ಆಡಳಿತದಲ್ಲಿ ಕನ್ನಡ ಭಾಷೆ ಪ್ರತಿಶತಃ ನೂರರಷ್ಟು ಅನುಷ್ಠಾನವಾಗಬೇಕು : ಡಾ. ಪುರುಷೋತ್ತಮ ಬಿಳಿಮಲೆ

ಉಡುಪಿ : ಜಿಲ್ಲೆಯ ಆಡಳಿತದಲ್ಲಿ ಕನ್ನಡ ಭಾಷೆಯು ಪ್ರತಿಶತಃ ನೂರರಷ್ಟು ಅನುಷ್ಠಾನವಾಗಬೇಕು. ಕನ್ನಡ ಭಾಷೆಯ ಬಳಕೆ ನಿರಂತರವಾಗಿರಲು ಕನ್ನಡ ಭಾಷೆ ಪರಿಣಾಮಕಾರಿ ಪ್ರಚಲಿತದಲ್ಲಿರಲು ಒತ್ತು ನೀಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಕರೆ ನೀಡಿದರು.
ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕನ್ನಡ ಭಾಷೆಗೆ ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇಂತಹ ಭಾಷೆ ಉಳಿವಿಗಾಗಿ ಹೆಚ್ಚು ಸಂವೇದನಾಶೀಲತೆಯಿಂದ ಅಧಿಕಾರಿಗಳು ಕೆಲಸ ಮಾಡಬೇಕು. ಸರಕಾರ ಕನ್ನಡ ಭಾಷೆ ಅನುಷ್ಠಾನಕ್ಕೆ ಅನೇಕ ಆದೇಶ ಹೊರಡಿಸಿದೆ. ಇದು ಸಮರ್ಪಕವಾಗಿ ಕಾರ್ಯಗತವಾಗಬೇಕು. ಕನ್ನಡ ಭಾಷೆಯನ್ನು ಆಡಳಿತದಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು.

ಜಿಲ್ಲಾಡಳಿತ ಕನ್ನಡ ಪರ ಸಂಘಟನೆಗಳೊಂದಿಗೆ ಕನಿಷ್ಠ ಮೂರು ತಿಂಗಳಿಗೊಮ್ಮೆಯಾದರೂ ಸಭೆ ನಡೆಸುವುದರೊಂದಿಗೆ ಕನ್ನಡ ಭಾಷಾ ಅನುಷ್ಠಾನದ ಸಮಸ್ಯೆಗಳ ಕುರಿತು ಚರ್ಚಿಸಿ, ಕಾನೂನಾತ್ಮಕವಾಗಿ ಕನ್ನಡ ಅನುಷ್ಠಾನಕ್ಕೆ ಒತ್ತು ನೀಡಬೇಕು ಎಂದ ಅವರು, ಕನ್ನಡ ಭಾಷೆಯ ಪರ ಕಾನೂನಾತ್ಮಕವಾಗಿ ಹೋರಾಟ ನಡೆಸಿದ ಕನ್ನಡ ಪರ ಹೋರಾಟ ಸಂಘಟನೆಗಳ ಸದಸ್ಯರುಗಳ ಮೇಲೆ ಹಾಕಿರುವ ಪ್ರಕರಣಗಳನ್ನು ಸರಕಾರ ವಾಪಾಸ್ ಪಡೆಯಲು ಸರಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಬೇಕು ಎಂದರು.

