ಪರಿಯ ಸೊಬಗಾವ ದೇವರಲೂ ನಾ ಕಾಣೆ.
4) ಕೃಷ್ಣ ನೀ ಬೇಗನೇ ಬಾರೋ.
5) ಎಷ್ಟು ದಿನ ಈ ವೈಕುಂಠ.
6) ಕಟಿಯಲ್ಲಿ ಕರವಿಟ್ಟನೋ.
7) ಇಂದು ಎನಗೆ ಗೋವಿಂದ.
8) ಭಾಗ್ಯದ ಲಕ್ಷ್ಮಿ ಬಾರಮ್ಮ.
9) ದಾಸರೆಂದರೆ ಪುರಂದರ ದಾಸರಯ್ಯ.
10) ಪವಮಾನ ಪವಮಾನ ಜಗದ ಪ್ರಾಣ.
11) ಹನುಮನ ಮತವೆ ರಾಮನ ಮತವು.
12) ಎಷ್ಟು ಸಾಹಸವಂತ.
13) ರಾಮನಾಮ ಪಾಯಸಕ್ಕೆ ವಿಠಲನಾಮ ಸಕ್ಕರೆ.
14) ತಂಬೂರಿ ಮೀಟಿದವ.
15) ಇಂದು ಎನಗೆ ಗೋವಿಂದ.
16) ವೆಂಕಟಾಚಲ ನಿಲಯಂ
17) ಹರಿ ಕುಣಿದ ನಮ್ಮ ಹರಿ ಕುಣಿದ.
18) ಕಂಡೆ ಕರುಣಾನಿಧಿಯ
19) ಮರೆತೆ ಏನೋ ರಂಗ.
20) ಮರಳು ಮಾಡಿಕೊಂಡೆ.
21) ಎಂಚಿತ್ತಿ ಮಗನ ಪಡೆಯೋಳು ಪಾರ್ವತಿ.
22) ವಂದಿಸುವುದಾದಿಯಲಿ ಗಣನಾಥನ.
23) ತೂಗೀರೆ ರಂಗನ.
24) ಕಲ್ಯಾಣಮ್ ತುಳಸಿ
ಕಲ್ಯಾಣಮ್.
25) ತುಂಗಾತೀರದಿ ನಿಂತ ಸುಯತಿವರ.

ಡಾಕ್ಟರ್ ವಿದ್ಯಾಭೂಷಣರು ಕನ್ನಡ ನಾಡಿನ, ಕರ್ನಾಟಕ ಸಂಗೀತದ, ದಾಸ ಸಾಹಿತ್ಯದ ಬಹು ದೊಡ್ಡ ಆಸ್ತಿ ಅನ್ನುವುದೇ ಇಂದಿನ ಭರತ ವಾಕ್ಯ.































































































error: Content is protected !!
Scroll to Top