ಕನ್ನಡ ಕಲಿಕಾ ಕೇಂದ್ರ
ಜಿಲ್ಲೆಯಲ್ಲಿ ಶಿಕ್ಷಣ ಸೇರಿದಂತೆ ಉದ್ಯೋಗ ಅರಸಿ ಬಂದ ಹೊರ ರಾಜ್ಯದ ಕನ್ನಡಯೇತರಿಗೆ ಕನ್ನಡ ಕಲಿಯಲು ಉತ್ಸುಕರಾಗಿದ್ದರೆ 20 ಜನ ಮೇಲ್ಪಟ್ಟಿದ್ದಲ್ಲಿ ಕನ್ನಡ ಪ್ರಾಧಿಕಾರದ ವತಿಯಿಂದ ಕಲಿಕಾ ಕೇಂದ್ರಗಳನ್ನು ತೆರೆದು ಕನ್ನಡವನ್ನು ಕಲಿಸಿ ಕೊಡುವ ಕಾರ್ಯ ಮಾಡಲಾಗುವುದು ಎಂದ ಅವರು, ಜಿಲ್ಲಾ ತರಬೇತಿ ಕೇಂದ್ರಗಳು ಕ್ರಿಯಾಶೀಲವಾಗಿ ಕಾರ್ಯಚಟುವಟಿಕೆ ನಡೆಸುವುದರೊಂದಿಗೆ ಕನ್ನಡ ಅನುಷ್ಠಾನಕ್ಕೆ ಮುಂದಾಗಬೇಕು ಎಂದರು.

ನಾಮಫಲಕ ಕಡ್ಡಾಯ
ಜಿಲ್ಲೆಯಲ್ಲಿರುವ ಮಲ್ಪೆ ಬೀಚ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಾಶಸ್ತ್ಯ ದೊರೆತಿದ್ದರೂ ವಾಣಿಜ್ಯ ಕಟ್ಟಡಗಳ ನಾಮಫಲಕಗಳು ಕನ್ನಡ ಭಾಷೆಯಲ್ಲಿ ಇರುವುದಿಲ್ಲ. ಈ ಬಗ್ಗೆ ಸ್ಥಳೀಯ ಸಂಸ್ಥೆಗಳು ಹಾಗೂ ಪ್ರವಾಸೋದ್ಯಮ ಇಲಾಖೆಯವರು ನಿಯಮಾನುಸಾರ ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕಗಳನ್ನು ಅಳವಡಿಸಲು ಕ್ರಮ ವಹಿಸಬೇಕು ಎಂದ ಅವರು, ಐತಿಹಾಸಿಕ ಪ್ರಸಿದ್ದ ತಾಣಗಳ ಸವಿವರವನ್ನು ಕನ್ನಡ ಭಾಷೆಯಲ್ಲಿ ಪ್ರದರ್ಶಿಸುವ ಕೆಲಸವಾಗಬೇಕು ಎಂದರು.

ಜಿಲ್ಲೆಯ ವಾಣಿಜ್ಯ ಕೇಂದ್ರಗಳು ಹಾಗೂ ಕೈಗಾರಿಕಾ ಕೇಂದ್ರಗಳ ಮುಂಭಾಗದ ನಾಮಫಲಕದಲ್ಲಿ ಶೇ. 60 ರಷ್ಟು ಕನ್ನಡ ಭಾಷೆಯಲ್ಲಿ ಹಾಗೂ ಶೇ. 40 ರಷ್ಟು ಇತರೆ ಭಾಷೆಯಲ್ಲಿ ಅಳವಡಿಸಲು ಕ್ರಮವಹಿಸಬೇಕು. ಪರವಾನಿಗೆ ನೀಡುವ ಸಂದರ್ಭದಲ್ಲಿಯೇ ಅವರುಗಳಿಂದ ಛಾಯಾಚಿತ್ರಗಳನ್ನು ಪಡೆದುಕೊಂಡು ವೀಕ್ಷಿಸಿ, ಅನಂತರ ಅನುಮತಿ ನೀಡಬೇಕು. ಇವುಗಳ ಜೊತೆಯಲ್ಲಿ ಆಗಿಂದಾಗ್ಗೆ ಪರಿಶೀಲನೆ ಮಾಡಲು ಕ್ರಮವಹಿಸಬೇಕು ಎಂದರು.

ಕೆಲವು ಪ್ರಾಥಮಿಕ ಶಾಲಾ ಮಕ್ಕಳಿಗೆ ಕನ್ನಡ ಭಾಷೆಯ ಅಕ್ಷರಗಳನ್ನು ಗುರುತಿಸುವ ಪರಿಸ್ಥಿತಿಯಲ್ಲಿ ಇಲ್ಲ. ಶಿಕ್ಷಕರು ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕಲಿಸುವ ಕಾರ್ಯ ಆಗಬೇಕು. ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಯ ಕನ್ನಡ ಭಾಷಾ ಪರೀಕ್ಷೆಯಲ್ಲಿ ಹೆಚ್ಚಿನ ಭಾಗ ಉತ್ತೀರ್ಣರಾಗಿರುತ್ತಾರೆ. ಆದರೆ ಕೆಲವೇ ವಿದ್ಯಾರ್ಥಿಗಳು ತಮ್ಮ ಮಾತೃಭಾಷೆ ಕನ್ನಡ ವಾಗಿದ್ದರೂ ಸಹ ಅನುತ್ತೀರ್ಣವಾಗಿರುತ್ತಾರೆ. ಇದಕ್ಕೆ ಕಾರಣವನ್ನು ಕಂಡುಕೊಳ್ಳಬೇಕಿದೆ ಎಂದರು.

ಆಸ್ಪತ್ರೆಗಳಲ್ಲಿ ಮರಣೋತ್ತರ ಪರೀಕ್ಷೆಯ ವರದಿಗಳು ಅದಷ್ಟು ಕನ್ನಡದಲ್ಲಿಯೇ ಇರುವ ಹಾಗೆ ಕ್ರಮವಹಿಸಬೇಕು. ಕಡ್ಡಾಯವಾಗಿ ರೋಗಿಗಳ ಹೆಸರನ್ನು ಕನ್ನಡದಲ್ಲಿಯೇ ನಮೂದು ಮಾಡಬೇಕು. ವೈದ್ಯರುಗಳು ಸಹ ಕನ್ನಡ ಭಾಷಾಭಿಮಾನವನ್ನು ಬೆಳೆಸಿಕೊಳ್ಳುಬೇಕು ಎಂದರು.
ಕಾರ್ಯಪಾಲಕ ಅಭಿಯಂತರರ ಕಚೇರಿಯಿಂದ ಅಭಿವೃದ್ಧಿ ಕಾಮಗಾರಿಗಳ ಟೆಂಡರ್, ನೋಟಿಫಿಕೇಶನ್ ಗಳನ್ನು ಕನ್ನಡದಲ್ಲಿಯೆ ಕರೆಯುವುದರೊಂದಿಗೆ ಕಾರ್ಯಾದೇಶವನ್ನು ಕನ್ನಡ ಭಾಷೆಯಲ್ಲಿಯೇ ನೀಡಬೇಕು. ಮುಂದಿನ ದಿನಗಳಲ್ಲಿ ಕನ್ನಡಿಗರಿಗೆ ಟೆಂಡರ್ ಕಾರ್ಯಾದೇಶವನ್ನು ನೀಡಿದ್ದಲ್ಲಿ ಅವರು ಸ್ಥಳೀಯ ಕನ್ನಡಿಗರಿಗೆ ಉದ್ಯೊಗ ಅವಕಾಶಗಳು ಹೆಚ್ಚು ಇರುತ್ತದೆ. ಇದಕ್ಕೆ ಒತ್ತು ನೀಡಬೇಕು ಎಂದರು.

ಬ್ಯಾಂಕುಗಳಲ್ಲಿ ಕಡ್ಡಾಯವಾಗಿ ಸ್ಥಳೀಯ ಭಾಷೆಯನ್ನು ಮಾತನಾಡುವವರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವುದು ಒಳಿತು. ಇದರಿಂದ ಸ್ಥಳೀಯ ಜನರು ದೈನಂದಿನ ಬ್ಯಾಂಕಿಂಗ್ ವ್ಯವಹಾರಗಳನ್ನು ಸರಳವಾಗಿ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಈ ಬಗ್ಗೆ ಜಿಲ್ಲೆಯ ಅಗ್ರಗಣ್ಯ ಬ್ಯಾಂಕ್ ಸಭೆಯನ್ನು ಕರೆದು, ಬ್ಯಾಂಕುಗಳಿಗೆ ಸೂಚನೆಯನ್ನು ನೀಡುವ ಕಾರ್ಯವಾಗಬೇಕೆಂದರು.

ಈ ಹಿಂದೆ ಶಾಲೆಗಳ ನಿರ್ಮಾಣಕ್ಕಾಗಿ ಅನೇಕ ದಾನಿಗಳು 5-10 ಎಕರೆವರೆಗೆ ಜಮೀನುಗಳನ್ನು ದಾನವಾಗಿ ನೀಡಿದ್ದು, ಅವುಗಳಲ್ಲಿ ಶಾಲಾ ಕಟ್ಟಡಗಳ ನಿರ್ಮಾಣವಾಗಿ ಕಳೆದ 35-40 ವರ್ಷಗಳಿಂದ ಬಳಕೆ ಮಾಡಿಕೊಳ್ಳಲಾಗಿದೆ. ಆದರೆ, ಕೆಲವು ಕನ್ನಡ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದಾಗಿ ನಿಂತು ಹೋಗಿವೆ. ಶಾಲೆಗೆ ಸಂಬಂಧಿಸಿದ ಜಾಗವನ್ನು ಜನಸಾಮಾನ್ಯರು ಒತ್ತುವರಿ ಮಾಡಿಕೊಳ್ಳಲು ಮುಂದಾಗುತ್ತಾರೆ. ಆದ್ದರಿಂದ ದಾನದಿಂದ ಪಡೆದ ಭೂಮಿಯ ದಾಖಲಾತಿಗಳನ್ನು ಸರಕಾರದ ಹೆಸರಿಗೆ ಮಾಡಿಕೊಳ್ಳಬೇಕು. ಜಿಲ್ಲೆಯಲ್ಲಿ 8 ಶಾಲೆಗಳ ದಾಖಲೆಗಳು ಸಮರ್ಪಕವಾಗಿ ಆಗದೇ ಇರುವುದು ಕಂಡುಬಂದಿದೆ. ಸೂಕ್ತ ಅಧಿಕೃತ ದಾಖಲಾತಿಗಳನ್ನು ಜಿಲ್ಲಾ ಅಡಳಿತದಿಂದ ಮಾಡಿಕೊಳ್ಳಲು ಕ್ರಮವಹಿಸಬೇಕು ಎಂದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿ, ಜಿಲ್ಲೆಯ ಆಡಳಿತದಲ್ಲಿ ಕನ್ನಡ ಅನುಷ್ಠಾನ ಸಮರ್ಪಕವಾಗಿ ಆಗುತ್ತಿದೆ. ಜಿಲ್ಲೆಯಲ್ಲಿ ನಡೆಸುವ ಕೆ.ಡಿ.ಪಿ. ಸಭೆಗಳಲ್ಲಿ ಕನ್ನಡ ಭಾಷೆಯ ಅನುಷ್ಠಾನ ಸಮಸ್ಯೆಯ ಕುರಿತು ಪ್ರಥಮ ಪ್ರಾಶಸ್ತ್ಯದ ಆದ್ಯತೆ ನೀಡಲಾಗುವುದು. ಕನ್ನಡ ಭಾಷೆಯನ್ನು ಆಡಳಿತದಲ್ಲಿ ನಿಷ್ಠೆಯಿಂದ ಮಾಡಲು ಪ್ರತಿಯೊಬ್ಬ ಅಧಿಕಾರಿಗಳು ಮುಂದಾಗೋಣ ಎಂದ ಅವರು, ಇಂದಿನ ಸಭೆಯಲ್ಲಿ ನೀಡಿದ ಸಲಹೆ ಸೂಚನೆಗಳನ್ನು ಪಾಲಿಸುವುದರೊಂದಿಗೆ ಕನ್ನಡ ಭಾಷೆಗೆ ಮತ್ತಷ್ಟು ಒತ್ತು ನೀಡೋಣ ಎಂದರು.

ಸಭೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ್ ಹಾನ್‌ಗಲ್, ಸದಸ್ಯರಾದ ಯಾಕೂಬ್ ಖಾದರ್ ಗುಲ್ವಾಡಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಆಪ್ತ ಕಾರ್ಯದರ್ಶಿ ಫಣಿ ಕುಮಾರ್, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.



































































































error: Content is protected !!
Scroll to Top